Vaman Acharya

Romance Classics Others

4.5  

Vaman Acharya

Romance Classics Others

ಮೊದಲ ನೋಟ ಕಣ್ಸನ್ನೆಗಳ ಆಟ

ಮೊದಲ ನೋಟ ಕಣ್ಸನ್ನೆಗಳ ಆಟ

5 mins
394



 ಅಮರ್ ನಾಥ್ ತನ್ನ ಊರು ಚಂದನಪುರ ಗ್ರಾಮದಲ್ಲಿ ಸ್ವಂತ ಐದು ಎಕರೆ ಭೂಮಿ ನೋಡಿಕೊಳ್ಳಲು ಪತ್ನಿ ಜೊತೆಗೆ ತೋಟದ ಮನೆಯಲ್ಲಿ ವಾಸಕ್ಕಾಗಿ ಬಂದ. ಐದು ಕಿಲೋಮೀಟರ್ ದೂರ ಇರುವ ಪವನ್ ಪೂರ್ ಕ್ಕೆ ಹೋಗಲು ಕಾಂಕ್ರಿಟ್ ರೋಡ್. ಗಂಟೆಗೊಂದು ಬಸ್ ಗಳ ಓಡಾಟ.   

ಮಧ್ಯಾಹ್ನ ಎರಡು ಗಂಟೆ ಸಮಯ. ಅದೇ ತಾನೇ ಇಬ್ಬರೂ ಊಟ ಮುಗಿಸಿದ್ದರು. ಪತ್ನಿ ವಿಶ್ರಾಂತಿ ಎಂದು ನಿದ್ರೆಗೆ ಮೊರೆ ಹೋದಳು.  ಮನೆ ಹೊರಗೆ ಇದ್ದ ಬೇವಿನ ಮರದ ಕೆಳಗೆ ಇರುವ ಕಟ್ಟೆ ಮೇಲೆ ಕುಳಿತು ಅಮರ್ ತಮ್ಮ ಮದುವೆ ಫೋಟೋ ಆಲ್ಬಮ್ ನೋಡುತ್ತ ಇರುವಾಗ ತಂಪಾದ ಗಾಳಿ ಮನಸ್ಸಿಗೆ ಮುದ ಆಗಿ ಆರು ವರ್ಷದ ಹಿಂದೆ ಆಗಿರುವ ಮರೆಯಲಾಗದ ಘಟನೆಗಳು ಆತನ ಸ್ಮೃತಿ ಪಟಲದ ಮೇಲೆ ಹಾದು ಹೋದವು. ಸುವರ್ಣ ಮ್ಯಾನೇಜಮೆಂಟ್ ಕಾಲೇಜ್ ನಿಂದ ಅಮರ್ ಎಂ ಬಿ ಎ ಫಸ್ಟ್ ಕ್ಲಾಸ್ ಪಾಸಾದ ಮೇಲೆ ಪವನ್ ಪೂರ್ ಹಾಗೂ ರಾಘವಪುರ್ ಅವಳಿ ನಗರಗಳ ಮಧ್ಯದಲ್ಲಿ  ಇರುವ  ಕೈಗಾರಿಕಾ ಪ್ರದೇಶದಲ್ಲಿ ಹತ್ತು ಎಕರೆ ಜಮೀನಿನಲ್ಲಿ ಇರುವ ಸುರ್ಯಾ ಫುಡ್ ಪ್ರೊಸೆಸಿಂಗ್ ಕಂಪನಿಯಲ್ಲಿ ಸೇಲ್ಸ್ ಆಫೀಸರ್ ಎಂದು ಕೆಲಸಕ್ಕೆ ಸೇರಿದ. ಮೊದಲನೇ ವರ್ಷ ಕರ್ತವ್ಯ ನಿಭಾಯಿಸುವದರಲ್ಲಿ ವಿಫಲನಾಗಿ ಕೆಲಸ ಹೋಗುವ ದಾರುಣ ಪರಿಸ್ಥಿತಿ ಒದಗಿ ಬಂದಾಗ ಒಬ್ಬ ಪುಣ್ಯಾತ್ಮರು ಆಪದ್ ಬಾಂಧವರಾಗಿ ಬಂದು ಅವನಿಗೆ ಉಪಕಾರ ಮಾಡಿ ಕೆಲಸ ಉಳಿಯುವಂತೆ ಮಾಡಿದರು. ಮುಂದೆ ಒಂದು ವರ್ಷ ಆದಮೇಲೆ ಅವನಿಗೆ ಕೆಲಸದ ಮೇಲೆ  ಸರಿಯಾದ ಹಿಡಿತ ಬಂದು ಎಲ್ಲವೂ ಸುಗಮವಾಯಿತು. 


