"ನಾವೇಕೆ ಹೀಗೆ ಬದುಕುತಲಿಹೆವು?"
"ನಾವೇಕೆ ಹೀಗೆ ಬದುಕುತಲಿಹೆವು?"
ಮಣ್ಣಿನೊಳಗೆ ಒಮ್ಮೆಗೆ ಒಗೆದಿಟ್ಟ ವಿಭಿನ್ನ ಬೀಜಗಳು
ಒಳಗಣ ಅಂಧಕಾರದಲ್ಲಿ ಮೊಳಕೆಯೊಡೆವವು ಜೊತೆಯಾಗಿ,
ಮಣ್ಣ ಭೇದಿಸಿಕೊಂಡು ಹೊರ ಪ್ರಪಂಚವ ಕಾಣುತ್ತಲೇ
ತಮ್ಮ ವಿಭಿನ್ನ ಗುರುತುಗಳನ್ನ ಮರೆತಂತೆ ಬೆಳೆವವು ಗಿಡವಾಗಿ;
ವಿಭಿನ್ನ ಜಾತಿ ಹೂ ಗಿಡಗಳು ಬೆಳೆಯುತಿಹವು ನೆರೆಯವರಂತೆ
ಯಾರೊಬ್ಬರನು ಇಷ್ಟಪಟ್ಟರೂ ಪಡಲಾರವು ಅಸೂಯೆಯ
ತಾವಾಗಿಯೇ ಬೆಳೆವವು ಒಬ್ಬರ ಮೇಲೊಬ್ಬರು ಅವಲಂಬಿಸದೆ
ಸೂಸುತ ಅರ್ಪಣಾ ಭಾವದಿಂದೊಪ್ಪುವ ಸುಮಧುರ ಸೌಂದರ್ಯ;
ವಿಭಿನ್ನ ಜಾತಿ ಮುದ್ದು ಪ್ರಾಣಿಗಳು ಒಂದೆಡೆ ಇರಬಲ್ಲವು ಸಂತಸದಿ
ತಮ್ಮೊಡೆಯನು ಪೋಷಿಸುತ್ತಿರಲು ಅನುದಿನವೂ ಅಕ್ಕರೆಯಿಂದ;
ಪಡಲಾರವು ಎಂದಿಗೂ ಅಸೂಯೆ, ಇರಲಾರದು ಭಯ ಅವರೊಳಗೆ
ಬದುಕುತಾ ಸಾಗುವವು ಬಾಹ್ಯ ವಿಭಿನ್ನತೆಯ ಅರಿವಿಲ್ಲದಂತೆ;
ನಾವೇಕೆ ಹೀಗೆ ಬದುಕಲೂ ಆಗದಂತೆ, ಅಳಿಯಲೂ ಆಗದಂತೆ,
ಅನ್ಯರ ಮೇಲೆ ಅವಲಂಬಿತರಾಗಿ ಕಂಡೂ ಕಾಣದಂತೆ ಇರಲಾಗದೆ,
ವಿಭಿನ್ನತೆಗಳ ಹುಟ್ಟುಹಾಕಿ, ಅವುಗಳಲ್ಲೇ ಒಲುಮೆ ಹಿರಿಮೆ ತೋರಿ,
ತಾರತಮ್ಯದಿ ನಮ್ಮೊಳಗೇ ಒಡಕು ಘರ್ಷಣೆಗಳಿಂದ ಬದುಕುತಲಿಹೆವು?