ಮಕ್ಕಳು ಓದಬೇಕಾದ ಇತಿಹಾಸ
ಮಕ್ಕಳು ಓದಬೇಕಾದ ಇತಿಹಾಸ


ಓದಬೇಕಿದೆ ನಮ್ಮ ಮಕ್ಕಳು ಇತಿಹಾಸವನ್ನು
ನಮ್ಮ ಸೈನಿಕರು ಬರೆದಂಥ ಇತಿಹಾಸವನ್ನು
ದೇಶ ವಿಭಜನೆಯಂಥ ವಿಷಭರಿತ ನಿರ್ಧಾರ
ಇಂದಿಗೂ ದೇಶಕ್ಕೆ ಕವಿಸುತಿದೆ ಅಂಧಕಾರ
ಅಂದವರು ಕೈಕೊಂಡ ಕೆಟ್ಟ ನಿರ್ಧಾರಕ್ಕೆ
ಬೆಳೆದು ಬಲಿಯಿತು ವಿಶಾಲ ಪುಕ್ಕ ರೆಕ್ಕೆ
ನೆಟ್ಟ ದ್ವೇಷದ ಬೀಜ ಬೆಳೆದು ಹೆಮ್ಮರಕೆ
ತರುತಿದೆ ಸಂಚಕಾರವ ಸೈನಿಕರ ಪ್ರಾಣಕ್ಕೆ
ಎದ್ದೇಳು ಭಾರತವೆ ನಿದ್ರೆಯಿಂದಿನ್ನು
ಅಳಿಸಿಬಿಡು ಭಯೋತ್ಪಾದನೆಯನ್ನು
ಶಾಂತಿಶಾಂತಿ ಎನ್ನುವ ಷಂಡತನವೇಕೆ
ಯುದ್ಧದಲಿ ಅರಿಗಣವ ಉಳಿಸಲೇಕೆ
ಹುಟ್ಟಿದವರೆಲ್ಲರೂ ಸಾಯುವುದು ಖಚಿತ
ಎಂದೋ ಬರುವ ಆ ಕಾಲ ಈಗ ಬರಲುಚಿತ
ನಿಷ್ಕರುಣರಾಗಿ ನಾವ್ ನುಗ್ಗಬೇಕಿದೆ ಇಂದು
ನಿಷ್ಕಾರಣದಿ ಕೊಂದವರ ಕೊಲ್ಲಲೆಂದು
ನಿಜವಾಗಿಸಲು ಬೇಕು ಬೋಸರಂದಂದುದ
ಕೊಲೆಗಡುಕರೆದುರೇಕೆ ಅಹಿಂಸಾವಾದ
ಹಸಿದುಕಂಗೆಟ್ಟವನಿಗೇಕೆ ಧರ್ಮದಬೋಧೆ
ಶೌರ್ಯ ಪ್ರವಾಹವದು ಹರಿದು ಬರಲಿಂದೆ
ದಿನಹುಟ್ಟಿ ಬಹ ಸೂರ್ಯ ಕಂಗೆಡಲಿ ತಾನು
ನುಡಿಸೋಣ ಶತೃಗಳ ಮರಣಮೃದಂಗವನು
ಆತ್ಮಹತ್ಯೆಯಾಗಲಿ ಹೃದಯಸ್ಥ ಕರುಣೆಗೆ
ಸಾವ್ ಬರಲಿ ಅರ್ಥ ಹೀನ ಮಾನವತೆಗೆ
ನೆನೆಯಲೀ ಭರತಭುವಿ ರಕ್ಕಸರ ಶೋಣಿತದೆ
ಸಿಗಲಿ ಮರಣಿಸಿದ ಸೈನಿಕರಿಗಾತ್ಮಶಾಂತಿ
ದೇಶದೊಳಗಿದ್ದು ಶತೃಗಳ ಬೆಂಬಲಿಪರೆಲ್ಲರ್ಗೆ
ಬಂದೆರಗಲಿ ಶತೃವಿನ ಸಾಲು ಮೃತವಾರ್ತೆ
ಯಾರ ಮೆಚ್ಚಿಸಲೇಕೆ ಆರನೊಪ್ಪಿಸಲೇಕೆ
ನಮ್ಮ ಸೈನಿಕರೆಮ್ಮ ಸೊತ್ತಲ್ಲವೇ?
ನಮ್ಮ ಕಾವರಿಗೆಲ್ಲ ದಾರುಣದ ಸಾವೇಕೆ
ಕಂಡಾಗ್ಯೂ ಕೈಕಟ್ಟಿ ಕೂರಲೇಕೆ?
ಸೌಮ್ಯತೆಯು ದೌರ್ಬಲ್ಯ ವಲ್ಲವೆನ್ನುವ ನಿಜವು
ತಿಳಿಯಲಿಂದೇ ಈ ಸುತ್ತಣದ ಜಗವು
ಸಹನೆಯದು ಮೀರಲ್ಕೆ ನಮ್ಮ ಸೈನಿಕರೆಲ್ಲ
ರುದ್ರತಾಂಡವ ಗೈವ ಸೌನಿಕರೆ ಎಲ್ಲ
ಸ್ವಾತಂತ್ರ್ಯವನು ಸ್ವೇಚ್ಛೆಯಾಗಿಸಿಕೊಂಬ
ಭಾರತವ ಹೀನೈಸುವರೂ ಸಾಯಲಿ
ಹಿಂಸೆ ಕೊಲೆಯಲಿ ಮಲೆತ ಶತೃ ನಾಡಿತ್ತೆಂಬ
ಇತಿಹಾಸ ಪುಸ್ತಕದಿ ಅಚ್ಚಾಗಲಿ
ಓದಲಿ ನಮ್ಮ ಮಕ್ಕಳು ಇತಿಹಾಸವನ್ನು
ನಮ್ಮ ಸೈನಿಕರು ಬರೆದಂಥ ಇತಿಹಾಸವನ್ನು
ರಾಷ್ಟ್ರ ಭಕ್ತಿಯೊಳೆಲ್ಲ ಮುಳುಗೇಳುತಿರಲೆಲ್ಲ
ತುಂಬಿರಲಿ ರಾಷ್ಟ್ರ ಪ್ರೇಮ ಹೃದಯವನ್ನೆಲ್ಲ