ಅತಿಥಿ ದೇವೋ ಭವ
ಅತಿಥಿ ದೇವೋ ಭವ


ಕಳೆದ ವರ್ಷ ನಿವೃತ್ತರಾದ ಬ್ಯಾಂಕ್ ಅಧಿಕಾರಿ ಸುದರ್ಶನ್ ಕುಲಕರ್ಣಿ ಅವರು ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಇರುವ 'ಅರುಣೋದಯ ರೆಸೆಡೆನ್ಸಿ' ಯ ಐದನೆ ಮಹಡಿ ಯಲ್ಲಿ ಫ್ಲ್ಯಾಟ ಸಂಖ್ಯೆ 505ರಲ್ಲಿ ವಾಸವಾಗಿದ್ದರು. ಅಂದು ಶುಕ್ರವಾರ ಸಾಯಂಕಾಲ ಏಳು ಗಂಟೆಗೆ ವಾಯುವಿಹಾರ ಮುಗಿಸಿ ವಿಶ್ರಾಂತಿ ತೆಗೆದು ಕೊಳ್ಳಲು ಬಾಲ್ಕನಿ ಯಲ್ಲಿ ಬೆತ್ತದ ಚೇರ್ ಮೇಲೆ ಕುಳಿತು ತಂಪಾದ ಗಾಳಿ ಆನಂದದ ಜೊತೆಗೆ ಮೊಬೈಲ್ ನಲ್ಲಿ ವಾಟ್ಸಾಪ್ ಚಾಟ್ ಮಾಡುತ್ತ ಇರುವಾಗ ಪಕ್ಕದ ಫ್ಲ್ಯಾಟ್ ನಲ್ಲಿ ಜೋರಾಗಿ ಮಾತನಾಡುವದು ಹಾಗೂ ನಗು ವದನ್ನು ಕೇಳಿ ಚಹಾ ಕುಡಿಯು ವದನ್ನು ಅರ್ಧಕ್ಕೆ ನಿಲ್ಲಿಸಿ ಕುತೂಹಲದಿಂದ ಅವರು ಪತ್ನಿ ಯನ್ನು ಕರೆದು,
"ಶುಭಾಂಗಿ, ಪಕ್ಕದ ಫ್ಲ್ಯಾಟ್ ನಲ್ಲಿ ಏಕೆ ಇಷ್ಟು ಜೋರಾಗಿ ಮಾತಾಡುತ್ತ ನಗುತ್ತ ಇದ್ದಾರೆ?"
"ಮನೆಗೆ ಬರುವ ಅತಿಥಿಗಳನ್ನು ಬರದಂತೆ ಹೇಗೆ ತಡೆಯಲಾಯಿತು? ಎನ್ನುವ ತಮ್ಮ ಘನಂದಾರಿ ಕಾರ್ಯದ ಬಗ್ಗೆ ಯುವ ದಂಪತಿ ಸುಹಾಸಿನಿ ಹಾಗೂ ಯಶವಂತ್ ಮಧ್ಯೆ ಜೋರಾಗಿ ಮಾತಾಡುತ್ತಾ ಇಬ್ಬರೂ ನಗುತ್ತ ಇದ್ದರು ಎಂದು ಅಷ್ಟೇ ತಿಳಿಯಿತು."
ವಿಷಯ ತಿಳಿದು ಸುದರ್ಶನ್ ಅವರಿಗೆ ಆಶ್ಚರ್ಯ ವಾಗಿ ಹೀಗೆ ಮನಸ್ಸಿನಲ್ಲಿ ಅಂದುಕೊಂಡರು.
ಎಂತಹ ಜನರು? ಅತಿಥಿ ಬಗ್ಗೆ ಇಷ್ಟು ತಾತ್ಸಾರ?