ಆ ಸಮಯದಲ್ಲಿ ಅಮರ್ ಮಾಡಿದ ಪರಿಶ್ರಮದಿಂದ ಕಂಪನಿ ವ್ಯವಹಾರ ದ್ವಿಗುಣವಾಗಿ ಒಳ್ಳೆಯ ಹೆಸರು ಗಳಿಸಿದ. ಮೂರನೇ ವರ್ಷ ಅಮರ್ ಗೆ ಜನರಲ್ ಮ್ಯಾನೇಜರ್ ಎಂದು ಬಡ್ತಿ ಕೊಟ್ಟರು. ಪ್ರಗತಿ ಹಾಗೆ ಮುಂದುವರೆದು ಸತತವಾಗಿ ನಿಗದಿತ ಗುರಿಗಿಂತ ಹೆಚ್ಚು ಆಯಿತು. ಆತನ ಅವಿರತ ಪರಿಶ್ರಮ ಹಾಗು ಅದ್ಭುತ ಕಾರ್ಯ ಕೌಶಲ್ಯದಿಂದ ಇದು ಸಾಧ್ಯವಾಯಿತು. 


ಒಂದು ದಿವಸ ಬೆಳಗ್ಗೆ ಎಂಟು ಗಂಟೆಗೆ ಅವನ ಮೊಬೈಲ್ ರಿಂಗ್ ಆಯಿತು. ಕರೆ ಯಾರದು ಎಂದು ನೋಡಿದರೆ ಅದು ಅವನು ಓದಿದ ಪವನ್ ಪೂರ್ ಸುವರ್ಣ ಮ್ಯಾನೇಜ್ ಮೆಂಟ್ ಕಾಲೇಜ್ ಪ್ರಿನ್ಸಿಪಾಲ್.


"ಹಲೋ, ಅಮರ್ , ನಾನು ಪ್ರಾಂಶುಪಾಲ ಆನಂದ ನರಸಿಂಹನ್."


"ಗುಡ್ ಆಫ್ಟರ ನೂನ್ ಸರ್."


"ಕ0ಗ್ರಾಚುಲೇಶನ್ಸ್ ಅಮರ್ . ಕಂಪನಿಯನ್ನು ಉತ್ತುಂಗಕ್ಕೆ ತಲುಪಿಸಿರುವ ನಿನ್ನ ಪ್ರಯತ್ನ ಮೆಚ್ಚುವಂತಹದು. ಐ ಯಾಮ್ ಪ್ರೌಡ ಆಫ್ ಯು. ನೀನು ನನ್ನ ವಿದ್ಯಾರ್ಥಿ. ನಿನಗೆ ಸನ್ಮಾನ ಮಾಡುವ ಕಾರ್ಯಕ್ರಮ ನಮ್ಮ ಕಾಲೇಜ್ ಸಮಿತಿ ನಿರ್ಧಾರ ಮಾಡಿರುವರು. ಬರುವ ದಿನಾಂಕ ಐದು, ಭಾನುವಾರ ಸಾಯಂಕಾಲ ಐದು ಗಂಟೆಗೆ ಆಗಬಹುದಾ? ಆ ಸಮಾರಂಭದಲ್ಲಿ ಅಂತಿಮ ಎಂ ಬಿ ಎ  ಡಿಗ್ರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು.


