ಭಾರತೀಯ ಹಬ್ಬಗಳು
ಭಾರತೀಯ ಹಬ್ಬಗಳು
ಜಗವೆಲ್ಲಾ ಸುತ್ತಿದರೂ, ಸಿಗದೊಂದು ವೈಭವ
ನೋಡಲ್ಲಿ ತುಂಬಿದೆ ಎಲ್ಲೆಲ್ಲೂ ಸಡಗರ,
ಶಿರದಿಂದ ಪಾದದವರೆಗೂ ರಂಗು ತುಂಬಿರಲು,
ಹಲವಾರು ಬಣ್ಳಗಳು ಅವಳೊಳಗೆ ರಂಗಿಸಿವೆ...
ತಲೆಯ ಮೇಲೆ ಸೊಂಪಾದ ಶ್ವೇತವರ್ಣದ ಕೇಶ
ಉಟ್ಟಿಹಳು ಹಸಿರು ಬಣ್ಣದ ಸೀರೆ,
ಕೋಟಿ ಮಕ್ಕಳ ಮಮತೆಯಲಿ ಬೆಳೆಸಿಹಳು,
ತಾಯಾಗಿ ಕಾಯುತಿಹಳು ಎಲ್ಲರ ತನ್ನೊಳಗೆ...
ಅಡಿಯಿಂದ ಮುಡಿವರೆಗೂ ನಾನಾ ವೈಭವದಿ
ಹೆಜ್ಜೆಯನಿಡುತ ನಡೆದಿಹಳು ಸುಗ್ಗಿಯ ಸಂಭ್ರಮದಿ,
ಕೇರಳದಿ ಓಣಂನ ಸಂಭ್ರಮವ ಆಲಿಂಗಿಸಿ
ತಮಿಳುನಾಡಿನ ಪೊಂಗಲ್ ನ ಸ್ವಾದವ ಸವಿದಿಹಳು...
ಕನ್ನಡತಿಯೊಡಲಲ್ಲಿ ಚಿಗುರು ಬೇವು ಬೆಲ್ಲದೊಡನೆ
ಯುಗಾದಿಯ ಸವಿಯುತ ಕಾವೇರಿಯಲಿ ಮಿಂದಿಹಳು,
ಪಶ್ಚಿಮಕೆ ಹೊರಟಿಹಳು ದುರ್ಗೆಯ ನೆನೆಯಲು
ತಿರುಪತಿಯ ವೆಂಕಟನ ದರ್ಶನವ ಕಣ್ತುಂಬಿ...
ಉತ್ತರದ ಜನರಲ್ಲೂ ಬೆಳಕನ್ನು ಚೆಲ್ಲಿಹಳು
ದೀಪಾವಳಿಯ ಹೆಸರಲಿ ಮನೆಗಳನು ಬೆಳಗುತಾ,
ಜಗವೆಲ್ಲಾ ನಗುತಿರಲು ಸುಗ್ಗಿಯ ಸಂಭ್ರಮದಲಿ
ರಂಗನ್ನು ತುಂಬಿಹಳು ಹೊಲಿಯ ಹೆಸರಿನಲಿ...
ಪ್ರತಿನಿತ್ಯ ನಗುತಿಹಳು ಎಲ್ಲರ ಮನೆಗಳಲಿ
ಸಂಭ್ರಮದ ಹಸಿರಿನಲಿ, ಹಬ್ಬದ ಹೆಸರಿನಲಿ...