ದುರಾಸೆ ಪ್ರತಿಫಲ
ದುರಾಸೆ ಪ್ರತಿಫಲ
ಒಂದು ಸುಂದರವಾದ ಹಳ್ಳಿಯಲ್ಲಿ ಮುದ್ದಾದ ಕುಟುಂಬವಿತ್ತು ಹೇಗಿತ್ತು ಎಂದ್ರೆ ' ಅಂಬಲಿ ಕುಡಿದರು ಇಂಬಾಗಿ ಕುಡಿ' ಎನ್ನುವಂತಹ ನೆಮ್ಮದಿಯಿಂದ ಕೂಡಿದ ಭೂಮಿ ಮೇಲಿನ ಸ್ವರ್ಗವಾಗಿತ್ತು.
ತಂದೆ ತಾಯಿ(ವಿಕಾಸ ಸುಧಾ) ಮಕ್ಕಳಿಂದ ಕೂಡಿದ ಗುಡಿಸಲು, ಅದುವೇ ಅವರಿಗೆ ಅರಮನೆಯಾಗಿತ್ತು.
ಪುಟ್ಟ ಮಕ್ಕಳಾದ ನವೀನ್ ದಿವ್ಯಾರಿಗೆ ದೊಡ್ಡ ದೊಡ್ಡ ದೊಡ್ಡ ಕನಸಿತ್ತು, ಆದ್ರೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಮನೆಯಲ್ಲಿ ಆ ಮಕ್ಕಳ ಕನಸುಗಳು ಕನಸಾಗಿಯೇ ಉಳಿಯುತ್ತಾ ಹೋದವು.
ದಿನಗಳೆದಂತೆ, ನವೀನ್ ಒಂದು ನಿರ್ಧಾರ ತೆಗೆದುಕೊಳ್ಳುತ್ತಾನೆ ಇದೆ ತರ ಮುಂದುವರಿದರೆ ಈ ಸಮಾಜದಲ್ಲಿ ನಮಗೆ ಯಾವ ಅಸ್ತಿತ್ವ ಇರುವದಿಲ್ಲಾ.
ನನ್ನ ಕನಸುಗಳು ನನಸಾಗದಿದ್ದರೇನು ನನ್ನ ತಂಗಿ ದಿವ್ಯಾಳ ಕನಸಾದರು ನನಸಾಗಲಿ ಅದಕ್ಕಾಗಿ ನನ್ನ ಪ್ರಾಣವನ್ನೇ ಪಣವಿಡಲು ಸಿದ್ಧವೆಂದು ಬಾಳುತ್ತಾನೆ.
ಅದರಂತೆ ತಂಗಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಾನೆ.
ಅವಳು ಕೂಡಾ ನವೀನ್ ಆಸೆಗಳನ್ನು ಈಡೇರಿಸುತ್ತಾ ಹೋಗುತ್ತಾಳೆ, ಒಟ್ಟಾರೆಯಾಗಿ ಖುಷಿಯಿಂದ ತುಂಬಿ ತುಳುಕುವ ಇಂದ್ರಲೋಕವಾಗಿತ್ತು.
ಬಾಲ್ಯದಲ್ಲಿ ತಂದೆಯ ಆಶ್ರಯ, ಯೌವನದಲ್ಲಿ ಗಂಡನ ಆಶ್ರಯ, ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯವೆಂಬಂತೆ ದಿವ್ಯಾಳಿಗೆ ತವರಿನ ಆಶ್ರಯ ಮುಗಿದು ಗಂಡನ ಆಶ್ರಯಕ್ಕೆ ಕಾಲಿಡುವ ಸುಸಮಯವದು.
ಆದ್ರೆ ವಿವಾಹದ ವಿಚಾರವೇ ಇಲ್ಲದ ದಿವ್ಯಾಳಿಗೆ ಇಂತಹ ಕಠಿಣ ಪರಿಸ್ಥಿತಿ ಎದುರಿಸುವದು ಕಷ್ಟವಾಗಿತ್ತು.
ಶಿಕ್ಷಣ ಪೂರ್ತಿಯಾಗಲಿ ತದ ನಂತರ ಇದರ ಪ್ರಸ್ತಾಪವೆಂದು ಎಲ್ಲರ ಬಾಯಿ ಮುಚ್ಚಿಸುತ್ತಾಳೆ.
