Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra
Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra

Vijaya Bharathi

Abstract Thriller Others


3  

Vijaya Bharathi

Abstract Thriller Others


ಕಾಡಿನ ಬೆಳಕು

ಕಾಡಿನ ಬೆಳಕು

3 mins 171 3 mins 171

ಕಾಲೇಜ್ ಗೆ ಒಟ್ಟಿಗೆ ನಾಲ್ಕು ದಿನಗಳು ರಜ ದೊರೆತಾಗ ಅವನು ತನ್ನ ಗೆಳೆಯರೊಂದಿಗೆ ದಾಂಡೇಲಿ ಅಭಯಾರಣ್ಯ ಕ್ಕೆ ಹೊರಟ. ಐದಾರು ಜನರು ಸೇರಿ ಹೊರಟಿದ್ದ ಆ ಗೆಳೆಯರ ತಂಡ, ಒಂದು ದಿನ ಗೇಮ್ ಸೆಂಚುರಿ ಗೆ ಹೊರಟರು. ಫಾರೆಸ್ಟ್ ಜೀಪ್ ನಲ್ಲಿ ಕಾಡಿನ ಒಳಗೆ ಹೋದ ಆ ಗೆಳೆಯರು, ಒಂದು ಜಾಗದಲ್ಲಿ ಸುತ್ತಲ ಪ್ರಕೃತಿಯ ವೀಕ್ಷಣೆ ಗೆ ಇಳಿದರು. ಒಂದು ಕಲ್ಲಿನ‌ ಮಂಟಪದಲ್ಲಿ ನಿಂತು ಸೂರ್ಯಾಸ್ತವನ್ನು ವೀಕ್ಷಿಸಿದ ಅವರು, ಮಂಟಪದಿಂದ ಕೆಳಗಿಳಿದು ಸ್ವಲ್ಪ ದೂರ‌ ಕಾಡಿನಲ್ಲಿ ಅಡ್ಡಾಡಿ ಕೊಂಡು ಬರಲು ಹೊರಟಾಗ,ಅವನು ತನ್ನ ಗೆಳೆಯರ ಗುಂಪಿನಿಂದ

ಬೇರೆಯಾಗಿ ಬಿಟ್ಟ.ಮತ್ತೆ ಬಂದ ಜಾಗಕ್ಕೆ ಹಿಂತಿರುಗಲು ದಾರಿ ಕಾಣದೆ ಕಾಡಿನ ಒಳಗೆ ‌ಮುಂದೆ ನಡೆಯುತ್ತಾ ನಡೆಯುತ್ತಾ ಸಾಗಿದಾಗ, ಅವನಿಗೆ ದಾರಿ ತಪ್ಪಿ ಹೋಯಿತು.

ಅವನನ್ನು ಹೊರಗಡೆಯಿಂದ‌ ಹುಡುಕಿ ಹುಡುಕಿ

ಸಾಕಾಗಿ ಪೋಲೀಸ್ ಕಂಪ್ಲೆಂಟ್ ಕೊಡಲು,ಅವನ ಗೆಳೆಯರ ತಂಡ ಹೊರಟಿತು. ಅವನು ಒಬ್ಬಂಟಿಯಾಗಿ ದಾರಿ ಕಾಣದೆ ಪರದಾಡತೊಡಗಿದ.