ಅಮರ್ ಗೆ ಖುಷಿ ಆಗಿ,

 "ಥ್ಯಾಂಕ್ಯೂ ಯು ಸರ್. ಖಂಡಿತವಾಗಿ ಬರುತ್ತೇನೆ," ಎಂದು ಹೇಳಿಯೇ ಬಿಟ್ಟ.  ಇದಾದ ನಂತರ ಆಪ್ತ ಕಾರ್ಯದರ್ಶಿಯನ್ನು ಕರೆದು, 

"ನೇಹಾ,  ನಾನು ವಿದ್ಯಾಭ್ಯಾಸ ಮಾಡಿದ ಬೀಜನೆಸ್ ಮ್ಯಾನೇಜ್ ಮೆಂಟ್ ಕಾಲೇಜ್ ನಲ್ಲಿ ಬರುವ ದಿನಾಂಕ ಐದು ಭಾನುವಾರ ನನಗೆ ಸನ್ಮಾನ ಸಮಾರಂಭ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಅಂದು ಇರುವ ಎಲ್ಲ ಕ್ಲಯಿಂಟ್ ಗಳ ಸಂದರ್ಶನಗಳನ್ನು ಮುಂದೆ ಹಾಕು."


"ಸರ್, ಅಂದು ಯಾವ ಮೀಟಿಂಗ್ ಇಲ್ಲ."


"ಗುಡ್ ನೇಹಾ. ನಾನು ಈಗಾಗಲೇ ಕಾಲೇಜ್ ಪ್ರಿನ್ಸಿಪಾಲ್ ರಿಗೆ ಮಾತು ಕೊಟ್ಟಾಗಿದೆ ಒಳ್ಳೆಯದಾಯಿತು,"  ಎಂದ.

 ಅಮರ್ ಗೆ ಕಾಲೇಜಿನ ಸಮಾರಂಭಕ್ಕೆ ಹೋಗಲು ಯಾವ ಅಡೆ ತಡೆ ಆಗಲಿಲ್ಲ.


ನಿಗದಿತ ದಿವಸ ಕಾಲೇಜ್ ಗೆ ತನ್ನ ಬಿಳಿ ಬಣ್ಣದ ಬ್ರಾಂಡ್ ನಿವ್ ಕಾರ್ ಡ್ರೈವ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಆಗಮಿಸಿದ. ನೀಲಿ ಬಣ್ಣದ ಸೂಟ್ ಹಾಕಿದ ಆತ ಕಾರ್ ಇಳಿದ ಕೂಡಲೇ ಕಾಲೇಜ್ ಗೇಟ್ ಮುಂದೆ ಕೆಲವು ವಿದ್ಯಾರ್ಥಿಗಳು ಅಮರ್ ನನ್ನು ಸ್ವಾಗತಿಸಿ ಆತನಿಗೆ ಅತಿಥಿ ಕೋಣೆ ಯಲ್ಲಿ ಕೂಡಿಸಿ ಕಾಫಿ ಕೊಟ್ಟರು. ಸ್ವಲ್ಪ ಸಮಯದ ನಂತರ ಒಬ್ಬ ವಿದ್ಯಾರ್ಥಿ ಬಂದು ಆತನಿಗೆ ಸಭಾಂಗಣದಲ್ಲಿ ಕರೆದುಕೊಂಡು ಹೋಗಿ ಪ್ರೇಕ್ಷಕರ ಮುಂದಿನ ಸಾಲಿನಲ್ಲಿ ಆನಂದ ನರಸಿಂಹನ್ ಅವರ ಪಕ್ಕ ದಲ್ಲಿ ಕೂಡಿಸಿದ. ಆಗ ಅಮರ್ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಸನದ ಮೇಲೆ ಕುಳಿತ.