ಇದೆ ಸಮಯಕ್ಕೆ ಸರಿಯಾಗಿ ನವೀನ್ ವಿವಾಹದ ಪ್ರಸ್ತಾಪವಿಟ್ಟು, ಒಪ್ಪಿಸಿ ದಿವ್ಯಾ ತನ್ನಣ್ಣ ನವೀನ್ ಲಗ್ನ ಮಾಡಿಸುತ್ತಾಳೆ.
ಅಣ್ಣನ ಪ್ರೀತಿ ಹೊರ್ತು ಯಾರ್ ಪ್ರೀತಿ ಕಾಣದ ಬೆಳೆದ ದಿವ್ಯಾಗ ಅಣ್ಣಗ್ ಲಗ್ನ ಆಗಿ ಬರಾಕಿ ಗೆಳತಿಯಾಗಿ, ಅಕ್ಕನಾಗಿ ತಾಯಿಯಾಗಿ ಇರುವಳು ಎಂದು ತಿಳಿದಿರುತ್ತಾಳೆ.
ನಾವೊಂದು ಬಗಿದರ್ ದೇವ್ರು ಒಂದು ಬ್ಯಾರೇನೇ ಬಗಿತಾನ್ ಅನ್ನೋದು ಇಲ್ಲಿ ಖರೇ ಆಗ್ತದ್, ಮಲತಾಯಿಗಿಂತ ಕ್ರೂರಮನ ಅವಳದು ಎನ್ನುವ ಸತ್ಯ ಅರಿವು ಆಗ್ತದ್.
ಇಷ್ಟ ಇರ್ಲಿ ಬಿಡ್ಲಿ ಹೆಣ್ಣಿಗ್ ಲಗ್ನ ಆಗಿ ಹೋಗುತಕ ಹುಟ್ಟಿದ ಮನಿದಾಗ ಬಾಳೋದು ಅನಿವಾರ್ಯ.
ಯಾಕಂದ್ರೆ ಹಿಂದಿನಿಂದ ನಡೆದು ಬಂದ ಸಂಸ್ಕೃತಿ ಈಗಲೂ ಅದೆ ಗತಿ,
ಜವಾಬ್ದಾರಿ ಇಲ್ಲದೆ ಮುದ್ದಿನ ಮಗಳಾಗಿ ಬೆಳೆದ ದಿವ್ಯಾಳಿಗೆ ವಿವಾಹದ ಭಾರ ಹೊರುವ ಯಾವ್ ಮನೋರಥವು ಇರಲಿಲ್ಲಾ.
ಹಾಗಾಗಿ ಮದುವೆಯನ್ನು ಮುಂದೂಡುತ್ತಲೇ ಬರುತ್ತಾಳೆ.
ಶಿಕ್ಷಣ ಮುಗಿದ ಮೇಲೆ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಅಲ್ಲಿಯೂ ಪ್ರತಿಭಾವಂತ ಶಿಕ್ಷಕಿಯಾಗಿ ಹೊರಹೊಮ್ಮುತ್ತಾಳೆ. ಮಕ್ಕಳೊಂದಿಗೆ ಮಕ್ಕಳಾಗಿ ಇರುತಿದ್ದ ದಿವ್ಯಾಳಿಗೆ ತಾನು ಒಂದು ಹೆಣ್ಣು ತನಗೂ ವಿವಾಹವಾಗಬೇಕು ಎನ್ನುವ ಕಲ್ಪನೆಯೇ ಇರಲಿಲ್ಲಾ.
"ಕಂಡರೆ ಮಾಣಿ ಉಂಡರೆ ಗೋಣಿ" (ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು) ಅನ್ನುವಂತೆ ಇಲ್ಲಿ ಅಣ್ಣನ ಮಕ್ಕಳ ಪ್ರಯತ್ನದ ಫಲವಾಗಿ ದಿವ್ಯಾ ವಿವಾಹಕ್ಕೆ ಒಪ್ಪುತ್ತಾಳೆ.
ಮಕ್ಕಳ ಪ್ರೀತಿಗೆ ಕಟ್ಟು ಬಿದ್ದು ಮತ್ತು ತವರು ತೊರೆಯಲು ಇರುವ ಮಾರ್ಗವೆಂದು ನಿರ್ಧರಿಸುತ್ತಾಳೆ.
ಬಡ ಹುಡಗನ ಸಂಗಾತಿಯಾಗಬೇಕೆಂದು ಬಯಸಿದ ದಿವ್ಯಾಳಿಗೆ ಅಗರ್ಭ ಶ್ರೀಮಂತ ಹುಡುಗ ಸಂಗಾತಿಯಾಗಿ ದೊರೆಯುತ್ತಾನೆ.