ಸುತ್ತಲೂ ಕಾರ್ಗತ್ತಲು . ಒಂಟಿಯಾಗಿ ದಟ್ಟವಾದ ಅರಣ್ಯದಲ್ಲಿ ದಾರಿ ಮಾಡಿಕೊಂಡು ಮೆಲ್ಲಗೆ ಹೆಜ್ಜೆ ಇಡುತ್ತಾ ಅತ್ತ ಇತ್ತ ಕಣ್ಣು ಹಾಯಿಸುತ್ತಾ ಹೋಗುತ್ತಿದ್ದಾನೆ . ಮೊಬೈಲ್ ನಿಂದ ತನ್ನ ಗೆಳೆಯರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರೆ, ಮೊಬೈಲ್ ನೆಟ್ವರ್ಕ್ ಸಿಗುತ್ತಿಲ್ಲ. ತರಗೆಲೆಯ ಮೇಲೆ ನಡೆಯುವ ಇವನ ಹೆಜ್ಜೆ ಯ ಸಪ್ಪಳ ಇವನನ್ನೇ ಹೆದರಿಸುತ್ತಿದೆ. ನಾನು ಹೇಗೆ ಈ ದಟ್ಟಡವಿಯೊಳಗೆ ದಾರಿ ತಪ್ಪಿ ಬಂದೆ ? ಎಂದು ಪ್ರತಿಕ್ಷಣವೂ ಪರಿತಪಿಸುತ್ತ ಕಾಲುದಾರಿಯಲ್ಲಿ ಸಾಗುತ್ತಿದ್ದಾನೆ. ದಾಂಡೇಲಿಯ ದಟ್ಟಾರಣ್ಯದಲ್ಲಿ ತಪ್ಪಿಸಿಕೊಂಡರೆ ದಾರಿ ಹುಡುಕುವುದೂ ಕಷ್ಟ ಎಂದು ಸ್ಥಳೀಯರು ಹೇಳಿದ್ದು ಅವನಿಗೆ ನೆನಪಾಗಿ,ಮತ್ತೂ ಹೆದರುತ್ತಿದ್ದಾನೆ. ಮುತ್ಸಂಜೆಯ ಮಬ್ಬುಗತ್ತಲು ಮುಗಿದಾಗ ಸುತ್ತಲೂ ಕಾರ್ಗತ್ತಲು ಕವಿದು ,ಅವನ ಎದೆಯ ಬಡಿತ ಹೆಚ್ಚಾಯಿತು.ಹತ್ತಿರದಲ್ಲೇ ನರಿಯು ಊಳಿಡುವ, ಹುಲಿಯ ಗರ್ಜನೆ,ಸಿಂಹದ ಆರ್ಭಟ ಗಳ ಶಬ್ದ ಗಳನ್ನು ಕೇಳಿಬಿಟ್ಟಾಗಲಂತೂ ಅವನ ಮೈ ಚಿಲ್ಲನೆ ಬೆವರಿ ನೀರಿಳಿಯತೊಡಗಿತು. ಸುತ್ತಲೂ ದಟ್ಟ ಕತ್ತಲು. ಮುಂದೆ ಹೆಜ್ಜೆ ಇಡಲೂ ಭಯ, ಹಿಂದೆ ಹೆಜ್ಜೆ ಇಡಲೂ ಭಯ. ಕಡೆಗೆ ಕತ್ತಲಲ್ಲೇ ಒಂದೇ ಒಂದು ಸಣ್ಣ ಬೆಳಕಿನ ಕಿಡಿಗಾಗಿ ಕಣ್ಣು ದೊಡ್ಡ ದಾಗಿಸಿ ಸುತ್ತಲೂ ನೋಡುತ್ತಾನೆ. ದಟ್ಟವಾದ ಮರಗಳ ಸಂಧಿಯಿಂದ ಕಾಣುವ ನಕ್ಷತ್ರ ಗಳ ಬೆಳಕನ್ನು ಬಿಟ್ಟರೆ ಏನೂ ಕಾಣುತ್ತಿಲ್ಲ. ಮೊಬೈಲ್ ನಲ್ಲಿ ಚಾರ್ಜ್ ಕಡಿಮೆಯಾಗುತ್ತಾ ಅಲ್ಲಿಯೂ ಬ್ಯಾಟರಿ ಆಫ್ ಆದಾಗ ಅವನಿಗೆ ಮುಂದೆ ಸಾಗಲು ಯಾವ ದಾರಿಯೂ ಕಾಣದಂತಹ ಪರಿಸ್ಥಿತಿ.ಜೊತೆಗೆ ಇದ್ದಕ್ಕಿದ್ದಂತೆ ಗಾಳಿಯು ವೇಗವಾಗಿ ಬೀಸಿ, ಮಿಂಚು ಗುಡುಗು ಗಳು ಪ್ರಾರಂಭವಾದಾಗ ಅವನು,ತಾನು ಬದುಕುಳಿಯುವ ಭರವಸೆಯನ್ನೇ ಕಳೆದುಕೊಂಡು ಒಂದು ದೊಡ್ಡ ಮರವನ್ನು ಆಧರಿಸಿ ಕಣ್ಣು ಮುಚ್ಚಿ ಕುಳಿತ. ಹಲವು ದೇವರುಗಳನ್ನು ಬೇಡಿಕೊಳ್ಳುತ್ತಾ ಹರಕೆ ಹೊತ್ತು ಕುಳಿತ.

