ಬಣ್ಣಗಳು
ಬಣ್ಣಗಳು
ಆಗಸದ ತುಂಬ ನೀಲಿಯ ಛಾವಣಿ.ಅಲ್ಲಲ್ಲಿ ನಕ್ಷತ್ರಗಳ ಜುಮುಕಿಯ ತೋರಣ,ಅದರ ನಡುವೆ ಬೆಳದಿಂಗಳ ಹೊರಸೂಸುವ ತಂಪಾದ ಚಂದ್ರಮ.ಇರುಳೊಂದು ಪ್ರೇಮಿಗಳ ಅಧ್ಯಾಯದ ಸುಂದರ ಪುಟಗಳು.ಅಬ್ಬಾ! ಎಂತಹ ಪರಿಸ್ಥಿತಿಯಲ್ಲೂ ಮನಸ್ಸು ಒಂದೆಡಗೆ ಸೆಳೆಯುತ್ತದೆ ಎಂದರೆ ಅದಕ್ಕಂತಹ ಸೆಳೆತವಿದೆಯಂತ ಭಾವಿಸಬೇಕು.
ನನ್ನ ಅವನ ಸ್ನೇಹಕ್ಕೆ ಈ ಏಳು ಬಣ್ಣಗಳೇ ಕಾರಣ.ಕಪ್ಪು ಬಣ್ಣಕೆ ಯಾವ ಲೇಪನದ ಅವಶ್ಯಕತೆಯಿದೆ ಹೇಳಿ? ಪ್ರತಿ ದನ ನೋಡುವ ಕನ್ನಡಿಗೆ ಮಾತ್ರ ಗೊತ್ತು.ಅದು ಯಾವತ್ತು ನನ್ನಿಂದ ಮುನಿಸಿಕೊಂಡು ಹೋಗಿಲ್ಲ, ಕೆಟ್ಟದಾಗಿ ಕಾಮೆಂಟ್ ಮಾಡಿಲ್ಲ ಅಂದ ಮೇಲೆ ನಾನು ಚೆಂದ ಅಂತ ತಾನೆ.ಹೀಗೆಲ್ಲ ಮೂರು ಹೊತ್ತು ನೋಡಿಕೊಂಡು ಕುಂತರೆ ಜೀವನ ಸಾಗುವುದೇ ಹೇಳಿ?...ಮಳೆಯ ಹನಿಗಾಗಿ ಕಾದ ನೆಲದಂತೆ ನನಗೆ ಇಷ್ಟವಾಗುವ ಹೃದಯ ನೀನೆ ಬೇಕು ಅಂತ ಹುಡುಕಿಕೊಂಡು ಬರುತ್ತೆ ಎಂಬ ಹಗಲುಗನಸಿನಲ್ಲಿ ಹಾಯಾಗಿದ್ದೆ.
ರಪರಪ ಅಂತ ಮಳೆ ಸುರಿಯುತ್ತಿತ್ತು.ಮೊದಲೇ ಸೋಗೆ ಮನೆ ನಮ್ಮದು ಯಾವಾಗ ನೀರು ಗುಡಿಸಲೊಳಗೆ ನುಗ್ಗುವುದೋ ಎಂಬ ಆತಂಕದಲ್ಲಿ ಒಂದಿಷ್ಟು ಪಾತ್ರಪಗಡೆಗಳನ್ನು ಎತ್ತಿಟ್ಟಿದ್ದು ಆತು.ಗೋಡೆಗುಂಟ ನೀರು ತೊಟ್ಟಿಕ್ಕಿದರೆ ಏನ ಗತಿ ಎಂದು ಆಗಸ ಒಮ್ಮೆ ನೋಡಿದರೆ ಕಪ್ಪುಕಪ್ಪು ಮೋಡಗಳು ನಮ್ಮ ಮನೆ ಮೇಲೆ ಸವಾರಿ ಮಾಡಲು ಸಂಚು ನಡೆಸುವ ಹಂತದಲ್ಲಿ ಇದ್ದಂಗೆ ಕಾಣುತ್ತಿತ್ತು.