೧೦ ಲಕ್ಷವನ್ನೂ ಒಟ್ಟಿಗೆ ನೋಡದ ದಿವ್ಯಾಳಿಗೆ ತನ್ನ ಗಂಡ ತನ್ನ ಹೆಸರಿಗೆ ಅಷ್ಟೂ ಹಣ ಜಮಾ ಮಾಡಿದ್ದೂ ಕಂಡು ತಲೆಕೆಳಗಾಗುತ್ತದೆ.
ಬಯಸದೆ ಬಂದ ಭಾಗ್ಯವೆನ್ನಬೇಕೆ, ಪ್ರೀತಿಸೋ ಸಂಗಾತಿ ಪಡೆದ ತಾನೇ ಧನ್ಯವೆಂದು ಬೀಗಬೇಕೆ, ದಿವ್ಯಾ ತುಂಬಾ ಅದೃಷ್ಟವಂತೆ ಅಂತಾ ಭಾವಿಸಿದೀರಾ, ಖಂಡಿತಾ ಇಲ್ಲಾ
ದೇವ್ರು ಒಳ್ಳೆಯವರಿಗೆ ಬಾಳ ಪರೀಕ್ಷೆಗಳನ್ನು ಕೊಡ್ತಾನ್ ಇನ್ನೂ ಕೆಲವರಿಗೆ ಪರೀಕ್ಷೆ ಇಲ್ಲದೆನಾ ಫಸ್ಟ್ ಕ್ಲಾಸ್ ರಿಸಲ್ಟ್ ಕೊಡ್ತಾನ್. ಹಿಂಗಾ ಅಲ್ವಾ ಸ್ನೇಹಿತರೇ ನಮ್ಮ ನಿಮ್ಮ ಬಾಳ್ವೆ ನಡಿಯಾಕತ್ತಿರೋದು ಈ ಪ್ರಪಂಚದಾಗ್.
ಈ ಹಣದಿಂದಾಗಿ ದಿವ್ಯಾ ಅತ್ತಿ ಮಾವ ನಾದನಿಯರ ಪ್ರೀತಿಯಿಂದ ವಂಚಿತಳಾಗಿ ಬರಿ ಗಂಡನ ಪ್ರೀತಿಗ್ ಪಾತ್ರಳಾಗುತ್ತಾಳೆ. ಉಳಿದೋರು ಶತ್ರುವಾಗಿ ಕಾಣಲಾರಂಭಿಸಿದರು
ಲಗ್ನ ಆದ್ ಮದಲನೇ ದಿನವೇ ಗಂಡನ ತಲಿ ತುಂಬಿ ೧೦ಲಕ್ಷ ದೋಚಿದಾಕಿ, ಹಿಂಗಾ ಸುಮ್ನೆ ಇದ್ದರೆ ನಮ್ಮೆಲ್ಲ ಆಸ್ತಿ ಕಳಕೊಂಡು ಬೀದಿಗ್ ಕಳಿಸ್ತಾಳ್ ಅದ್ಕ ಮದಲ್ ನಾವ್ ದಿವ್ಯಾಳನ್ನ ಓಡಿಸಬೇಕು, ದೀಪಕ್ ನಿಂದ ದೂರ ಮಾಡೋಣ ಎಂದೂ ನಾದನಿ ತಂದೆ ತಾಯಿಗೆ ಹೇಳಿ, ತಮ್ಮ ಮತ್ತು ತಮ್ಮನ ಹೆಂಡತಿಯನ್ನು ದೂರ ಮಾಡುವ ಎಲ್ಲಾ ಕುತಂತ್ರ ಮಾಡುತ್ತಾ ಬರುತ್ತಾಳೆ.
ಇಬ್ಬರ ಮದ್ಯ ಅನಗತ್ಯ ಮನಸ್ತಾಪಗಳನ್ನೂ ತಂದೊಡ್ಡುತ್ತಾಳೆ. ಆದ್ರೆ ಸತ್ಯ ಯಾವಾಗಲೂ ನಿಧಾನವಾಗಿ ತಿಳಿತಾದ್ ಮತ್ತು ಪ್ರಧಾನ್ ವಾಗಿರ್ತಾದ್, ಕಾಲ ಎಲ್ಲರನ್ ಬದಲಿಸ್ತಾದ್ ಅನ್ನೋ ಹಂಗ್ ದೀಪಕ್ ಗೆ ನಿಜಾಂಶ ತಿಳಿತಾದ್.
ದೀಪಕ್ ತನ್ನ ಸಮಸ್ತ ಆಸ್ತಿಯನ್ನು ದಿವ್ಯಾಳ್ ಹೆಸರಿಗೆ ಮಾಡುತ್ತಾನೆ, ಆಸ್ತಿಯನ್ನು ಅನುಭವಿಸುವ ಹಕ್ಕು ಮಾತ್ರ ಅವಳಿಗೆ ಮಾರುವ ಅಧಿಕಾರವಿಲ್ಲಾ, ಅವಳ ನಂತರ ಅವಳ ಆಸ್ತಿ ಅವಳಿಚ್ಛೆಯಂತೆ ಅನಾಥ ಆಶ್ರಮ ಸೇರಲಿದೆ ಎಂದೂ ವಿಲ್ ಬರೆಸುತ್ತಾನೆ.
ಅದನ್ನು ತಂದೆ ತಾಯಿಗೂ ತೋರಿಸುತ್ತಾನೆ.
ಇದನ್ನೂ ನೋಡಿ ಕುಪಿತಗೊಂಡ ತಂದೆ ತಾಯಿ, ಸೊಸೆಯನ್ನು ಮಾಟಗಾತಿ ಮಾಟಮಾಡಿ ಆಸ್ತಿ ಹೊಡೆದಿರುವಳು ಇಂತಹ ಮನೆಮುರುಕಿಯನ್ನು ಬಯಸಿ ಬಯಸಿ ಸೊಸೆಯಾಗಿ ತಂದ ನಿಮಗೆ ಸರಿಯಾದ ಶಾಸ್ತಿ ಆಗಿದೆ ಎಂದೂ ಅತ್ತೆ ಗೊಣಗುತ್ತಾಳೆ.
ಯಾರು ಎಷ್ಟು ಕೂಗಾಡಿದರು ದಿವ್ಯಾ ದಿವ್ಯಮೌನಳಾಗಿಯೇ ನಿಂತಿರುತ್ತಾಳೆ ಕಾರಣ ತಾನು ನಿರಪರಾಧಿ ಎಂಬ ಭಾವ ಅವಳದು.
ಬೆಂಕಿಯಿಂದ ತಪ್ಪಿಸಿಕೊಂಡು, ಕುದಿಯುವ ಎಣ್ಣೆಯಲ್ಲಿ ಬಿದ್ದಂತಾಗಿತ್ತು ದಿವ್ಯಾಳ ಭವಣೆಯ ಬದುಕು, ಆ ಕಡಿ ತವರಿಲ್ಲ ಈ ಕಡಿ ಅತ್ತಿ ಮನಿ ಇಲ್ಲಾ ಗಂಡನನ್ನೂ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲಾ ಅವಳಿಗೆ ಈಗ.
ಇದು ಯಾವುದನ್ನೂ ಅಣ್ಣನಿಗೆ ಹೇಳಿ ನೋವು ಕೊಡುವ ಮನವಿಲ್ಲದ ದಿವ್ಯಾಳಿಗೆ, ಮನದಲ್ಲೆ ಕೊರಗು.
ಇಂತಹ ಸ್ಥಿತಿಯಲ್ಲಿ ಮಧ್ಯರಾತ್ರಿಯಲ್ಲಿ ಮಗನನ್ನು ಹೊರ ಹಾಕುತ್ತಾರೆ ಮದುವೆಯಾಗಿ ಇನ್ನೂ ೩೦ ದಿನಾ ಮಾತ್ರವಾಗಿತ್ತು.
ಅಷ್ಟರಲ್ಲೇ ಈ ಗತಿ ಬಂದಿತು ಸೌಭಾಗ್ಯವತಿಯಾದ ದೌರ್ಭಾಗ್ಯ ದಿವ್ಯಾಳಿಗೆ.
ಯಾವುದನ್ನೂ ಬಯಸದ ಸಾದ್ವಿಗೆ ದೇವರು ನೀಡಿದ್ದೇಕೆ ಬಯಸಿದ ಪ್ರೀತಿಯ ಕಿತ್ತುಕೊಂಡಿದ್ದು ಯಾಕೇ? ಹೊಸದಾದ ಜೋಡಿಗೆ ನೆಲೆಯಿಲ್ಲದ ನಿಕೃಷ್ಟ ಪರಿಸ್ಥಿತಿ ಬಂದಿತು
ಹೃದಯದಾಗಿನ ನೋವು ಕಂಬನಿಯಾಗಿ ಹರಿಯುತ್ತದೆ ಅವಳ ಅರಿವಿಗೆ ಬರದಂತೆ.