ಸ್ವಲ್ಪ ಸಮಯದ ನಂತರ ಆ ದಟ್ಟವಾದ ಕಾಡಿನಲ್ಲಿ ಇದ್ದಕ್ಕಿದ್ದಂತೆ ದೂರದಲ್ಲಿ ಮನುಷ್ಯರ ಹೆಜ್ಜೆ ಯ ಶಬ್ದಗಳು ಕೇಳಿಬರತೊಡಗಿದಾಗ,ಅವನ ಮನಸ್ಸಿನಲ್ಲಿ ಸಣ್ಣ ಭರವಸೆ ಮೂಡತೊಡಗಿತು. ಯಾರಾದರೂ ಬರಲಿ ಅವರ ಜೊತೆ ತಾನೂ ಸಹ ಹೆಜ್ಜೆ ಹಾಕುತ್ತಾ ಯಾವುದಾದರೊಂದು ಊರನ್ನು ಸೇರಿಕೊಂಡು ಬಿಡಬೇಕು ಎಂದು ಅವನ ಯೋಚಿಸುತ್ತಾ ಕುಳಿತಾಗ,ಅವನ ಮನದಲ್ಲಿ ಭರವಸೆ ಮಿಂಚಿ ಮಾಯವಾಯಿತು.

ದೂರದಲ್ಲಿ ಕೇಳುತ್ತಾ ಇದ್ದ ಜನರ ನಡಿಗೆಯ ಶಬ್ದ ತನ್ನ ಹತ್ತಿರ ಹತ್ತಿರದಲ್ಲೇ ಕೇಳಲು ಪ್ರಾರಂಭವಾದಾಗ,ಅವನ ಮನದಲ್ಲಿ ಹೊಸ ಆಶಾಕಿರಣ ಮೂಡತೊಡಗಿತು.

ಕಡೆಗೂ ನಾಲ್ಕೈದು ಜನರು ಅವನ ಹತ್ತಿರ ಹತ್ತಿರ ವೇ ಬಂದಾಗ, ಅವರೊಡನೆ ಹೋಗುವುದಕ್ಕೆ ಇವನು ಎದ್ದು ನಿಂತ. ಇದ್ದಕ್ಕಿದ್ದಂತೆ ಲಾಂದ್ರದ ಬೆಳಕು ದಟ್ಟ ಕತ್ತಲನ್ನು ಸೀಳಿಕೊಂಡು ಬಂದಾಗ, ಆ ಭರವಸೆಯ ಬೆಳಕನ್ನು ನೋಡಿ ಅವನ ಧೈರ್ಯ ಹಾಗೂ ಭರವಸೆ ಹೆಚ್ಚಾಯಿತು.