ಆಗಲೇ ವೇದಿಕೆ ಮೇಲೆ ಸುಮಾರು ಇಪ್ಪತ್ತೈದು ವರ್ಷದ   ತೆಳ್ಳಗೆ ಬೆಳ್ಳಗೆ ಇದ್ದು ಉದ್ದನೆ ಕಪ್ಪು ಬಣ್ಣದ ಕೂದಲು, ಹಣೆಗೆ ಕುಂಕುಮ, ಕೊರಳಲ್ಲಿ ಒಂದು ಎಳೆಯ ಚಿನ್ನದ ನೆಕ್ಲೆಸ್, ಗುಲಾಬಿ ಬಣ್ಣದ ರೇಷ್ಮೆ ಸೀರೆ, ದೇಸಿ ಪಾದರಕ್ಷೆ ಹಾಗೂ ಬಣ್ಣದ ಕನ್ನಡಕ ಧರಿಸಿದ ಸುಂದರ ಯುವತಿ ಇದ್ದಳು. ಆಕೆ ಅಂದಿನ ಕಾರ್ಯಕ್ರಮದ ನಿರೂಪಕಿ. ಆಕೆಯನ್ನು ನೋಡಿದ ಅಮರ್ ಮಾತನಾಡದೆ ಸ್ತಬ್ದನಾದ. ಆಕೆಯ ಚಲುವಿಕೆಗೆ ಅವನು ಮರುಳಾದ. ಆ ಸುಂದರಿ ತನ್ನ ಬಾಳ ಸಂಗಾತಿ ಆದರೆ ಹೇಗೆ ಎಂದು ಮನಸ್ಸಿನಲ್ಲಿ ಅಂದುಕೊಂಡ. 


ಆತನಿಗೆ ಮರಳು ಮಾಡಿದ ಈ ಚಲುವೆ ಯಾರು?


  ಪ್ರೇಮ ಎನ್ನುವ ಆ ಚಲುವೆ ಬೇರೆ ಯಾರೂ ಆಗಿರದೇ ಅದೇ ವರ್ಷ ಎಂ ಬಿ ಯೇ ಮುಗಿಸಿದ ಪ್ರಾಂಶುಪಾಲ ಆನಂದ ನರಸಿಂಹನ್ ಅವರ ಪುತ್ರಿ.  ವೇದಿಕೆ ಮೇಲೆ ಬಂದು ಅಧ್ಯಕ್ಷ  ಸ್ಥಾನ ಅಲಂಕರಿಸಲು ಆನಂದ್ ಅವರನ್ನು ಹಾಗೂ ಅಮರ್ ನಿಗೆ ಮುಖ್ಯ ಅತಿಥಿ ಸ್ಥಾನ ಅಲಂಕರಿಸಲು ವಿನಂತಿ ಮಾಡಿದಳು. ಅದರಂತೆ ಇಬ್ಬರೂ ವೇದಿಕೆ ಮೇಲೆ ಹೋಗಿ ಆಸನದ ಮೇಲೆ ಕುಳಿತರು. ಆಗ ವಿದ್ಯಾರ್ಥಿಗಳ ಕರ ತಾಡನೆ. ಆ ಸಮಯದಲ್ಲಿ ಪ್ರೇಮ ಎಲ್ಲರನ್ನು ಸ್ವಾಗತಿಸಿದ ನಂತರ ಆರು ವರ್ಷದ ಪುಟ್ಟ ಹುಡುಗಿ ಕೀರ್ತಿ ದೇವರ ನಾಮ ಹಾಡಿದಳು. ದೀಪ ಬೆಳಗಿದ ಕೂಡಲೇ  ಅಮರ್ ಅವರಿಗೆ ತಮ್ಮ ಅನುಭವ ಹಂಚಿಕೊಳ್ಳುವ0ತೆ ಕೋರಿದಳು.