ಎಷ್ಟು ಹಣವಿದ್ದರೇನು ಫಲ, ನೆಮ್ಮದಿ ಇಲ್ಲದ ಬದುಕಿನಲ್ಲಿ ಅಲ್ಲವೇ?
ದೀಪಕ್ ಸ್ನೇಹಿತನ ಸಲಹೆಯಂತೆ ಬಾಡಿಗೆ ಮನೆಮಾಡಿ ಸಣ್ಣ ಹಳ್ಳಿಯಲ್ಲಿದ್ದು ಅಲ್ಲೇ ಕೆಲಸ ಮಾಡುತ್ತಾ ಪತ್ನಿಯೊಂದಿಗೆ ಸುಖ ಜೀವನ ನಡೆಸುತ್ತಿರುತ್ತಾನೆ.
ತಂದೆ ತಾಯಿಯನ್ನು ಒಮ್ಮೆಯೂ ನೋಡಲಿಕ್ಕೆ ಹೋಗದ ದೀಪಕ್, ನಸುಕಿನ ವೇಳೆದಾಗ ತಾಯಿಯಿಂದ ಕರೆ ಬರುತ್ತದೆ.
ನೋವಿನಲ್ಲಿ ನಡುಕದಲ್ಲಿರುವ ತಾಯಿಯ ಧ್ವನಿ
ಕೇಳಿದ ದೀಪಕ್ ತನ್ನ ಕೋಪವೆಲ್ಲ ಕರಗಿ ಹೋಯ್ತು ಪ್ರೀತಿಯಿಂದ ಯಾಕಮ್ಮ ಏನಾಯಿತು ಎಂದೂ ಕೇಳುತ್ತಾನೆ?
ಅದಕ್ಕೆ ಅಮ್ಮನಿಂದ ದೀಪು ನಿಮ್ಮಪ್ಪ ನಮ್ಮನ್ನೂ
ಬಿಟ್ಟು ಹೋದರು ಕಣೋ ಬೇಗ ಬಾ ಎಂದೂ ಫೋನ್ ಕಟ್ಟು ಮಾಡುವಳು.
ಮಗ ಸೊಸೆಯನ್ನು ಹೊರ ಹಾಕಿದ ಪಾಪ ಪತಿಯನ್ನೇ ನುಂಗಿತು ಆದ್ರೂ ಅದರ ಅರಿವಿಲ್ಲ ಸೊಸೆಯ ಮೇಲೆ ಈಗಲೂ ಮಮತೆಯಿಲ್ಲ.
ತಂದೆಯ ಸಾವಿನ ಸುದ್ದಿ ಇಬ್ಬರಿಗೂ ಸಿಡಿಲು ಬಡಿದಂತಾಯಿತು.
ಪತ್ನಿಯನ್ನು ಕರೆದುಕೊಂಡು ಹೋಗಲು ಹಿಂದೇಟು ಹಾಕುತ್ತಾನೆ.
ಒಂದೂವರೆ ವರ್ಷ ಆ ಕಡಿಗ್ ತಲಿ ಹಾಕದೆ ಇರುವ ಇವರಿಗೆ, ಅಲ್ಲಿಯ ವರ್ತನೆ ಹೆಂಗ್ ಇರ್ತಾದ್ ಎಂಬ ಭಯ ಆದ್ರೆ ಪಿತೃ ಸ್ವರೂಪರಾದ್ ನಿಮ್ಮ ತಂದಿಯವರ ಅಂತಿಮ ದರ್ಶನಕ್ಕೆ ಬರುವೆ ಏನಾದ್ರು ಚಿಂತಿಯಿಲ್ಲ.
ತಪ್ಪು ಮಾಡಿದ್ದೂ ಅವರಲ್ಲ ನಿಮ್ಮ ಅಕ್ಕಾ ಅಂದ ಮ್ಯಾಗ್ ಇವರಿಗ್ಯಾಕ್ ಶಿಕ್ಷೆ ಎಂದೂ ತಿಳಿ ಹೇಳಿ ಇಬ್ಬರು ಬರುತ್ತಿರುತ್ತಾರೆ.
ಗಾಬರಿಯಿಂದ ಹೊರಡುತ್ತಿರುವ ದಿವ್ಯಾಳಿಗೆ ತಾನು 3 ತಿಂಗಳ ಗರ್ಭಿಣಿ ಎನ್ನುವದೇ ನೆನಪಿಗೆ ಬರಲಿಲ್ಲ ಇದರ ಪ್ರತಿಫಲ ದಾರಿಯಲ್ಲಿ ಬರುವಾಗ ಬೈಕ್ ಮೇಲಿಂದ ಬಿದ್ದ ಅವಳಿಗೆ ಗರ್ಭಪಾತವಾಗುತ್ತದೆ.