ಆ ನಾಲ್ಕು ಜನರು ಇವನ ಹತ್ತಿರಕ್ಕೆ ಬಂದಾಗ, ಅವನ ಸಂತೋಷ ಹೇಳತೀರದಾಯಿತು.ಕರಿ ಕಂಬಳಿಗಳನ್ನು ಹೊದ್ದುಕೊಂಡು, ಒಂದು ಕೈಯ್ಯಲ್ಲಿ ದೊಡ್ಡ ದೊಣ್ಣೆಹಿಡಿದು, ಮತ್ತೊಂದು ಕೈ ಲಿ ಲಾಂದ್ರ ಹಿಡಿದು ಕೊಂಡಿದ್ದ ಅವರನ್ನು ನೋಡಿ,

"ಅಣ್ಣಾ ನಾನು ಈ ಗೊಂಡಾರಣ್ಯದಲ್ಲಿ ದಾರಿತಪ್ಪಿ ಸಿಕ್ಕಿಹಾಕಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಬಿಡಿ"

"ನೀನು ಹೇಗೆ ಇಲ್ಲಿ ಗೆ ಬಂದಿದೆಯೋ?"ಅವರಲ್ಲಿ ಒಬ್ಬ ಗುಡುಗಿದ್ದ.

"ನಾನು ನನ್ನ ಗೆಳೆಯರೊಂದಿಗೆ ಈ ಕಾಡನ್ನು ನೋಡಲು ಬಂದೆವು. ನಾನೊಬ್ಬ ದಾರಿ ತಪ್ಪಿಸಿಕೊಂಡು ಇಲ್ಲಿಯವರೆಗೂ ಬಂದು ಬಿಟ್ಟೆ. ಈಗ ಮತ್ತೆ ಹೋಗಲು ನನಗೆ ಗೊತ್ತಾಗುತ್ತಿಲ್ಲ. ಪ್ಲೀಸ್ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ."ಒಂದೇ ಸಮನೆ ಅವನು ಗೋಗರಿಯುತ್ತಿರುವುದನ್ನು ಕಂಡ ಆ ನಾಲ್ಕು ಜನರೂ

ಅವನ ಮೇಲೆ ದಯೆ ತೋರಿ ಅವನನ್ನು ತಮ್ಮ ಲಾಂದ್ರದ‌ ಬೆಳಕಿನಡಿಯಲ್ಲಿ ಕರೆದುಕೊಂಡು ನಡೆದರು. ಅವನಿಗೆ ಆ ನಾಲ್ಕು ಜನರೂ ಭರವಸೆಯ ಬೆಳಕಾದರು.

ಸುಮಾರು ಒಂದು ಘಂಟೆಯ ಕಾಲು ನಡಿಗೆ ಮುಗಿದು ಊರಿನ ವಿದ್ಯುದ್ದೀಪಗಳು ಕಾಣಲು ಶುರುವಾದಾಗ, ಅವನು 'ಬದುಕಿದೆಯಾ ಬಡಜೀವವೇ'ಎಂದು ಕೊಳ್ಳುತ್ತಾ ಹತ್ತಿರದ ಊರನ್ನು ತಲುಪಿದ. ತನ್ನನ್ನು ಕಾಡಿನಿಂದ ನಾಡಿಗೆ ಕರೆತಂದ ತನ್ನ ಆ ನಾಲ್ಕು ಜನ ಭರವಸೆಯ ಬೆಳಕಿಗೆ ಧನ್ಯವಾದಗಳನ್ನು ಹೇಳಿ, ಎಲ್ಲರಿಗೂ ಭಕ್ಷೀಸು ಕೊಟ್ಟು ,ಅಲ್ಲಿಯೇ ಹತ್ತಿರದಲ್ಲಿದ್ದ ಸಣ್ಣ ಪೆಟ್ಟಿಗೆ ಅಂಗಡಿಗೆ ಹೋಗಿ ,ಅಲ್ಲಿನ ಲ್ಯಾಂಡ್ ಲೈನ್ ಮೂಲಕ ತನ್ನ ಗೆಳೆಯರನ್ನು ಸಂಪರ್ಕಿಸಿ,ಅವರಿರುವ ಜಾಗಕ್ಕೆ ಹೋಗಿ ಸೇರಿದ.


Rate this content
Log in

More kannada story from Vijaya Bharathi

Similar kannada story from Abstract