ಪ್ರಕೃತಿ ಸಹಜತೆಯಲ್ಲಿ ಭೇದಗಳಿಲ್ಲ
ಪ್ರಕೃತಿ ಸಹಜತೆಯಲ್ಲಿ ಭೇದಗಳಿಲ್ಲ


ಹೊಟ್ಟೆಯೊಳಗೆ ಇನ್ನೂ ಜನಿಸದ ಕಂದಮ್ಮನ
ಹೊತ್ತು ನಡೆಯುತ್ತಿದ್ದ ಮಂಗವೊಂದನ್ನ ಕಂಡ ಚಿರತೆ
ಮಂಗನ ಮೇಲೆ ರಭಸದಲ್ಲಿ ಎರಗಿ ಹಿಡಿಯಲು,
ಬೆದರಿದ ಮಂಗ ತಾನು ಸಾಯುವ ಮುನ್ನ
ತನ್ನ ಕಂದಮ್ಮಗೆ ಜನ್ಮ ನೀಡಿತ್ತು;
ಅರಚಾಡುತ್ತಿದ್ದ ಮರಿ ಮಂಗವ ಕಂಡ ಚಿರತೆ
ತಾಯಿ ಮಂಗವನ್ನೂ ತಿನ್ನದೆ, ಮರಿಯನ್ನೂ ತಿನ್ನದೆ,
ಸತ್ತುಹೋದ ತಾಯಿ ಮಂಗವ ನೋಡಿ ಮರುಗಿ,
ಮರಿಯನ್ನ ಎತ್ತಿಕೊಂಡು ಮರದ ಮೇಲೆ ಕುಳಿತು
ಅದಕ್ಕೆ ರಕ್ಷಣೆ ನೀಡುವ ಚಿಂತೆಯಲಿ ಮುಳುಗಿತ್ತು;
ಮಂಗವನ್ನ ಹಿಡಿಯುವ ಮುನ್ನ ಅದು ಗರ್ಭಿಣಿಯೆಂದು
ತಿಳಿಯದ ಚಿರತೆಗೆ ಮರಿ ಮಂಗವನ್ನ ಹೇಗೆ ಸಾಕುವುದು
ಎಂಬ ತಿಳುವಳಿಕೆ ಇಲ್ಲದೆ, ಅದರ ರಕ್ಷಣೆಯ ಕಾಳಜಿ ಹೊತ್ತು
ಸದಾ ಅದರ ಬಳಿಯೇ ಕುಳಿತಿರುವ ಜೊತೆಗೆ
ಎತ್ತ ಹೋದರಲ್ಲಿಗೆ ಅದನ್ನೂ ಎತ್ತಿಕೊಂಡು ಸಾಗುತ್ತಿತ್ತು;
ಪ್ರಕೃತಿದತ್ತ ಮಿತ ತಿಳುವಳಿಕೆಯಲ್ಲೇ ಅಡಗಿದ್ದ ವಾತ್ಸಲ್ಯ
ಮರಿ ಮಂಗವ ರಕ್ಷಿಸುವಲ್ಲಿ ಚಿರತೆಯನ್ನ ಪ್ರೇರೇಪಿಸಿತ್ತು,
ಪ್ರಕೃತಿ ಸಹಜವಾದ ತನ್ನ ಇರುವಿಕೆಯಲ್ಲಿ
ಇತರ ಪ್ರಾಣಿಗಳನ್ನ ಕೊಂದು ತಿನ್ನುವ ಕ್ರೂರತ್ವವಿದ್ದರೂ
ಚಿರತೆ ಒಂದು ಕ್ರೂರ ಪ್ರಾಣಿಯೆಂದು ಕರೆಯಲಾದೀತೇ?;
ಕ್ರೂರತೆಯಾಗಲೀ, ಮೃದುತ್ವವಾಗಲೀ ನಮ್ಮ ಕಲ್ಪನೆಯಷ್ಟೇ,
ಪ್ರಕೃತಿದತ್ತ ಸ್ವಭಾವವು ತಮ್ಮ ಇರುವಿಕೆಗೆ ಅಗತ್ಯವೆನಿಸಿರಲು
ಪ್ರತಿಯೊಬ್ಬರ ಸಹಜತೆಯ ಪ್ರಕ್ರಿಯೆಗಳನ್ನ ಒಪ್ಪಿಕೊಳ್ಳಬೇಕು,
ಮನದ ಮುಂದಣ ಅಸೆ, ಭಯಗಳು ಹುಟ್ಟುಹಾಕಿದ
ಯಾವುದೇ ಅಸಹಜತೆಯನ್ನ ನಾವು ಧಿಕ್ಕರಿಸಲೇಬೇಕು.