ಈ ಕಡಿ ಹೆಂಡ್ತಿ ಆ ಕಡಿಗೆ ತಂದೆ ಅಂತಿಮ ದರ್ಶನ ಯಾವ ಕಡೆ ಎಂದೂ ದಿಕ್ಕು ತೋಚದೆ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿ ಸ್ನೇಹಿತೆಯನ್ನು
ಅವಳ ಬಳಿ ಬಿಟ್ಟು ತಂದೆ ಮಣ್ಣಿಗೆ ಬರುತ್ತಾನೆ.
ಅಷ್ಟರಲ್ಲಿ ತಂದೆ ಮಣ್ಣಿನಲ್ಲಿ ಮಣ್ಣಾಗಿ ಹೋಗಿರುತ್ತಾನೆ. ಅವರ ಸಮಾಧಿ ಮುಂದೆ ಕೂತು ಗಂಟಲು ಕಳಚಿ ಬರುವಂತೆ ಅಳುತ್ತಾನೆ.
ಸಮಾಧಿಯಿಂದ ತಂದೆಯನ್ನು ನೋಡಲು ಮಣ್ಣು ತಗೆಯಲು ಮುಂದಾಗುತ್ತಾನೆ. ಅದನ್ನು ಕಂಡು ಕುಟುಂಬಸ್ಥರು ನಾಟಕ ಮಾಡ್ತಾನ್ ಅಂತಾ ಕೊಂಕಾಡುವರು.ಈಗಲೂ ಕೀಳು ಬುದ್ಧಿ ಕಳಚಿ ಹೋಗಿರಲಿಲ್ಲ.
ಆದರೆ ನೆರೆದವರು ಬಿಡದೇ ಅವರ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂದರೆ ನಮಿಸಿ ಬಾ ಎಂದರು, ಅವರ ಮಾತಿನಂತೆ ನಡೆದುಕೊಂಡನು.
ಮನಿಗ್ ಬಂದ ಮಗನಿಗೆ ಈಗಲೂ ಪ್ರೀತಿ ದೊರಕದು ನಿಂದನೆ ನುಡಿಗಳೇ, ಕೇಳಿ ಕೇಳದಂತೆ ಇರುತ್ತಾನೆ.
ಬೇಗ ಎದ್ದು ದಿವ್ಯಾಳ ನೋಡಲು ಬರುತ್ತಾನೆ ಅವಳ ಅನುಪಸ್ಥಿತಿ ಕಂಡು ಗಾಬರಿಯಾಗುತ್ತಾನೆ
ಆದ್ರೆ ವೈದ್ಯರಿಂದ ವಿಷಯ ತಿಳಿದ ದಿವ್ಯಾ ತನ್ನ ಮಗುವನ್ನು ಕಳೆದುಕೊಂಡ ನೋವಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾಳೆ.
ಆದ್ರೆ ಸರಿಯಾದ್ ಸಮಯಕ್ಕೆ ಹೋಗಿ ದೀಪಕ್ ದಿವ್ಯಾಳನ್ನು ಕಾಪಾಡುತ್ತಾನೆ.
ದಿವ್ಯಾ ಒಂದು ಮಗು ಹೋದ್ರೆ ಏನಾತು ನಿನ್ನ ಭಾಗ್ಯದಲ್ಲಿ ಬಹುಮಕ್ಕಳ ಯೋಗವಾದ ಯಾಕ್ ಚಿಂತಿ ಮಾಡ್ತಿ ಸುಮ್ನ್ ಹುಚ್ಚಿ ಅದಿ ನೀನು.
ಇಲ್ಲಾ ದೀಪಕ್ ಹಾಗಿದ್ದರೇ ನಾ ಯಾಕ್ ಸಾಯುವ ಹೇಡಿಕೃತ್ಯಕ್ಕೆ ಹೋಗುತಿದ್ದೆ ತಾಯಿತನ ಭಾಗ್ಯ ಕಳೆದುಕೊಂಡು ಬದುಕುವದಕ್ಕಿಂತ ಸಾಯೋದೆ ಮೇಲು ಬಿಟ್ಟ ಬಿಡಿ ನನ್ನ, ನೀವೂ ಇನ್ನೊಂದು ಮದುವೆ ಆಗಿ ಎಂದೂ ಹೇಳುತ್ತಾಳೆ.ನಾನು ಜೀವಸಹಿತ ಇರಬೇಕೆಂದರೆ ನೀವೂ ಇನ್ನೊಂದು ಮದುವೆ ಆಗ್ಲೇಬೇಕು ನನ್ನ ಮೇಲಾಣೆ.
