ಇವನು ಇನಿಯನಲ್ಲ
ಇವನು ಇನಿಯನಲ್ಲ
ಕೂಲಿ ಕೆಲಸ ಮಾಡುತ್ತಿದ್ದ ಮಂಗಳ ಪ್ರಕಾಶ್ ದಂಪತಿಗಳ ಮಗ ತುಷಾರ್. ಒಬ್ಬನೇ ಮಗ ಬಹಳ ಮುದ್ದಿನಿಂದ ಸಾಕಿದ್ದರು. ತಾವು ಕೂಲಿ ಮಾಡಿದರೂ ಸಹ ಮಗ ಕೇಳಿದ್ದನ್ನು ಕೊಡಿಸಲು ಎಷ್ಟೇ ಕಷ್ಟವಾದರೂ ಕೊಡಿಸುತ್ತಿದ್ದರು. ಹೊರಗಿನ ಪ್ರಪಂಚವನ್ನೇ ನೋಡದ ಮಂಗಳ ಪ್ರಕಾಶ್ ದಂಪತಿಗಳಿಗೆ ಮಗನೇ ದೊಡ್ಡ ಪ್ರಪಂಚವಾಗಿದ್ದನು. ಮಗನೂ ಕೂಡ ಮನೆಯ ಪರಿಸ್ಥಿತಿ ಅರಿತಿದ್ದರಿಂದ ಅಪ್ಪ ಅಮ್ಮನ ಕನಸನ್ನು ತಾನು ಈಡೇರಿಸಬೇಕೆಂದು ಹಗಲು ರಾತ್ರಿ ಕಷ್ಟ ಪಟ್ಟು ಓದುತ್ತಿದ್ದನು. ಅದರ ಫಲವಾಗಿ ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದಾಗ ಶಾಲಾ ಗುರು ವೃಂದದವರು ಅಭಿನಂದಿಸಿ ಸನ್ಮಾನಿಸಿದರು. ಇದೆ ರೀತಿ ಮುಂದೆ ಪಿ. ಯು. ಸಿ. ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿ ಕೀರ್ತಿ ಗಳಿಸಿದನು.
ಇನ್ನು ಅಪ್ಪ ಅಮ್ಮನ ಆಸೆಯಂತೆ ಮೆಡಿಕಲ್ ಮಾಡುವ ಆಸೆ ಇದ್ದುದರಿಂದ ಆ ಹಾದಿಯನ್ನೇ ಆಯ್ಕೆ ಮಾಡಿಕೊಂಡು ಸರಕಾರಿ ಸೀಟು ಲಭಿಸಿ ಉನ್ನತ ವ್ಯಾಸಂಗಕ್ಕೆ ಪಟ್ಟಣ ಬಂದು ಸೇರಿದನು.
ಅವನ ಮುಗ್ದತೆ, ವಿದೆಯತೆ ಕಂಡು ಕೆಲವರು ಸ್ನೇಹಿತರಾದರೆ, ಕೆಲವರು ರ್ಯಾಗ್ ಮಾಡಿದರು. ಆದರೂ ತುಷಾರ್ ತುಂಬಾ ಸಮಾಧಾನ ಸ್ವಭಾವದವನು. ಈ ಅವನ ಮುಗ್ದ ಸ್ವಭಾವಕ್ಕೆ ಅವನ ವರ್ಗದ ಅನುಷ್ಕಾ ಎಂಬ ಸುಂದರಿ ಇವನ ಹಿಂದೆ ಬಿದ್ದಳು. ಅವಳ ಹಿಂದೆ ಹುಡುಗರ ಹಿಂಡು, ಅವಳು ಮಾತ್ರ ತುಷಾರ್ ಹಿಂದೆ. ಎಷ್ಟೋ ಜನ ಹುಡುಗರು ತುಷಾರ್ ಗೆ ಧಮ್ಕಿ ಕೂಡ ಹಾಕಿದ್ದರು. ಆದರೆ ತುಷಾರ್ ಮಾತ್ರ ಆ ಅನುಷ್ಕಾಳನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ ಅನುಷ್ಕಾ ಬಿಡಬೇಕಲ್ಲ, ದಿನಾ ಕಾಡುತ್ತ ಕಾಡುತ್ತ ಅವನ ಹಿಂದೆ ಮುಂದೆ ಸುಳಿದು ನೋಟ್ಸ್ ಅದೂ ಇದೂ ಅಂತ ನೆಪ ಮಾಡಿಕೊಂಡು ಸ್ವಲ್ಪ ನೋಡಿ ನಗು ಬೀರುವಷ್ಟು ಮಾತ್ರ ಫ್ರೆಂಡ್ ಆದನು. ಅಷ್ಟು ಸಾಕಾಗಿತ್ತು ಅನುಷ್ಕಾಳಿಗೆ. ದಿನಗಳೆದಂತೆ ಒಬ್ಬರಿಗೊಬ್ಬರು ಹತ್ತಿರವಾಗತೊಡಗಿದರು. ಹೊರಗಡೆ ಸುತ್ತಾಡಲು ಶುರುವಾದಾಗ ಅಂತರ ಸ್ವಲ್ಪ ಕಮ್ಮಿಯಾಗತೊಡಗಿತು. ಅಂತರ ಕಮ್ಮಿಯಾದಾಗ ಸಲುಗೆ ಹೆಚ್ಚಾಗುತ್ತದೆ. ಇವರಿಬ್ಬರ ಮದ್ಯದಲ್ಲೂ ಸಲುಗೆ ಹೆಚ್ಚಾಯಿತು. ಸ್ನೇಹದ ಜಾಗದಲ್ಲಿ ಸಣ್ಣದಾಗಿ ಪ್ರೀತಿ ಮೊಳಕೆಯೊಡೆಯಲು ಶುರುವಾಯಿತು. ತುಷಾರ್ ಅನುಷ್ಕಾ ಇಡೀ ಕಾಲೇಜು ತುಂಬೆಲ್ಲ ಫೇಮಸ್ ಜೋಡಿಯಾಗಿ ಮೆರೆದರು. ಪ್ರೀತಿಯಲ್ಲಿ ಬಿದ್ದ ಮೇಲೆ ಲೋಕವನ್ನೇ ಮರೆಸುವ ಶಕ್ತಿ ಪ್ರೀತಿಗಿದೆ ಅಂದ ಮೇಲೆ ಓದನ್ನು ಹಿಂದೆ ಸರಿಸುವ ಶಕ್ತಿಯೂ ಸಹ ಇದ್ದೆ ಇರುತ್ತದೆ. ಈಗ ಅವರಿಬ್ಬರೂ ಕಣ್ಣಿದ್ದೂ ಕುರುಡರಂತೆ ಸುತ್ತಾಡುತ್ತ ಖುಷಿಯಾಗಿ ಮಜಾ ಮಾಡುತ್ತ ಸಮಯ ಕಳೆಯುತ್ತಿದ್ದರು. ಒಬ್ಬರಿಗೊಬ್ಬರು ಹುಟ್ಟಿದ್ದಾರೆನೋ ಅನ್ನುವಷ್ಟು ಹತ್ತಿರವಾಗಿದ್ದರು.ಅನುಷ್ಕಾ ಮನೆಯಲ್ಲಿ ತುಷಾರ್ ನನ್ನು ಒಪ್ಪಿಯಾಗಿತ್ತು. ಆದರೆ ಓದು ಮುಗಿಯಲಿ ಎಂಬ ಸಲಹೆಯಿಟ್ಟಿದ್ದರು.. ಹಾಸ್ಟೆಲ್ ಹೆಸರಿಗೆ ಮಾತ್ರ ಅನ್ನುವಂತಾಗಿತ್ತು ತುಷಾರ್ ನಿಗೆ. ಇನಿಯ ನಿನ್ನ ಸನಿಹದಲ್ಲೇ ಎನ್ನುವಂತೆ ಅನುಷ್ಕಾ ಯಾವತ್ತೂ ತುಷಾರ್ ಗೆ ಅಂಟಿಕೊಂಡೇ ಇರುತ್ತಿದ್ದಳು. ಒಬ್ಬವರಿಗೊಬ್ಬರು ಜೀವ ಬಿಡಲು ಸಹ ರೆಡಿಯಿದ್ದರು.ಅಂತಹ ಪ್ರೇಮ ಇಬ್ಬರಲ್ಲಿತ್ತು..