ಆ ಸಮಯದಲ್ಲಿ ಸುದರ್ಶನ್ ಅವರಿಗೆ ಸುಮಾರು ಇಪ್ಪತೈದು ವರ್ಷಗಳ ಹಿಂದೆ 'ಅತಿಥಿ ದೇವೋ ಭವ' ಅಪರೂಪದ ಸಂದರ್ಭ ನೆನಪು ಬಂದಿತು.
ಸುದರ್ಶನ್ ಅವರು ಪತ್ನಿ ಸಮೇತ ಅತ್ತೆ ಕುಸುಮ ಮಾವ ರಮಾ ನಾಥ ರಾವ್ ಅವರ ಊರು ವಿಜಾಪುರ (ಇಂದಿನ ವಿಜಯಪುರ) ಕ್ಕೆ ಹೋದಾಗ ಆಗಿರುವ ಸಂದರ್ಭ. ಅಂದು ಭಾನುವಾರ ಬೆಳಗ್ಗೆ ಆರು ಗಂಟೆಗೆ ಅವರ ಮಾವನವರ ದೂರದ ಸಂಬಂಧಿ ಮಧ್ಯ ವಯಸ್ಸಿನ ಮುರಳೀಧರ ಹಾಗೂ ಅವರ ಪತ್ನಿ ವಸುಂಧರ ಮುಂಬಯಿಯಿಂದ ಆಗಮಿಸಿದರು. ಅವರು ಬರುವ ದನ್ನು ಮೊದಲೇ ತಿಳಿಸಿದ್ದರು. ಅತಿಥಿಗಳು ಬರುವ ಉದ್ದೇಶ ನಗರದ ಪ್ರೇಕ್ಷಣೀಯ ಸ್ಥಳಗಳಾದ ಗೋಲ ಗುಂಬಜ್, ಇಬ್ರಾಹಿಮ್ ರೋಜಾ,ಬಾರಾ ಕಮಾನ್, ಮಲಿಕ್-ಎ-ಮೈದಾನ್ ಫಿರಿಂಗಿ, ತಾಜಬೌಡಿ ಹಾಗೂ ಜುಮಾ ಮಸೀದಿ ನೋಡಿ ಅಂದೇ ರಾತ್ರಿ ಮುಂಬಯಿಗೆ ವಾಪಸ್ ಹೋಗುವದು. ಸ್ವಲ್ಪ ಸಮಯ ವಿಶ್ರಾಂತಿ ಹಾಗೂ ಕುಶಲೋಪರಿ ಆದ ನಂತರ ಫಲಾಹಾರ ಆಯಿತು.
ಬೆಳಗಿನ ಒಂಭತ್ತು ಗಂಟೆಗೆ ಬಿಟ್ಟು ಮಧ್ಯಾಹ್ನ ಎರಡು ಗಂಟೆಗೆ ತಿರುಗಿ ಬರುವದಾಗಿ ಹೇಳಿದರು. ಆಗ ಸುದರ್ಶನ್ ಅವರ ಮಾವ ರಮಾನಾಥ ರಾವ್ ಅಲ್ಲಿಯೇ ಇದ್ದ ಒಬ್ಬ ಹುಡುಗನಿಗೆ ಕರೆದು ಸಮೀಪದಲ್ಲಿ ಇರುವ ಟಾಂಗಾವಾಲಾ ಕಾಸಿಮ್ ಸಾಬನನ್ನು ಕರೆದುಕೊಂಡು ಬಾ ಎಂದರು. ಅವನು ಐದು ನಿಮಿಷದಲ್ಲಿ ಬಂದ. ವಯಸ್ಸಾದ ಕಾಸಿಮಸಾಬ್ ತನ್ನ ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿ ಎಲ್ಲರಿಗೂ ಮನರಂಜನೆ ಮಾಡಿದ.
"ಸಾಬ್, ಏನು ಹುಕುಂ" ಎಂದು ಕೇಳಿದ.
