manjula g s

Romance Tragedy Inspirational

4  

manjula g s

Romance Tragedy Inspirational

ಅನುಸಂಧಾನ

ಅನುಸಂಧಾನ

2 mins
269


ಲೋಕದಲ್ಲಿ ಎಲ್ಲರ ಬಾಳು ಒಂದೇ ತೆರನಾಗಿ ಸಾಗುವುದಿಲ್ಲ ಮತ್ತು ಎಲ್ಲಾ ಬಯಕೆಗಳು ಈಡೇರುವುದೂ ಇಲ್ಲ. ಕಂಡ ಕನಸುಗಳು ನೂರಾರಿದ್ದರೂ ವಿಧಿಯಾಟದ ಮುಂದೆ ಎಲ್ಲವೂ ಗೌಣ.  ವಾಸ್ತವ ಏನಿದೆಯೋ ಅದನ್ನು ಜೀರ್ಣಿಸಿಕೊಳ್ಳಲೇಬೇಕು; ಮತ್ತು ಅನುಭವಿಸಲೇಬೇಕು. ಕಾಣುವ ಕನಸಿನ ಈಡೇರಿಕೆಗಾಗಿ ಹಂಬಲಿಸುವ ಮನ ಒಂದೆಡೆಯಾದರೆ; ಪಾಲಿಗೆ ಬಂದ ಪಂಚಾಮೃತವನ್ನು ಜೀರ್ಣಿಸಿಕೊಳ್ಳಬೇಕಾದ ಅನಿವಾರ್ಯ ಇನ್ನೊಂದೆಡೆ! ಇವೆರಡರ ನಡುವಿನ ಹೊಂದಾಣಿಕೆಯ ಬದುಕೇ ಅನುಸಂಧಾನ.  ರಮ್ಯಳ ಬಾಳಲ್ಲೂ ನಡೆದಿದ್ದು ಇದೇ ಅನುಸಂಧಾನ! 


ಎಲ್ಲ ಹೆಣ್ಣು ಮಕ್ಕಳಂತೆ ಬಾಲ್ಯದಿಂದಲೂ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿ ಬೆಳೆದಿದ್ದ ಅವಳಿಗೆ ಒಂದು ಹಂತದವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಅರ್ಥಾತ್ ಬಾಲ್ಯ ತುಂಬಿ ಹರೆಯ, ಯವ್ವನ ಎಲ್ಲವೂ ತವರಿನಲ್ಲಿ ಕಳೆದ ಅದ್ಭುತ ಕ್ಷಣಗಳು. ಇದೇ ಗುಂಗಿನಲ್ಲಿ ಲೋಕವೆಲ್ಲಾ ವರ್ಣಮಯವಾಗಿ ಕಂಡಿತ್ತು ಆಗ ಅವಳಿಗೆ.  ಅವಳ ಹೆತ್ತವರ ನೂರಾರು ಹಿತೋಪದೇಶಗಳು ರುಚಿಸದೇ ಹೋಗಿದ್ದು ಇದೇ ಕಾರಣಕ್ಕಾಗಿ! ವಿದ್ಯಾಭ್ಯಾಸ ಮಾಡಿಸಲು ದೂರದ ಪಟ್ಟಣಕ್ಕೆ ಕಳುಹಿಸಿದ್ದ ಹೆತ್ತವರ ನಂಬಿಕೆಯು, ಪ್ರೀತಿ ಪ್ರೇಮದ ನೆಪದಲ್ಲಿ ಮಂಜುಗಡ್ಡೆ ಕರಗಿದಂತೆ ಕರಗಿಸಿ ಬಿಟ್ಟಿದ್ದಳು ಆಕೆ; ತನ್ನ ಸಹಪಾಠಿ ಕಿಶೋರನ ಪ್ರೇಮದ ಬಲೆಯಲ್ಲಿ ಬಿದ್ದು!  ಮನೆಯವರ ಅನುಮತಿಗೂ ಕಾಯದೆ ಅವನನ್ನೇ ಮದುವೆಯಾಗುವ ನಿರ್ಧಾರ ಮಾಡಿದ್ದಳು. ಮನೆಯವರನ್ನು ಕಡೆಗಣಿಸಿ, ಪ್ರಣಯ ಪಕ್ಷಿಗಳಂತೆ ಹಾರಾಡಿಕೊಂಡಿದ್ದ ಅವರಿಗೆ ಮದುವೆಯವರೆಗೂ ಎಲ್ಲವೂ ಚೆನ್ನಾಗಿ ಇತ್ತು! ಹೊಣೆಗಾರಿಕೆ ತೆಗೆದುಕೊಳ್ಳುವ ಅಭ್ಯಾಸವಿಲ್ಲದೆ ಬೆಳೆದ ಇಬ್ಬರ ಬಾಳಲ್ಲೂ ದಾಂಪತ್ಯ ಬಂಧನ ಹೊರಲಾರದ ಮೂಟೆಯಾಗಿ ಮುಂದೆ ಪರಿಣಮಿಸಿತ್ತು. 