ಅಮರ್ ಎಂ ಬಿ ಎ ಆದಮೇಲೆ ಕಂಪನಿ ಸೇರಿ ಇಲ್ಲಿಯವರೆಗೆ ಆದ ಘಟನೆಗಳನ್ನು ನಿರರ್ಗಳವಾಗಿ ಐದು ನಿಮಿಷ ಮಾತನಾಡಿದ. ವಿದ್ಯಾರ್ಥಿಗಳು ಮೇಲಿಂದ ಮೇಲೆ ಕರತಾಡನ ಮಾಡಿದರು. ಎಂ ಬಿ ಎ ಕೊನೆಯ ವರ್ಷದ ವಿದ್ಯಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟ. ನಂತರ ಪ್ರಾಂಶುಪಾಲರು  ಮಾತಾಡಿದ ಮೇಲೆ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯ ವಾಯಿತು. ಆ ಸಮಯದಲ್ಲಿ ಪ್ರೇಮಗೆ ಮೊದಲ ನೋಟದಲ್ಲಿ ಅಮರ್ ಮೇಲೆ ಪ್ರೇಮ ಅಂಕುರ ವಾಯಿತು. ಆಕೆಯ ಮೋಹಕ ಕಣ್ಸನ್ನೇ ಅಮರ್ ಗೆ ಅವಳ ಪ್ರೇಮಪಾಶದಲ್ಲಿ ಬೀಳುವದಕ್ಕೆ ತಡವಾಗಲಿಲ್ಲ. ಇಬ್ಬರೂ ಪರಸ್ಪರ ಮನದಾಳದ ಇಂಗಿತ ಅರಿತರು. ಅಂದಿನ ಕಾರ್ಯಕ್ರಮ ಮುಗಿದು ಎಲ್ಲರೂ ಅಲ್ಲಿಂದ ನಿರ್ಗಮಿಸಿದರು.


ಒಂದು ವಾರ ಕಳೆದರೂ ಪ್ರೇಮ ಹಾಗೂ ಅಮರ್ ಭೇಟಿ ಆಗಲಿಲ್ಲ. ಇಬ್ಬರಿಗೂ  ಅವರದೇ ಆದ ಸಮಸ್ಯೆಗಳು. ಪ್ರೇಮ ಈಗಾಗಲೇ ಅರವಿಂದ್ ಎನ್ನುವ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿದೆ.  ಅವನು ಸುವರ್ಣ ಮ್ಯಾನೇಜ್ ಮೆಂಟ್ ಕಾಲೇಜ್ ನ ಆಡಳಿತ ಮಂಡಳಿಯ ಚೇರ್ ಮನ್ ಹಾಗೂ ಸುರ್ಯಾ ಫುಡ್ ಪ್ರೊಸೆಸ್ಸಿಂಗ್ ಕಂಪನಿ ಮಾಲೀಕ ಧನಂಜಯ ಚಕ್ರಧರ್ ಅವರ ಏಕೈಕ ಪುತ್ರ. ಅಮರ್ ತಂದೆ ತಾಯಿ ಬಂಧು ಬಳಗ ಇಲ್ಲದ ಅನಾಥ. ಪ್ರೇಮಿಗಳು ಏಕಾಂತದಲ್ಲಿ ಹೇಗೆ ಭೇಟಿ ಆಗಬೇಕು ಎನ್ನುವ ಸಮಸ್ಯ ಕಾಡಿ ಅದರ ಪರಿಹಾರ ಬೇಗನೆ ಆಗಲಿಲ್ಲ.  ಅಮರ್ ಕಂಪನಿ ಸೇರಿದ ಒಂದು ವರ್ಷದ ನಂತರ ಕೆಲಸ ಕಳೆದು ಕೊಳ್ಳುವ ಭೀತಿ ಇದ್ದಾಗ ಸಹಾಯ ಮಾಡಿದ ಪುಣ್ಯಾತ್ಮ ಆನಂದ ನರಸಿಂಹನ್. ಒಂದು ಕಡೆ ಕಂಪನಿ ಮಾಲೀಕರ ಜೊತೆಗೆ ವಿರೋಧ  ಇನ್ನೊಂದು ಕಡೆ ತನಗೆ ಕಲಿಸಿದ ಗುರುಗಳು ಹಾಗೂ ಆಪದ್ಭಾ0ಧವರು ಅವರಿಗೆ ಅಸಮಾಧಾನ.