ಮಳೆಗೇನು ಹೊಯ್ಯಲು ಶುರುಮಾಡಿದರೆ ಅದರ ಆಸೆ ತೀರುವ ತನಕ ಬಿಡದಂತೆ ಸುರಿದು ತಣ್ಣಗಾತು.ಅದೇನು ಆಶ್ಚರ್ಯ! ಇಂತಾ ಮಳೆಗೂ ನೀರು ಮನೆಯೊಳಗೆ ಬರಲಿಲ್ಲವೆಂಬ ಚಿಂತೆ.ದೇವರು ಕಾದನಪ್ಪ ಎಂದು ದೇವರಿಗೆ ಕೈಮುಗಿಯಲು ಹೊಂಟವಳಿಗೆ ಹೊರಗೇನೋ ಸದ್ದು, ಏನಂತ ನೋಡಿದರೆ ನಮ್ಮ ಗುಡಿಸಲಿಗೆ ಬಂದೋಬಸ್ತು ತಾಟಪತ್ರಿ ವ್ಯವಸ್ಥೆ ಮಾಡಿದ್ದು ಕಂಡು,ಯಾರಪ್ಪ ಇದನ್ನೆಲ್ಲ ಮಾಡಿದ್ದು? ಅನ್ನುವುದರೊಳಗೆ ಹಲೋ.... ಕಾಳಮ್ಮ...ನಾನೇ ಮಾಡಿದ್ದು.ಎಂದವನ ಮುಖ ನೋಡುತ್ತಿದ್ದಂತೆ...ಏಯ್..ಲಂಬೂ ನೀನಾ....ನಿನಗೇನು ಬಂತೋ...ಇಷ್ಟು ದಿನ ಇಲ್ಲಾಗಿದ್ದು ಈಗ ಈ ಬುದ್ದಿ!
ಓ.. ಅದಾ...ನಿನ್ನ ಕಂಡರೆ ನನಗೆ ತುಂಬಾ ಇಷ್ಟ. ಹೇಳೋಕೆ ಬರಲಿಲ್ಲ...ಮಳೆ ಬರೋ ಲಕ್ಷಣ ಕಂಡು ನಮ್ಮ ಹುಡುಗಿ ಮನಿ ಯಾವತ್ತು ಸೋರಬಾರದು,ಅಂತ ಹಸಿರಿನ ತಾಡಪತ್ರೆ ತಂದೆ ಕಣೆ.ನೀಲಿಯಾಕಾಶ,ಪ್ರಕೃತಿ ಹಸಿರು,ನಿನ್ನ ಮನೆಯಂಗಳದಲಿ ಅರಳಿದ ಕೆಂಪುಗುಲಾಬಿ,ಮಲ್ಲಿಗೆ, ಗುಲಾಬಿ ಬಣ್ಣದ ಡೇರೆ.ನೇರಳೆ ಹಣ್ಣು,ನೀನುಟ್ಟ ಪಿಂಕ್ ಸೀರೆ,ರವಿಕೆ ಇವೆಲ್ಲ ಜೀವನದ ಅತೀ ಮುಖ್ಯ ಪಾತ್ರಗಳು.ಇಂತಹ ನೈಜತೆಗೆ ಒಲಿಯದ ಮನಸ್ಸು ಇದ್ದು ಇಲ್ಲದಂತೆ ನೋಡು ಅನ್ನುತ್ತ ಮುಗುಳು ನಗುತ್ತಿರುವಾಗ
ಆಗಸದಲ್ಲಿ ಮೂಡಿದ ಕಾಮನಬಿಲ್ಲು ನಮಗಾಗಿಯೇ ಮೂಡಿದೆ ಅನ್ನಿಸದಿರಲಿಲ್ಲ....ಬಣ್ಣಗಳು ಬದುಕಿನ ಅವಿಭಾಜ್ಯ ಅಂಗಗಳು ಎಂಬುದನ್ನು ಮರತಿಲ್ಲ ಕಣೋ ಎಂದು ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯ ಹಂಚಿಕೊಂಡದ್ದು ನಂಬಲಾಗುತ್ತಿಲ್ಲ.....