ಆಗ ಮುರಳಿಧರ್,
"ನೋಡು ಕಾಸಿಮ್ ಸಾಬ ನಮಗೆ ವಿಜಯಪುರದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು ತೋರಿಸಿದ ನಂತರ ನಮ್ಮ ಸಂಭದಿಕರ ಎರಡು ಮನೆಗಳಿಗೆ ಹೋಗಿ ಆಮೇಲೆ ರಾತ್ರಿ ಒಂಭತ್ತು ಮೂವತ್ತು ಗಂಟೆ ಗೆ ರೇಲ್ವೇ ಸ್ಟೇಶನ್ ಬಿಡಬೇಕು. ರೈಲು ಬಿಡುವ ಸಮಯ ರಾತ್ರಿ ಹತ್ತು ಗಂಟೆ. ಇಷ್ಟೆಲ್ಲಾ ಓಡಾಡುವದಕ್ಕೆ ಎಷ್ಟು ಹಣ ಕೊಡ ಬೇಕು,"ಎಂದು ಕೇಳಿದರು
"ಸಾಹೇಬರೇ, ಇಷ್ಟೆಲ್ಲಾ ತಿರುಗಾಡಲು ಮೂರು ನೂರು ರೂಪಾಯಿ ಆಗುವದು," ಎಂದ.
ರಮಾನಾಥ ರಾವ್ ಅವರು ಮಧ್ಯ ಪ್ರವೇಶಿಸಿ," ಸ್ವಲ್ಪ ಕಡಿಮೆ ಮಾಡು," ಎಂದರು
ಆಗ ಮುರಳಿಧರ್, "ಇರಲಿ ಬಿಡಿ. ತುಂಬಾ ಶ್ರಮದ ಕೆಲಸ ಕಾಸಿಮ್ ಸಾಬಗೂ ಹಾಗೂ ಮೂಕ ಪ್ರಾಣಿ ಕುದುರೆಗೂ," ಎಂದು ಅಲ್ಲಿಗೆ ಮುಗಿಸಿದರು.
ಹತ್ತು ನಿಮಿಷಗಳಲ್ಲಿ ಬರುವದಾಗಿ ಹೇಳಿ ಅವನು ಸಮಯಕ್ಕೆ ಸರಿಯಾಗಿ ಬಂದಾಗ ಅತಿಥಿಗಳು ರೆಡಿ ಆಗಿದ್ಧರು. ಅತಿಥಿಗಳು ಹೊರಡುವಾಗ ಸಮಯ ಬೆಳಗಿನ ಒಂಭತ್ತು ಗಂಟೆ. ಟಾಂಗಾ ಹತ್ತುವಾಗ ರಮಾನಾಥ ರಾವ್, "ಮಧ್ಯಾಹ್ನ ಊಟದ ಸಮಯಕ್ಕೆ ಬನ್ನಿ ," ಎಂದರು ಅವರು ವಾಪಸ್ ಬಂದಾಗ ಸಮಯ ಮಧ್ಯಾಹ್ನ ಮೂರು ಗಂಟೆ. ರಮಾನಾಥ ರಾವ್ ಅವರು ದೇವರ ಪೂಜೆ ಮುಗಿಸಿ ಬಹಳ ಸಮಯ ಆಗಿತ್ತು. ಅತಿಥಿಗಳು ಬರುವವರೆಗೆ ಊಟ ಮಾಡುವ ಹಾಗಿಲ್ಲ. ಅತಿಥಿಗಳು ಬಂದವರೇ ತಡವಾಗಿರುವದಕ್ಕೆ ಎಲ್ಲರಿಗೂ ಕ್ಷಮೆ ಕೇಳಿದರು. ಊಟ ಆದಮೇಲೆ ಅವರು ಪ್ರೇಕ್ಷಣೀಯ ಸ್ಥಳಗಳು ನೋಡಿದ ತಮಗಾದ ಅನುಭವಗಳನ್ನು ಹಂಚಿಕೊಂಡರು. ಆಗಲೇ ಟಾಂಗಾವಾಲಾ ಕಾಸೀಮ ಸಾಬ ಬಂದಿದ್ದನ್ನು ನೋಡಿ ಅತಿಥಿಗಳು ಸಂಭದಿಕರ ಎರಡು ಮನೆಗಳಿಗೆ ಹೊರಟೇ ಬಿಟ್ಟರು. ಅಲ್ಲಿಂದ ವಾಪಸ್ ಬರಲು ಸಮಯ ಸಾಯಂಕಾಲ ಏಳು ಗಂಟೆ. ರೇಲ್ವೇ ಸ್ಟೇಶನ್ ಗೆ ಹೊರಡಲು ಉಳಿದಿರುವ ಸಮಯ ಇನ್ನೂ ಎರಡು ಗಂಟೆ ಮುವತ್ತು ನಿಮಿಷ. ಆ ಅವಧಿ ಯಲ್ಲಿ ಮುರಳಿಧರ್ ಅವರು ರಮಾನಾಥ ರಾವ್ ಜೊತೆಗೆ ವಸುಂಧರ ಅವರು ಸುದರ್ಶನ್ ಅತ್ತೆ ಕುಸುಮಾ ಜೊತೆಗೆ ಹಳೆಯ ಸುದ್ದಿಗಳನ್ನು ಮೆಲುಕು ಹಾಕಿದರು. ಮುಂಬಯಿಗೆ ಬಂದರೆ ತಮ್ಮ ಮನೆಗೆ ಮರೆಯದೇ ಬರಲು ತಿಳಿಸಿದರು. ಆಗಲೇ ಸಮಯ ರಾತ್ರಿ ಎಂಟು ಗಂಟೆ. ರಾತ್ರಿ ಊಟ ಸಿದ್ಧವಾಗಿತ್ತು.
ಆಗ ರಮಾನಾಥ ರಾವ್ ಆವರು,
"ಮುರಳಿಧರ್, ಊಟ ಇಲ್ಲಿಯೇ ಮುಗಿಸಿ. ಇನ್ನೂ ಸಮಯ ಬಹಳ ಇದೆ. ನಿಮಗೆ ಅವಸರ ಇದ್ದರೆ ಪ್ಯಾಕ್ ಮಾಡುವರು," ಎಂದರು.
"ನಾವು ಪ್ರವಾಸದಲ್ಲಿ ಇರುವಾಗ ರೈಲಿನಲ್ಲಿ ಊಟ ಮಾಡುವದಿಲ್ಲ. ಇಲ್ಲಿಯೇ ಊಟ ಮಾಡುತ್ತೇವೆ," ಎಂದರು ವಸುಂಧರ.
ಅವರ ಊಟ ಮುಗಿಯುವದಕ್ಕೆ ಅರ್ಧ ಗಂಟೆ ಆಯಿತು. ಹೊರಗೆ ಟಾಂಗಾವಾಲಾ ಕಾಸಿಮ್ ಸಾಬ ಆಗಲೇ ಬಂದಿದ್ದ. ಐದು ನಿಮಿಷದಲ್ಲಿ ಅವರು ಬ್ಯಾಗ್ ರೆಡಿ ಮಾಡಿದರು. ಹೊರಡುವ ಮುನ್ನ ಅತಿಥಿಗಳು ದೇವರ ಕೋಣೆಯಲ್ಲಿ ದೀಪ ಹಚ್ಚಿರುವದನ್ನು ನೋಡಿ ಅವರು
ಕೈ ಜೋಡಿಸಿ ಪ್ರಯಾಣ ಸುಖಕರ ವಾಗಲಿ ಎಂದು ಪ್ರಾರ್ಥನೆ ಮಾಡಿದರು. ಸಂಪ್ರದಾಯದಂತೆ ವಸುಂಧರ ಅವರಿಗೆ ಕುಂಕುಮ, ಹಣ್ಣು ಮತ್ತು ಹೂ ಕೊಟ್ಟರು. ಅತಿಥಿಗಳು ಎಲ್ಲರಿಗೂ ನಮಸ್ಕಾರ ಮಾಡಿ ಹೊರ ಬಂದರು. ಹೊರಡುವಾಗ ಮನೆಯಲ್ಲಿ ಇರುವ ಮಗು ಕೈಯಲ್ಲಿ ಒಂದು ನೂರು ರೂಪಾಯಿ ಕೊಟ್ಟರು.
