ಮಾತು
ಮಾತು


ಮಾತು ಗಾಂಗೇಯನನು ಭೀಷ್ಮನಾಗಿಸಿತು
ಶಂತನುವ ಮಾತ್ಸುತನ ಮರಣ ತಡೆದಿತ್ತು
ಕುಂಭಸಂಭವ ತಾನು ಶಿಷ್ಯಗಿತ್ತಿಹ ಮಾತು
ಕಲಿಸದಾ ಶಿಷ್ಯನಾ ಬೆರಳ ನುಂಗಿತ್ತು
ಮಾತು ರಾಧೇಯನನು ಕರ್ಣನಾಗಿಸಿತು
ಭೀಮನಾ ಮಾತುರಿಸಿ ಉರಗಪತಾಕನನು
ಕುರುಕುಲಾರ್ಕನ ಬದುಕನಸ್ತವೈದಿಸಿತು
ಶಕುನಿ ಮಾತಲೆ ವಂಶ ನಿರ್ವಂಶವಾಯ್ತು
ಮಾತು ಶ್ರೀರಾಮನನು ಕಾಡಿಗೆಳೆಸಿತ್ತು
ಮಾತು ಸೌಮಿತ್ರಿಯನು ಜೊತೆಗೆ ಕಳಿಸಿತ್ತು
ಮಾತು ಭರತನ ತಾಯ ಬೇರೆ ಮಾಡಿತ್ತು
ಮಾತೆ ಮನುಕುಲಕೆ ಬಾಳದಿಕ್ಸೂಚಿಯಂತೆ
ಹರಿಯಿಂದ ಪಾರ್ಥಂಗೆ ಹರಿದುಬಂದಿತ್ತು
ನಿತ್ಯಸತ್ಯದ ನುಡಿಯು ಇಕ್ಷ್ವಾಕುದೊರೆಯನ್ನು
ಸತಿಸುತರ ಮಾರಿಸುವ ಮಾರಿಯಾಯ್ತು
ಇಷ್ಟೆಲ್ಲ ನಡೆದರೂ ಕೊನೆಗೆ ಏನಾಯ್ತು?
ನುಡಿದಂತೆ ನಡೆದವನ ಕೀರ್ತಿ ಹರಡಿತ್ತು
ಮಾತಿಗದರದೆ ಮೌಲ್ಯ ಸೃಷ್ಟಿಯಾಗಿತ್ತು
ತಾಯಾಣೆ ಎಂದೊಡನೆ ಜಗವೆ ಬಾಗಿತ್ತು
ಆಮಾತಿಗಾರದೂ ಸಾಕ್ಷಿ ಬೇಡಿತ್ತು
ಮಾತಿನಿಂದಲೆ ಕದನ ಮಾತಿನಿಂದಲೆ ಸದನ
ಮಾತುಗಳನಾಡಿದವ ಬೆಲೆಯ ನೀಡಲು ಮರೆಯೆ
ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು
ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು