64. ನನ್ನ ಪ್ರತಿಬಿಂಬದೊಡನೆ ಒಂದು ಸಂವಾದ
64. ನನ್ನ ಪ್ರತಿಬಿಂಬದೊಡನೆ ಒಂದು ಸಂವಾದ
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ಯಾವುದೇ ನುಣುಪಾದ ಮೇಲ್ಮೈ ಸಿಕ್ಕರೆ ಸಾಕು ಎದುರು ಬಂದುಬಿಡುವೆ
ಅಸ್ಪಷ್ಟತೆಯಲ್ಲೂ ನೀನಿರುವುದನ್ನ ತಕ್ಷಣ ನನಗೆ ತಿಳಿಸಿಬಿಡುವೆ
ಗಾಜಿನಿಂದಾದ ಕನ್ನಡಿಯಲ್ಲಿ ಮಾತ್ರ ನಿನ್ನ ಸ್ವರೂಪ ಅತ್ಯದ್ಭುತ
ಆದರೆ ಬರೀ ಗಾಜಿನಲ್ಲಿ ನೋಡಲು ನೀನೇಕೆ ಪಲಾಯನಗೈಯುವೆ?
ನಿನಗೆ ನಿನ್ನದೇ ಸ್ವಂತ ವ್ಯಕ್ತಿತ್ವ ಇರಲಾರದೆಂದು ತೋರುತ್ತದೆ
ಏಕೆಂದರೆ, ನಾ ನಕ್ಕರೆ ನೀನೂ ನಗುವೇ, ನಾ ಅತ್ತರೆ ನೀನೂ ಅಳುವೆ
ನಾನಣಕಿಸಿದರೆ ನೀನೂ ಅಣಕಿಸುವೆ, ಭೆದರಿಸಿದರೆ ನೀನೂ ಭೆದರಿಸುವೆ
ನನ್ನ ಮುಖಚರ್ಯೆಗಳನ್ನ ಸುಮ್ಮನೆ ಅನುಕರಿಸುವುದೇ ನಿನ್ನ ಕೆಲಸ
ಆದರೂ ನಿನ್ನಲ್ಲೊಂದು ಸ್ವಂತಿಕೆ ಇರುವುದನ್ನ ನಾನು ಕಂಡಿರುವೆ
ನಾನೇನು ಮಾಡಿದರೂ ಕೇಳಿಸುವ ಹಾಗೆ ಪ್ರತಿ ಉತ್ತರ ನೀಡದಿರುವೆ
ನನ್ನ ಎಡ ಬಲ ಭಾಗಗಳನ್ನ ನೀನು ಬಲ ಎಡಗಳಾಗಿ ತಿರುಚಿಸುವೆ
ನಾ ಕ್ಷಣಕಾಲ ಕಣ್ಮುಚ್ಚಿದರೆ ನೀನು ಸಂಪೂರ್ಣ ಅದೃಶ್ಯನಾಗಿಬಿಡುವೆ
ನೀ ಹೀಗೆ ಇರುವಲ್ಲಿ ನಿನ್ನ ಪ್ರಾಮಾಣಿಕತೆ ನನಗೆ ಮನದಟ್ಟಾಗಿದೆ
ಅದಕ್ಕಲ್ಲವೇ ನಿನ್ನ ನೋಡದೆ ನನ್ನ ದಿನಚರಿಗಳು ಮುಂದೆ ಸಾಗವು
ನಿನ್ನ ನನ್ನ ಈ ಒಡನಾಟದಲ್ಲಿ ನನಗೊಂದು ಕುತೂಹಲ ಮೂಡಿದೆ
ನಿನ್ನ ಅಂತರಂಗವನ್ನ ನಾನೊಮ್ಮೆ ತಿಳಿದುಕೊಳ್ಳಬಹುದೇ ಎಂದು
ನನ್ನ ಅನುಕರಿಸುವುದ ಬಿಟ್ಟು ಬೇರೇನೂ ನಿನಗೆ ತಿಳಿಯದಿರುವಾಗ
ನಿನ್ನಂತರಂಗದಲಿ ನನ್ನಂತರಂಗವನೇ ಕಾಣಲು ನಾನು ಸಿದ್ಧನಿಲ್ಲ
ಆದರೂ, ನಿನ್ನ ಪ್ರಾಮಾಣಿಕತೆ ನನ್ನಲ್ಲಿ ಧೈರ್ಯ, ವಿಶ್ವಾಸ ತುಂಬಿದೆ
ನಾನು ಯಾರು ಎಂಬುದನ್ನ ನಿನ್ನಿಂದ ಅರಿಯಲು ಮನಸ್ಸು ಕಾದಿದೆ.