ಅಮ್ಮನ ವರ್ಣಮಾಲೆ
ಅಮ್ಮನ ವರ್ಣಮಾಲೆ
ಅ ಅಮ್ಮ, ಅಂದ ಚಂದದ ನಮ್ಮಮ್ಮ
ಆ ಆಟದ ಜೊತೆಗೆ ಪಾಠವ ಕಲಿಸುವ ನಮ್ಮಮ್ಮ
ಇ ಇರುವುದರಲ್ಲೆ ಖುಷಿಯಾ ಪಡುವ ನಮ್ಮಮ್ಮ
ಈ ಈ ರೀತಿಯ ಪದ್ಯ ಬರಿಯಲು ಪ್ರೇರಣೆ ನೀಡಿದ ನಮ್ಮಮ್ಮ
ಉ ಉದಯಿಸಿದ ಸೂರ್ಯನ ಕಿರಣಗಳೇ ನಮ್ಮಮ್ಮ
ಊ ಊಟವೆಂದರೆ ಪ್ರೀತಿಯನೆ ಉಣಬಡಿಸುವಳು ನಮ್ಮಮ್ಮ
ಋ ಋತುಗಳು ಯಾವುದೇ ಇರಲಿ, ಆರೋಗ್ಯದಿಂದಿರುವಳು ನಮ್ಮಮ್ಮ
ಎ ಎತ್ತಿನ ಹಾಗೆ ಬೆವರಳಿಸಿ ದುಡಿಯುವಳು ನಮ್ಮಮ್ಮ
ಏ ಏಣಿಯ ಹಾಗೆ ಜೀವನದಿ ಮಕ್ಕಳ ಮೇಲೇರಿಸುವ ನಮ್ಮಮ್ಮ
ಐ ಐದು ರೂಪಾಯಿ ಕೇಳಿದರೆ, ಹತ್ತು ರೂಪಾಯಿ ಕೊಡುವಳು ನಮ್ಮಮ್ಮ
ಒ ಒಂದೇ ಒಂದು ಸ್ಯಾರಿಯನು ಎಂದೂ ಕೇಳದ ನಮ್ಮಮ್ಮ
ಓ ಓದಿಸಿ, ಬರೆಯಿಸಿ, ಜೀವನದ ಓಟವನು ಗೆದ್ದಿರುವಳು ನಮ್ಮಮ್ಮ
ಔ ಔಷಧಿ ಮಾಡುವ ನಮ್ಮಮ್ಮ, ಪದವಿ ಇಲ್ಲದ ವೈದ್ಯೆ ನಮ್ಮಮ್ಮ
ಅಂ ಅಂಗಿಯ ಒಲಿಸಿ, ತನ್ನ ಸೆರಗಿನಲಿ ಸಿಂಬಳ ಒರೆಸುವ ನಮ್ಮಮ್ಮ
ಅಃ ಅಃ ಇದೇ ನಮ್ಮ ನಿಮ್ಮಮ್ಮನ ಸ್ವರಗಳು ಕೇಳಮ್ಮ!!!
ಕ - ಕನ್ನಡದಲ್ಲೇ ನುಡಿದು ನಡೆದು, ಕನ್ನಡ ನನ್ನುಸಿರು ಎನುವ ನಮ್ಮಮ್ಮ
ಖ - ಖಡ್ಗವನು ಹಿಡಿಸಿ ಜೀವನದ ಯುದ್ಧದಲಿ ಗೆಲಿಸಿದಳು ನಮ್ಮಮ್ಮ
ಗ - ಗಣಪತಿ ವಿದ್ಯಾ ದೇವತೆ, ಹಾಗೆ ನಮ್ಮೆಲ್ಲರ ದೇವತೆ ನಮ್ಮಮ್ಮ
ಘ - ಘಂಟೆಯ ಮೊಳಗಿಸಿ ಪೂಜೆಯ ಮಾಡಿ, ಮನೆಯೇ ದೇವಸ್ಥಾನವನಾಗಿ ಮಾಡಿದ ನಮ್ಮ ನಿಮ್ಮೆಲ್ಲರ ಅಮ್ಮ
ಚ - ಚಳಿಯಾದರೆ ಸಾಕು ತನ್ನ ಕಂಬಳಿಯನೇ ಹೊದಿಸುವಳು ನಮ್ಮಮ್ಮ
ಛ - ಛತ್ತರಿಯಲ್ಲಿ ತನ್ನ ಮಕ್ಕಳ ಸೇರಿಸಿ, ಮಳೆಯಲಿ ನೆನೆಯುವಳಮ್ಮ
ಜ - ಜಳಕ ಮಾಡಿಸಿ ಮೈಯನು ಒರೆಸಿ ಜೋಗುಳ ಹಾಡುವ ನಮ್ಮಮ್ಮ
ಝ - ಝರಿಯನು ನೋಡಲು ಕೇರಿಯನೇರಿಸಿದಳು ನಮ್ಮಮ್ಮ
ಟ - ಟ ಟಾ ಹೇಳಿ ಬಾಟ ಚಪ್ಪಲಿಯನ್ನೇ ಕೊಡಿಸುವ ನಮ್ಮಮ್ಮ
ಠ - ಠ ಇಂದ ಪಾಠವನು ಬಾಯಿಪಾಠ ಮಾಡಿಸಿದಳು ನಮ್ಮಮ್ಮ