"ನಿಮಗೆ ನಮ್ಮಿಂದ ತುಂಬಾ ಶ್ರಮ ಆಯಿತು," ಎಂದರು ಮುರಳಿಧರ ಔಪಚಾರಿಕವಾಗಿ.
ರೇಲ್ವೇ ಸ್ಟೇಶನ್ ಮುಟ್ಟಿದಮೇಲೆ ಆಗ ಟಾಂಗಾವಾಲಾ ಗೆ ಈಗಾಗಲೇ ಹೇಳಿದಂತೆ ರೂಪಾಯಿ ಮೂರು ನೂರು ಕೊಟ್ಟರು. ಆ ಸಮಯದಲ್ಲಿ ಅದೇ ಬಹಳ. ಅವನಿಗೆ ಖುಷಿ ಆಗಿ ಸಲಾಮ ಹೊಡೆದ. ಮರುದಿವಸ ಕಾಸಿಮ್ ಸಾಬ ಮನೆಗೆ ಬಂದು ಅವರನ್ನು ರೈಲಿನಲ್ಲಿ ಕೂಡಿಸಿ ಬಂದಿರುವದಾಗಿ ಹೇಳಿದ. ಅತ್ತೆ ಮಾವ ಇವರಲ್ಲಿ ಇರುವ 'ಅತಿಥಿ ದೇವೋ ಭವ' ಅಳಿಯ ಸುದರ್ಶನ್ ಮೇಲೆ ತುಂಬಾ ಪ್ರಭಾವ ಆಯಿತು.
"ಏನ್ರೀ, ಪಕ್ಕದ ಫ್ಲ್ಯಾಟ್ ನ ಸುಹಾಸಿನಿ ಮತ್ತೆ ಭೇಟಿ ಆದಳು."
ಎಂದು ಶುಭಾಂಗಿ ಹೇಳಿದಾಗ ಸುದರ್ಶನ್ ಅವರು ಹಿಂದಿನ ನೆನಪು ಗಳಿಂದ ಹೊರ ಬಂದರು.
"ಏನು ಹೇಳಿದಳು?"
"ಸ್ವಲ್ಪ ಸಮಯದ ಹಿಂದೆ ಸುಹಾಸಿನಿ ಸೋದರ ಮಾವ ಕಲಬುರ್ಗಿಯಿಂದ ದೂರವಾಣಿ ಕರೆ ಮಾಡಿದರು. ಬರುವ ಶನಿವಾರ ಬೆಂಗಳೂರು ನಗರಕ್ಕೆ ಪತ್ನಿ ಜೊತೆಗೆ ಎರಡು ದಿವಸ ಆಫೀಸ್ ಕೆಲಸದ ಸಲುವಾಗಿ ಬರುವದಾಗಿ ಹೇಳಿದರು. ಆಗ ಸಮಯ ತೆಗೆದುಕೊಂಡು ಭಾನುವಾರ ಮನೆಗೆ ಬರುತ್ತೇವೆ ಎಂದರಂತೆ. ಆಕೆ ಉತ್ತರ ಏನು ಕೂಟ್ಟಳು ಗೊತ್ತೇ?"
"ಅದೇನು ಬೇಗ ಹೇಳು?"
ಆಕೆ ಉತ್ತರ ಹೀಗಿತ್ತು.
"ಸಾರಿ ಮಾಮ, ಶನಿವಾರ ಹಾಗೂ ಭಾನುವಾರ ಮನೆಯಲ್ಲಿ ಇರುವದಿಲ್ಲ. ನಾವಿಬ್ಬರೂ ಶ್ರೀರಂಗಪಟ್ಟಣ, ಮೈಸೂರು, ನಂಜನಗೂಡು ಹಾಗೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತ ಇದ್ದೇವೆ. ಮತ್ತೆ ಯಾವಾಗಲಾದರೂ ಬನ್ನಿ," ಎಂದಳು.
