ಐಶ್ವರ್ಯ ಬಂದ್ಲು...!*
ಐಶ್ವರ್ಯ ಬಂದ್ಲು...!*
ಈ ಜಗತ್ತಲ್ಲಿ ಯಾವುದೂ ಶಾಶ್ವತವಲ್ಲ ಎಂದು ಬಲ್ಲವರು ಹೇಳುತ್ತಾರೆ. ಅದೇನೋ ಗೊತ್ತಿಲ್ಲ,ಆದರೆ ಈ ಮಾತು ನಮ್ಮ ಜಂಗಮವಾಣಿ ಅಥವಾ ಮೊಬೈಲ್ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಅದರಲ್ಲೂ ನಮ್ಮ ಮೊಬೈಲ್ ಸ್ಟೇಟಸ್ನದ್ದು ಇವತ್ತಿದ್ರೆ ನಾಳೆ ಇಲ್ಲ ಎಂಬ ಪಾಡು!
ನಾನು ಆಗೊಮ್ಮೆ ಈಗೊಮ್ಮೆ ಸ್ಟೇಟಸ್ ನೋಡುವವನಾದರೂ ಒಮ್ಮೆ ಗಾಳದಲ್ಲಿ ಸಿಕ್ಕ ದೊಡ್ಡ ಮೇಲಿನಂತೆ ಒಂದು ಆಕರ್ಷಕ ಸ್ಟೇಟಸ್ ಗಮನ ಸೆಳೆಯಿತು. ಆ ಸ್ಟೇಟಸ್ ನೋಡಿ ಎಂತಾ ಗಟ್ಟಿ ಜೀವವೂ ಒಮ್ಮೆ ಮಗುವಿನಂತೆ ನಗದೇ ಇರದು. "ಕೊನೆಯ ದಾರಿ ಸಾವು ಒಂದೇ…" ಎಂಬ ನಟ ಉಪೇಂದ್ರ ಅವರ ʼಉಪ್ಪಿದಾದ ಎಂಬಿಬಿಎಸ್ʼ ಸಿನಿಮಾದ ಹಾಡಿನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ಆ ʼಐಶ್ವರ್ಯʼ ನೋಡುವುದೇ ಕಣ್ಣಿಗೆ ಹಬ್ಬ. ಆ ತುಂಟ ನಟನೆಗೆ ಮನ ಜಾರುವುದು ಅವಳ ಕಡೆಗೆ… ಉದ್ದನೆ ಜಡೆಯಂತೆ ಬಿಟ್ಟ ಬೈರಾಸ ಮರೆಸಿತು ಆಯಾಸ… ರಂಬೆ ಊರ್ವಶಿಯೂ ನಾಚುವಂತೆ ಸಂಗೀತಕ್ಕೆ ತಕ್ಕ ನಾಟ್ಯ ವೈಭವ ಮೆರೆದ ʼಐಶ್ವರ್ಯಾʼ ನಟನೆಗೆ ನಗದವರೇ ಕುರುಡರು!
ವೈರಲ್ ಆದ ಐಶ್ವರ್ಯ ಹಾಡಿಗೆ ತಕ್ಕ ಕಮಾಲ್ ಡ್ಯಾನ್ಸ್. ಈಗಲೂ ಆ ವಿಡಿಯೋ ತುಣುಕು ನೋಡುವಾಗ ನಕ್ಕು ನಕ್ಕು ಸುಸ್ತಾಗುತ್ತೇನೆ. ನಗುವಿನ ಕಡಲಲ್ಲಿ ತೇಲಾಡುವಂತೆ ಮಾಡಿದ ಮಕ್ಕಳ ಸೈನ್ಯಕ್ಕೆ ನನ್ನ ಮನದಾಳದ ವಂದನೆಗಳು .