ಪರಸ್ಪರ ಪ್ರೀತಿ ದಂಡನೆಯ ಮಟ್ಟಕ್ಕೆ ತಿರುಗಿ, ಸಣ್ಣಪುಟ್ಟ ಮನಸ್ತಾಪಗಳು ದೊಡ್ಡ ಮಟ್ಟಕ್ಕೆ ಬಂದು ನಿಲ್ಲುತ್ತಿದ್ದಂತೆ, ಅತ್ತ ಇತ್ತ ಕುಟುಂಬಗಳು ನೆನಪಾಗ ತೊಡಗಿದವು.  ಇಬ್ಬರ ನಡುವೆ ಇದ್ದ ಅನ್ಯೋನ್ಯ ಪ್ರೀತಿಯ ತೋರಿಕೆ ಪಾರ್ಕು, ಮಾಲುಗಳು, ಪ್ರೇಕ್ಷಣೀಯ ಸ್ಥಳಗಳ ಸುತ್ತಾಟಗಳ ನಡುವೆ ಕಳೆದು ಹೋಗುತ್ತಿದ್ದಾಗ ದುಡಿಮೆ ಸಾಲದಾಗುತ್ತಾ ಬಂದಿತ್ತು. ಒಬ್ಬರನ್ನೊಬ್ಬರು ಬಿಟ್ಟು ದೂರಾಗುವ ಆಲೋಚನೆ ಬಂದದ್ದೂ ಆಗಲೇ! ಹಾಗೆ ದೂರಾಗುವಾಗ ಒಂಟಿತನ ಕಾಡುವ ಭಯವೂ ಇತ್ತು.  ರಮ್ಯಳಿಗೆ ತನ್ನ ಕನಸು ಛಿದ್ರವಾದ ಅನುಭವವಾದರೆ, ಅದೇ ಭಾವನೆ ಕಿಶೋರನಲ್ಲೂ ಮೂಡಿತ್ತು!  ಇವರಿಬ್ಬರ ನಡುವೆ ಇದ್ದ ನಿಜವಾದ ಪ್ರೀತಿಯ ತೀವ್ರತೆ ಅರ್ಥೈಸಿಕೊಂಡಿದ್ದ ಇವರ ಕುಟುಂಬದವರು ಮಧ್ಯ ಪ್ರವೇಶಿಸಲು ಹಿಂದೆ ಸರಿದರು!   ಒಂದು ದಿನ ಕಿಶೋರ ರಮ್ಯಾಳಗೆ ಹೇಳದೆ ಇದ್ದಕ್ಕಿದ್ದಂತೆ ದೂರವಾದ! ಅದೇ ದಿನ ಬೆಳಗ್ಗೆ ಇಬ್ಬರ ಪ್ರೀತಿ ಚಿಗುರೊಡೆಯಲು ರಮ್ಯಳ ಗರ್ಭ ಸೇರಿದೆ ಎಂಬ ಅಂಶ ಅವಳ ಅರಿವಿಗೆ ಬಂದಿತ್ತು. ಈ ವಿಷಯ ಮೊದಲೇ ತಿಳಿದಿದ್ದರೆ ಕರಗಿ ಹೋಗುವ ಸರದಿ ಕಿಶೋರನದಾಗುತ್ತಿತ್ತು! ವಿಪರ್ಯಾಸವೆಂದರೆ ಅವನು ಹಿಂತಿರುಗಿ ಮತ್ತೆ ಬರುವನೋ ಇಲ್ಲವೋ ಎಂಬ ಆತಂಕದಲ್ಲಿ ತಾನು ಒಂಟಿಯಾಗಿ ತನ್ನ ಮಗುವನ್ನು ಸಾಕಬೇಕಲ್ಲವೇ? ಎಂಬ ಚಿಂತೆಯಲ್ಲಿ ಮಹಡಿಯಿಂದ ಕೆಳಗೆ ಜಿಗಿದು ಪ್ರಾಣ ಕಳೆದುಕೊಳ್ಳುವ ಆತುರದ ನಿರ್ಧಾರ ಮಾಡಿದ್ದಳು ರಮ್ಯಾ. ಹಾಗೆಯೇ ಮಾಡಿದಳೂ ಸಹ! 


ಅದೃಷ್ಟವಶಾತ್ ಅವಳ ಪ್ರಾಣ ಉಳಿದಿತ್ತು; ಆದರೆ ಕಾಲಿನ ಮೂಳೆ ಮುರಿದು ಜೊತೆಗೆ ಮಡಿಲಲ್ಲಿ ಅರಳಬೇಕಾದ ಕೂಸು ಕರಗಿ ಹೋಗಿತ್ತು!  ವಿಚಾರ ತಿಳಿಯುತ್ತಲೇ ಮರಳಿ ಬಂದ ಕಿಶೋರ. ಜೊತೆಗೆ ಇಬ್ಬರ ಕುಟುಂಬವೂ ಬಂದಿತ್ತು. ಕುಟುಂಬಗಳ ಹಿರಿಯರೆಲ್ಲರೂ ಇಬ್ಬರಿಗೂ ಬುದ್ಧಿ ಹೇಳಿ ಹೋಗಿದ್ದರು.  ಅವಳ ಆರೈಕೆ ಅವನ ನಿತ್ಯದ ಕಾಯಕವಾಗಿ ಮಾಡುತ್ತಿದ್ದಾನೆ ಕಿಶೋರ. ಈಗ ಇಬ್ಬರಿಗೂ ಅವರವರ ನಡೆಯ ಬಗ್ಗೆ ಬೇಸರವಿದೆ; ಆದರೂ ಮುಂದೆ ಈ ರೀತಿಯ ತಪ್ಪಾಗದಂತೆ ಎಚ್ಚೆತ್ತುಕೊಳ್ಳುವ ಅರಿವು ಬಂದಿದೆ! 

ದುಡುಕುವುದು ಸರಿಯಲ್ಲವೆಂಬ ಜ್ಞಾನೋದಯದ ಜೊತೆಗೆ ಹಿರಿಯರ ಉಪದೇಶ "ಅರಳಲಿ ಬಾಳ ಹೂಬನ" ಎಂಬುದು ಮನದಲ್ಲಿ ಅಚ್ಚಳಿಯದೆ ನಿಂತಿದೆ.! ಮುಂದೆ ಅರಳಲೂ ಹದವಾಗಿದೆ....! 


Rate this content
Log in

Similar kannada story from Romance