"ಆಕೆ ಸುಳ್ಳು ಏಕೆ ಹೇಳಿದಳು? ಇಬ್ಬರೂ ಮಲ್ಟಿ ನ್ಯಾಶನಲ್ ಕಂಪನಿಯಲ್ಲಿ ಸಾಫ್ಟವೇರ್ ಎಂಜನಿಯರ್ ಇದ್ದು ಲಕ್ಷಾವಧಿ ವೇತನ ಇರುವವರು ಹೀಗೆ ವರ್ತಿಸಬಾರದು."
"ಹೌದು. ಆಕೆಗೆ ಮನೆಗೆ ಬರುವವರಿಗೆ ಬರಬೇಡಿ ಆನ್ನಲು ಆಗುವದಿಲ್ಲ. ಈ ಪ್ಲಾನ್ ಸಕ್ಸೆಸ್ ಆಗಿರುವದರಿಂದ ಜೋರಾಗಿ ನಕ್ಕರು."
"ಅದನ್ನು ನಿನಗೆ ಯಾಕೆ ಹೇಳಿದಳು? ಶುಭಾಂಗಿ ನೀನು ಹಾಗೆ ಮಾಡಬೇಡ. ಇಪ್ಪತ್ತೈದು ವರ್ಷಗಳ ಹಿಂದೆ ನಾವಿಬ್ಬರೂ ವಿಜಾಪುರಕ್ಕೆ ಹೋದಾಗ ಮುಂಬಯಿ ಯಿಂದ ನಿಮ್ಮ ಮನೆಗೆ ಅತಿಥಿಗಳು ಬಂದರು ನೆನಪಿದೆಯಾ?"
ತಮಗಾದ ನೆನಪು ವಿವರಿಸಿದರು.
"ಹೌದು. ನಾನು ಮರೆತಿಲ್ಲ. ನಮ್ಮ ಮನೆಗೆ ಬರುವ ಅತಿಥಿಗೆ ಯಾವಾಗಲೂ ಸ್ವಾಗತ. ನನ್ನ ಅಮ್ಮ ಅಪ್ಪ ಅನುಸರಿಸಿದ ಸಂಪ್ರದಾಯ ನಾನು ಮುಂದುವರೆಸುವೆ."
"ಶುಭಾಂಗಿ ಒಂದು ಮಾತು ಸತ್ಯ. ಅತಿಥಿ ಸತ್ಕಾರ ಅಂದು ಪ್ರೀತಿ ಹಾಗೂ ವಾತ್ಸಲ್ಯ ಇತ್ತು. ಆದರೆ ಇಂದು ಅದು ಲೋಪವಾಗಿದೆ ಅನ್ನುವದಕ್ಕಿಂತ ವಿರಳವಾಗಿದೆ. ಹೀಗೆ ಆಗಬಾರದು. 'ಅತಿಥಿ ದೇವೋ ಭವ' ಇದು ಉಪನಿಷತ್ ನ ಬರುವ ಸಾಲು. ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕ."
"ಸುದರ್ಶನ್, ನನಗೆ ಸುಮಾರು ಒಂದು ವರ್ಷದ ಹಿಂದೆ ಆದ ಘಟನೆ ನೆನಪು ಬಂದಿತು." ಎಂದಳು ಶುಭಾಂಗಿ
"ಅದೇನು ಬೇಗ ಹೇಳು."