ಡ - ಡಮರುಗ ಎನಗಾಗಿ ಜಾತ್ರೆಯಲಿ ಕೊಡಿಸಿದಳು ನಮ್ಮಮ್ಮ
ಢ - ಢಕ್ಕೆಯ ಸದ್ದು ಕೇಳಿಸಿದೊಡನೆ ನನ್ನನು ತೋಳಲಿ ಬಂಧಿಸಿದಳಮ್ಮ
ತ - ತಕ್ಕಡಿಯ ಬಳಸಿ ಮಸಾಲೆ ಅಳೆದು ಸಾರನು ಮಾಡುವಳಮ್ಮ
ಥ - ಥ ಥೈ ಥ ಥೈ ನೃತ್ಯವನ್ನು ಮಾಡಲು ಕಲಿಸಿದಳು ನಮ್ಮಮ್ಮ
ದ - ದನ ಕರು ಸಾಕಿ , ಹಾಲನು ಕರೆದು ಕುಡಿಯಲು ಕೊಡುವಳಮ್ಮ
ಧ - ಧರ್ಮದ ದಾರಿಯೇ ದೈವವೆಂದು ತಿಳಿಸಿ ಕೊಟ್ಟಳು ನಮ್ಮಮ್ಮ
ನ - ನನ್ನ ನಿನ್ನ ಎಂಬ ಬೇಧವ ಮಾಡದೆ ಎಲ್ಲರೂ ಒಂದೆ ಎನ್ನುವಳಮ್ಮ
ಪ - ಪಠ್ಯ ಪುಸ್ತಕವೇ ನಿನ್ನ ಜೀವಾಳ ಎಂದು ತಿಳಿಸಿ ಕೊಟ್ಟಳಮ್ಮ
ಫ - ಫಲವನು ತಿಂದು ಏಕಾದಶಿಯಂದು ದೇವನ ಪೂಜೆ ಮಾಡಿದಳಮ್ಮ
ಬ - ಬಂಗಾರವನು ಒತ್ತೆ ಇಟ್ಟು ಮನೆಯ ಕಟ್ಟಿದಳು ನಮ್ಮಮ್ಮ
ಭ - ಭಟರ ಅಡಿಗೆ ಸಪ್ಪೆ ಅಮ್ಮ ಮಾಡಿದ ಗಾರಿಗೆಯೇ ರುಚಿಯಮ್ಮ
ಮ - ಮಡಿಲಲಿ ಆಡಿಸಿ ಬೆಳೆಸಿ, ತನ್ನನೇ ತಾನು ಮರೆತಳಾ ನಮ್ಮಮ್ಮ
ಯ - ಯಂತ್ರವೇ ನಮ್ಮಮ್ಮ, ಸದ್ದು ಮಾಡದೇ ದುಡ್ಡು ಕೇಳದೆ
ರ - ರವಿಯ ಹಾಗೆ ತಾನು ಸುಟ್ಟು ಇತರರ ಜೀವವ ಬೆಳಗಿಸಿದಳಮ್ಮ
ಲ - ಲವಲವಿಕೆಯಿಂದ ತನಗೆಂದೂ ಹೊಸದು ರವಿಕೆಯನೊಲಿಸದೆ
ವ - ವರನನು ಹುಡುಕಿ ಮದುವೆ ಮಾಡಿಸಿ, ಕಣ್ಣೀರು ಹಾಕದೆ
ಶ - ಶಂಖವನೂದಿ ದುಃಖವನು ಮರೆತು ಕೆಲಸದಿ ಮುಳುಗಿದಳಮ್ಮ
ಷ - ಷರತ್ತೇ ಇಲ್ಲದ ಬೇಷರತ್ ಪ್ರೀತಿಯ ನೀಡುವ ನಮ್ಮ ನಿಮ್ಮಮ್ಮ
ಸ - ಸಕಲಕಲಾವಲ್ಲಭೆ ಆದರೂ ಬಹುಮಾನವಿಲ್ಲದೆ ದುಡಿವಳಮ್ಮ
ಹ - ಹವಳ ಮುತ್ತು ಪಚ್ಚೆ ಬೇಡೆಂದ ನೀನೆ ನನ್ನ ಪ್ರಾಣವೆಂದಳಮ್ಮ
ಳ - ಅವಳ ಹಾಗೆ ಇರುವವರ್ಯಾರು, ನಾನರಿಯೆ, ತಿಳಿದರೆ ನಿನಗೆ ಎನಗೂ ತಿಳಿಸಮ್ಮ, ಇದು ನಮ್ಮ ನಿಮ್ಮಮ್ಮನ ಕಥೆ ಅಲ್ಲ!!! ಜೇವನವಮ್ಮ!
ಅಮ್ಮ ನಿಮ್ಮ ಪ್ರೀತಿಗೆ ನಾವೆಲ್ಲಾ ಚಿರಋಣಿಕಣಮ್ಮ ....
ಪದ್ಯದಲೇ ಪ್ರೀತಿಯ ತೋರುವ ನಿನ್ನ ಒಳಿತನೇ ಕೋರುವ
ನಿನ ಪ್ರೀತಿಯ ಮುಂದೆ ನಾನು ಮೌನ