 

ಒಂದು ತಿಂಗಳು ಗತಿಸಿ ಹೋಯಿತು.


ಅಮರ್ ಹಾಗೂ ಪ್ರೇಮ ಮಧ್ಯ ಪ್ರೀತಿ ಪ್ರೇಮ ನಡೆದ ಸಂಗತಿ ಬಹಿರಂಗ ಆಗುವದಕ್ಕೆ ತಡವಾಗಲಿಲ್ಲ. ಇದರಿಂದ ಆನಂದ ನರಸಿಂಹನ್ ಕೋಪ ಬಂದು ಮಗಳಿಗೆ ಬುದ್ಧಿ ಹೇಳುವ ಪ್ರಯತ್ನ ವಿಫಲವಾಯಿತು. ಚಕ್ರಧರ್ ಗೆ ಕೂಡಾ ಈ ಬೆಳವಣಿಗೆಯಿಂದ ಸಿಟ್ಟು ಬಂದಿತು. ಸುದ್ದಿ ತಿಳಿದ ಅರವಿಂದ್ ಗೆ ತುಂಬಾ ಸಿಟ್ಟು ಬಂದು ಅಮರ್ ಗೆ ಭೇಟಿ ಆಗಿ ಪ್ರೇಮಳನ್ನು ಮರೆತು ಬಿಡು. ತಪ್ಪಿದರೆ ಪರಿಣಾಮ ಉಗ್ರ ವಾಗುವದು ಎಂದ. ಅದಕ್ಕೆ ಅಮರ್ ಸರಿಯಾದ ಉತ್ತರ ಕೊಟ್ಟು ಕಳಿಸಿದ. ಮುಂದೆ ಒಂದು ತಿಂಗಳು ಆದಮೇಲೆ ಅಮರ್ ನಿಗೆ ಕಂಪನಿಯವರು ಕೆಲಸದಿಂದ ತೆಗೆದು ಹಾಕಿದರು.

ಅದೇ ಸಮಯದಲ್ಲಿ ಒಂದು ಸ್ಪೋಟಕ ಸುದ್ದಿ ಬಹಿರಂಗವಾಯಿತು. ಅದರಂತೆ ಅರವಿಂದ್ ಆಗಲೇ ಒಂದು ವರ್ಷ ದ ಹಿಂದೆ ಗೌಪ್ಯವಾಗಿ ಮನೆಯಲ್ಲಿ ಕೆಲಸ ಮಾಡುವ ಹುಡುಗಿ ಜೊತೆಗೆ ಯಾರಿಗೂ ಹೇಳದೇ ಮದುವೆ ಆದ. ಆರು ತಿಂಗಳು ಹಿಂದೆ ಆಕೆಗೆ ಒಂದು ಹೆಣ್ಣು ಮಗು ಆಯಿತು. ಈ ಮಾಹಿತಿಯ ಪತ್ತೇದಾರಿ ಮಾಡಿದವರು ಅಮರ್ ನ ಆಪ್ತ ಕಾರ್ಯದರ್ಶಿ ನೇಹಾ.