"ಕಳೆದ ವರ್ಷ ಎಪ್ರಿಲ್ ತಿಂಗಳು ಎರಡನೇ ಭಾನುವಾರ ನಿಮ್ಮ ಬ್ಯಾಂಕ್ ಸ್ನೇಹಿತ ರಾಮಚಂದ್ರ ಕುಲಕರ್ಣಿ ಅವರ ನೂತನ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ನಮಗೆ ಆಹ್ವಾನಿಸಿದ್ದರು. ನಾವು ಅಲ್ಲಿಗೆ ಹೋಗುವ ಎಲ್ಲ ಸಿದ್ಧತೆ ಕೂಡಾ ಮಾಡಿಕೊಂಡಿದ್ದೆವು. ಆದರೆ ಹಿಂದಿನ ದಿನ ಶನಿವಾರ ಬೆಂಗಳೂರಿನಲ್ಲಿ ಇರುವ ನಿಮ್ಮ ಸಹೋದರಿ ನಿರ್ಮಲಾ ದೂರವಾಣಿ ಕರೆ ಬಂದಿತು. ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ಕುಟುಂಬ ಸಮೇತ ಬರುವದಾಗಿ ತಿಳಿಸಿದಳು. ಆ ಸಮಯ ನಮಗೆ ಎದುರಾದ ಪ್ರಶ್ನೆ ಸ್ನೇಹಿತರ ಗೃಹ ಪ್ರವೇಶಕ್ಕೆ ಹೋಗುವದು ಕ್ಯಾನ್ಸಲ್ ಮಾಡಬೇಕೋ ಅಥವಾ ನಿರ್ಮಲಾಗೆ ಇರುವದನ್ನು ಹೇಳಿ ಬರಬೇಡ ಎನ್ನಬೇಕು?. ಆದರೆ ನಾವು ಗೃಹಪ್ರವೇಶಕ್ಕೆ ಹೋಗುವದು ಕ್ಯಾನ್ಸಲ್ ಮಾಡಿ ಅತಿಥಿಗಳ ಸ್ವಾಗತ ಮಾಡುವದಕ್ಕೆ ಭಾನುವಾರ ಬೆಳಗಿನ ಹತ್ತು ಗಂಟೆಯ ವರೆಗೆ ದಾರಿಕಾದಮೇಲೆ ಆಕೆ ಫೋನ್ ಮಾಡಿ ಬೇರೆ ಕೆಲಸದ ನಿಮಿತ್ತ ಬರುವದಿಲ್ಲ ಎಂದಳು. ನೋಡಿ ಪಕ್ಕದ ಫ್ಲ್ಯಾಟ್ ನವರು ಸುಳ್ಳು ಹೇಳಿ ಅತಿಥಿಗಳು ಬರುವದನ್ನು ತಪ್ಪಿಸಿಕೊಂಡರು. ಆದರೆ ನಾವು ನಿಜಹೇಳಿ ನಾವು ಅಲ್ಲಿಯೂ ಹೋಗಲಿಲ್ಲ, ಇಲ್ಲಿಯೂ ಅತಿಥಿಗಳು ಬರಲಿಲ್ಲ."
"ಹೌದು, ಶುಭಾಂಗಿ ನನಗೆ ಎಲ್ಲವೂ ನೆನಪಿದೆ. ಅದರೂ ನಾವು ಎಂದೂ ಅತಿಥಿ ಸತ್ಕಾರ ಬಗ್ಗೆ ಅಸಡ್ಡೆ ಮಾಡಬಾರದು. 'ಅತಿಥಿ ದೇವೋ ಭವ' ಎನ್ನುವ ಸಂಸ್ಕೃತ ದ ಸೂಕ್ತಿಯಲ್ಲಿ ನಮಗೆ ವಿಶ್ವಾಸ ಇದೆ."
ಆಕಾಶದಲ್ಲಿ ಮೋಡ ಕವಿದು, ಗಾಳಿ ರಭಸವಾಗಿ ಬರುತ್ತಿದ್ದು ಮಳೆ ಬರುವ ಎಲ್ಲ ಲಕ್ಷಣಗಳು ಕಾಣುತ್ತಿ ರುವದರಿಂದ ಬಾಲ್ಕನಿ ಬಾಗಿಲು ಮುಚ್ಚಿ ಮನೆ ಒಳಗೆ ಹೋದರು.