ದಿವ್ಯಾ ಏನು ಹೇಳಾಕತ್ತಿ ಮೈ ಮ್ಯಾಗ್ ಪ್ರಜ್ಞಾ ಆದ ನಿಂಗ್?
ಅಷ್ಟರಲ್ಲಿ ದೀಪಕನ ಅಕ್ಕಾ ಬಂದು ದಿವ್ಯಾ ಖರೆ ಹೇಳಾಕತ್ತಾಳ ಅನುಮಾನ ಬೇಡ ದಿವ್ಯಾಳ ಖುಷಿಗಾಗಿ ಇನ್ನೊಂದು ಮದುವೆ ಆಗು ದೀಪು ಪ್ಲೀಸ್.
ದೀಪಕ್ ಇಬ್ಬರ ಒತ್ತಾಯಕ್ಕೆ ಮಣಿದು ಅವರು ತೋರಿಸಿದ ಹುಡುಗಿಯೊಂದಿಗೆ ಮದುವೆಯಾಗುತ್ತಾನೆ.
ಎರಡನೇ ಮಡದಿಯಾಗಿ ಸೌಖ್ಯ ಕಾಲಿಡುತ್ತಾಳೆ.
ಬಂದ ದಿನವೇ ಮನೆ ಸದಸ್ಯರನ್ನು ಹೊರ ಹಾಕುತ್ತಾಳೆ.
ತನ್ನದೇ ಕಾರುಬಾರು ಪ್ರಾರಂಭಿಸುತ್ತಾಳೆ ಪ್ರಶ್ನಿಸಿದ ದೀಪಕಗೆ ಇರುವ ಇಚ್ಛೆ ಇದ್ದರೆ ಇರಬಹುದು ಇಲ್ಲವಾದರೆ ನಿಮ್ಮವರೊಂದಿಗೆ ನೀವೂ ಹೋಗಬಹುದು ಅನ್ನುತ್ತಾಳೆ.
ಎರಡನೇ ಮದುವೆ ಆಗಿದ್ದು ಸಮಸ್ತ ಆಸ್ತಿಗೆ ವಾರಸುದಾರಳಾಗಿ ರಾಣಿ ಅಂತೆ ಜೀವನ ಮಾಡುವದಕ್ಕೆ, ನಿಮ್ಮ ಮನೆ ಅವರ ಸೇವೆ ಮಾಡಕೊಂಡು ದಿವ್ಯಾಳಂತೆ ಗೌರಮ್ಮನ ಹಾಗೇ ಜೀವನ ಮಾಡೋಕ್ ಅಲ್ಲಾ .ಆದ್ರೆ ಈಗಷ್ಟೇ ತಿಳಿತು ಸಂಪೂರ್ಣ ಆಸ್ತಿ ದಿವ್ಯಾಳ ಹೆಸರಲ್ಲಿದೆ ಅಂತಾ ಇನ್ನೂ ತಡಮಾಡಿದರೆ ಇರುವದನ್ನು ಕಳೆದುಕೊಳ್ಳಬೇಕಾಗುತ್ತದೆ.
ಲುಕ್ ಮಿಸ್ಟರ್ ದೀಪಕ್ ನಾನು ದಿವ್ಯಾಳ ಹಾಗ್ ಮುಗ್ಧ ಹುಡುಗಿಯಲ್ಲ, ನಿನ್ನ ಮೇಲೆ ಯಾವ್ ಮೋಹವು ನನಗಿಲ್ಲ.
ನಾನು ನನ್ನಿಷ್ಟದ ಹುಡುಗನನ್ನೂ ವಿವಾಹವಾಗಿ ಹೋಗುತ್ತೇನೆ .
ಇದೆಲ್ಲಾ ಸ್ವಲ್ಪ ದಿನಗಳಲ್ಲೆ ಮಾರಿ ಬಿಡುವೆ ಎನ್ನುತ್ತಾಳೆ.