"ಅಮರ್ ಇಲ್ಲಿ ಬರ್ತೀರಾ" ಎಂದು ಪ್ರೇಮ ಕರೆದಳು. ಅಮರ್ ಕೂಡಲೇ  ತನ್ನ ಹಳೆ ನೆನಪುಗಳಿಂದ ಹೊರ ಬಂದ  ಒಳಗೆ ಹೋದ.


"ಏನ್ರಿ, ಎಷ್ಟು ಸಲ ಕರೆಯಬೇಕು. ಯಾವ ಲೋಕದಲ್ಲಿ ವಿಹಾರ ಮಾಡುತ್ತಿದ್ದೀರಿ?"


"ಅದೇ, ಅಂದು ನಿನ್ನ ಮೋಹಕ ಕಣ್ಸನ್ನೇಯಿಂದ ನಾನು ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿ ನೆನಪುಗಳ ಲೋಕದಲ್ಲಿ ವಿಹಾರ ಮಾಡುವಾಗ  ನಿನ್ನ ಕರೆಯಿಂದ ಅದು ನಿಂತು ಹೋಯಿತು."


"ಅಂದಹಾಗೆ ಅಂದು ನಾನು ಅಷ್ಟು ಚಲುವೆಯಂತೆ ಹೇಗೆ ಅಂದುಕೊಂಡಿರಿ?"


"ಹೌದು, ನಿಸ್ಸಂಶಯವಾಗಿ ನೀನು ಚಲುವೆ. ನೀನು ಆಗರ್ಭ ಶ್ರೀಮಂತ ಅರವಿಂದ್ ಬಿಟ್ಟು ನನ್ನನ್ನು ಏಕೆ ಮದುವೆ ಆದೆ?"


"ನನಗೆ ಬೇಕಾಗಿದ್ದು ಹಣದಿಂದ ಶ್ರೀಮಂತ ಅಲ್ಲ,  ಗುಣದಿಂದ ಶ್ರೀಮಂತ."


"ನೋಡು, ನಿನ್ನನ್ನು ಮದುವೆ ಆಗಿ ನಾನು ಕಂಪನಿಯ ಪ್ರತಿಷ್ಠೆಯ ನೌಕರಿ ಕಳೆದುಕೊಂಡೆ. ನಿನ್ನ ಅಪ್ಪನಿಗೆ ಅವಧಿ ಪೂರ್ವ ನಿವೃತ್ತಿ ಮಾಡಿದರು. ಪ್ರಸ್ತುತ ನಿನಗೆ ಕುಗ್ರಾಮದಲ್ಲಿ ವಾಸ ಮಾಡುವ ಅನಿರೀಕ್ಷಿತ ಪರಿಸ್ಥಿತಿ ಒದಗಿ ಬಂದಿತು."


"ಅಮರ್ ಇದೆಲ್ಲವೂ ಗೊತ್ತಿದ್ದರೂ ನಾನು ನಿನ್ನ ಕೈ ಹಿಡಿದೆ. ಯಾಕೆ ಹೇಳು?"


"ನಾನು ಅಮರ ನೀನು ಪ್ರೇಮ, ನಮ್ಮಿಬ್ಬರ ಮಧ್ಯ ಇರುವದು ಮಧುರ."


"ಹೌದು! ಮೊದಲ ನೋಟ ಕಣ್ಸನ್ನೆಗಳ ಮೋಹಕ ಆಟ. ಕಣ್ಸನ್ನೆ ಭಾಷೆಯಲ್ಲಿ ನಾವಿಬ್ಬರೂ ಪರಿಣಿತರು ಇರುವದರಿಂದ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡೆವು.


ಇಬ್ಬರೂ ಬಿದ್ದು ಬಿದ್ದು ನಗುವಾಗ ತಮಗೆ ಅರಿವಾಗದೇ ಸಹಜವಾದ ಅಪ್ಪುಗೆ ಆಗಿ ರೋಮಾಂಚನಗೊಂಡರು. 


Rate this content
Log in

Similar kannada story from Romance