ಆದರೆ ನಿಧಾನವಾಗಿ ತುಷಾರ್ ಉಡಾಳ ಬಸ್ಯಾ ಆಗಿ ಬದಲಾಗುತ್ತಾ ಹೋದನು.
ಮೊದಲೆಲ್ಲ ಸಮಾಧಾನವಾಗಿದ್ದ ತುಷಾರ್ ಬರುಬರುತ್ತಾ ತುಸು ರಫ್ ಅಂಡ್ ಟಫ್ ಆಗಿ ಬದಲಾಗತೊಡಗಿದನು. ಗೆಳೆಯರ ಬಳಗ ಅವನ ಬದಲಾವಣೆಗೆ ದೊಡ್ಡ ಕಾರಣವಾಯಿತು..
ಪಾರ್ಟಿ ಪಬ್ಬು ಅಂತ ಸುತ್ತಾಡಲು ಹೊರಟಾಗ ಹೊಸ ಹೊಸ ಹುಡುಗಿಯರ ಸ್ನೇಹ ದೊರೆಯಿತು. ಆ ಹುಡುಗಿಯರು ಗೆಳತಿಯರಾಗಿ, ಪ್ರೇಮಿಗಳಾಗಿ, ಬೇಸರವಾದಾಗ ಇವನನ್ನು ಮೂಡ್ ಗೆ ತರುವ ಚೀಯರ್ ಗರ್ಲ್ ಗಳಾಗಿ ಇರುತ್ತಿದ್ದರು.ಅಂತಹ ಹುಡುಗಿಯರ ಸಹವಾಸ ಮಾಡಿ ಪೂರ್ತಿಯಾಗಿ ದಾರಿ ತಪ್ಪಿದ ಮಗನಾದನು. ಇತ್ತ ಅನುಷ್ಕಾ ಬೇಡದಿರುವ ವಸ್ತುವಾದಳು. ಆಗ ಅನುಷ್ಕಾ ತುಂಬಾ ಪ್ರಯತ್ನ ಪಟ್ಟು ತುಷಾರ್ ನನ್ನು ಸರಿದಾರಿಗೆ ತರಲು ಪ್ರಯತ್ನಿಸಿದಳು. ಆದರೆ ತುಷಾರ್ ಅವಳನ್ನು ಅವೈಡ್ ಮಾಡಲು ಶುರುವಾಗಿದ್ದ. ಇದು ಅನುಷ್ಕಾಗೆ ಬಿಸಿ ತುಪ್ಪವಾಯಿತು. ಎಷ್ಟು ಹೇಳಿದರೂ ತುಷಾರ್ ಅನುಷ್ಕಾ ಕಡೆ ತಿರುಗಿಯೂ ನೋಡದೆ ಹೋದನು.
ಇವನು ನನ್ನ ಇನಿಯನೇ ಎಂದು ಅನುಷ್ಕಾಗೆ ಸಂದೇಹವುಂಟಾಯಿತು. ತನ್ನ ಇನಿಯನ ನೆನೆದು ನೆನೆದು ದುಃಖಿಸಿದಳು.
ಕೊನೆಗೆ ಅನುಷ್ಕಾಳೆ ಇವನು ಇನಿಯನಲ್ಲ ಎಂದು ಅರ್ಥೈಸಿಕೊಂಡು, ಸಿಗದಿರುವ ಪ್ರೀತಿಗೆ ದುಃಖ ಪಡುವುದು ವ್ಯರ್ಥ. ಹಾಗೂ ಅವನ ನಡತೆ ವರ್ತನೆಯಲ್ಲೂ ಬದಲಾವಣೆ ಆಗಿರುವುದರಿಂದ ತನ್ನ ಇನಿಯನಾಗಿ ತುಷಾರನನ್ನು ಊಹಿಸಿಕೊಳ್ಳಲೂ ಅವಳಿಗೆ ಕಷ್ಟವಾಯಿತು.
ಆಗ ಅವಳು ಅವನಿಂದ ದೂರವಾಗಿ ತನ್ನ ಜೀವನದ ಉತ್ತಮ ಹೆಜ್ಜೆಯನ್ನು ಇಡಲು ಮುಂದಾಗಿದ್ದಳು..

