ರಕ್ಷಾ ಬಂಧನ
ರಕ್ಷಾ ಬಂಧನ




ಮರ್ದಿಸಲು ಶಿಶುಪಾಲನ
ಮುರಾಂತಕ ಶ್ರೀಕೃಷ್ಣನು
ಸುದರ್ಶನ ಚಕ್ರವನ್ ಬಿಟ್ಟನಾ ವೇಳೆ
ವೃಣವಾಯಿತು ಬೆರಳಿಗೆ
ತಟ್ಟನೆ ಅದ ನೋಡಿ ಪಾಂಚಾಲಿ!
ಹರಿದಳಾಕೆ ತನ್ನ ಸೀರೆ ಸೆರಗ
ಕಟ್ಟಿದಳದುವೆ ಅರ್ತಿಯಿಂದದಿ
ಸಹೋದರನ ಭಾವದಿಂದಲಿ
ಕರಗಿದನಾ ಕರುಣೆಗೆ ಮುಕುಂದ
ಹಾರೈಸಿದನಾಕೆಗೆ ಮುದದಿಂದಲಿ
ಪಾತ್ರಳಾಗು ಅಣ್ಣನ ಶ್ರೀರಕ್ಷೆಗೆ
ನಿತ್ಯ ಕಾಯುವೆನೆಂಬ ಒಸಗೆಗೆ!
ದುಶ್ಯಾಸನನ ನೀಚತನವಂದು
ಎಸಗಿತು ದ್ರೌಪದಿಗಪಮಾನ
ರಕ್ಷಣೆಗೆಂದೆ ವಸುದೇವನ ಆಗಮನ
ತಂದಿತು ರಕ್ಷಾ ಬಂಧನ ಶ್ರೇಷ್ಠ ಘಳಿಗೆ
ಅಣ್ಣ-ತಂಗಿಯ ಬಾಂಧವ್ಯದ ಬೆಸುಗೆ!
ಸಂದಿತಂದು ರಕ್ಷೆಯ ನೆಪದಲಿ
ಶ್ರಾವಣ ಮಾಸದ ಹುಣ್ಣಿಮೆಯಲಿ
ರಕ್ಷಾ ಬಂಧನ ಆಚರಣೆಯು ಬಂದು
ರಕ್ಷಣೆ ಕೋರಿ ಸಿಹಿಯನು ತಿನಿಸಿ
ರಾಗದಲಿ ರಕ್ಷಾ ದಾರವ ಬಿಗಿದು
ಬೇಡುವಳ್ ತಂಗಿ ಆಶೀರ್ವಚನ
ಅಣ್ಣನೀಯುವ ಉಡುಗೊರೆಯ
ಮುನಿಸನು ಮರೆಸುವ ಬಂಧವಿದು
ಮಮತೆಯನುಳಿಸುವ ಬಾಂಧವ್ಯ
ಅನಂತ ಆನಂದದ ಆಂತರ್ಯ
ಸಂಬಂಧವನುಳಿಸುವ ಸಾನಿಧ್ಯ
ಈ ರಕ್ಷಾ ಬಂಧನದ ಸೌಂದರ್ಯ!!