ಅತ್ತಿ ಮಗಳೊಂದಿಗೆ ದಿವ್ಯಾಳ ಹತ್ತಿರ ಬರುತ್ತಾರೆ
ನಡೆದ ಸ್ಥಿತಿಗತಿ ವಿವರಿಸುತ್ತಾರೆ. ಸೌಖ್ಯ ಹೆಣ್ಣಲ್ಲ ನಿನ್ನ ದೂರ ಮಾಡಿ ಹೆಮ್ಮಾರಿಯನ್ನು ಮನೆಗೆ ತಂದಂತೆ ಆಗಿದೆ.
ದಿವ್ಯಾ ನೀನಾದರೂ ಒಂದು ಮಾತು ಹೇಳಿ ನಮ್ಮ ಮನೆಯಲ್ಲಿ ಇರಿಸಿಕೊಳ್ಳುವಂತೆ ಮಾಡು ಎಂದೂ ಗೋಗರಿದು ಕೇಳುತ್ತಾರೆ.
ಆಗ ದಿವ್ಯಾ ಅಲ್ಲಿ ನನ್ನ ಯಾವ ಅಸ್ತಿತ್ವವಿಲ್ಲಾ ಅಲ್ಲಿ ಹೋಗಿ ಮಾತಾಡುವ ಹಕ್ಕು ನನ್ನದಲ್ಲಾ.
ಇರುವುದಾದರೆ ನೀವೂ ಇಲ್ಲಿ ಇರಿ ಇಲ್ಲಾ ನಿಮ್ಮಿಷ್ಟ ಎನ್ನುತ್ತಾಳೆ.
ಅವಳ ಉದಾರ ಗುಣಕ್ಕೆ ಶರಣಾಗಿ ದೀಪಕ್ ಅಕ್ಕಾ ದಿವ್ಯಾಳ ಕಾಲು ಹಿಡಿಯುತ್ತಾಳೆ.
ಬಿಡಿ ಅಕ್ಕಾ ನೀವೂ ನನ್ನ ಕಾಲು ಏಕೆ ಹಿಡಿಯುವಿರಿ, ನನ್ನ ಕಾಲು ಹಿಡಿಯುವುದು ಶ್ರೇಯಸ್ಕರವಲ್ಲ ಎನ್ನುತ್ತಾಳೆ.
ತಪ್ಪು ಮಾಡೀನಿ ದಿವ್ಯಾ ಅದ್ಕ, ಬಂಗಾರದಂತ ಮನಸಿನ ಸೊಸೆಯನ್ನು ಕಾಗೆ ಬಂಗಾರವೆಂದು ತಿಳಿದು ನಿನ್ನಿಂದ ನನ್ನ ತಮ್ಮನನ್ನು ಕಿತ್ತುಕೊಂಡ ಮಹಾಪಾಪಿ ಕಣಮ್ಮ ನಾ.
ತಂದೆಯನ್ನು ಕಳೆದುಕೊಂಡ ಮೇಲೂ ಒಳ್ಳೆಯ ಗುಣವನ್ನು ಕಲಿಯದೆ ಮಾಡಿದ ದ್ರೋಹಕ್ಕೆ ಇವತ್ತು ಎಲ್ಲವನ್ನು ಕಳೆದುಕೊಂಡು ನಿಂತಿರುವೆ ಎಂದೂ ಅಳುತ್ತಾಳೆ.
ದಿವ್ಯಾ ಅಕ್ಕಾ ಏನ್ ಹೇಳಾಕತ್ತೀರಾ?
ಹೌದು ದಿವ್ಯಾ ಸತ್ಯ ಹೇಳಾಕತ್ತೀನಿ ವೈದ್ಯರಿಗೆ ಹಣ ಕೊಟ್ಟು ಇನ್ನುಮೇಲೆ ನಿನಗೆ ಮಕ್ಕಳ ಭಾಗ್ಯವಿಲ್ಲವೆಂದು ಸುಳ್ಳು ಹೇಳಿಸಿದೆ.
ಸತಿಯಿಂದಲೇ ಪತಿಗೆ ಎರಡನೇ ವಿವಾಹ ಮಾಡಿಸಿದ ಹೀನ ಹೆಣ್ಣು ನಾನು ಕ್ಷಮಿಸಿಬಿಡು
ಕ್ಷಮೆಗೆ ಅರ್ಹಳಲ್ಲಾ ಆದ್ರೂ ಕ್ಷಮಿಸು.
ಅಕ್ಕಾ ನನಗೆ ಮಕ್ಕಳ ಭಾಗ್ಯವಿದೆನಾ?
ಖಂಡಿತ ನಿನ್ನ ಜಾತಕದಂತೆ ನಿನ್ನ ಬದುಕು ಇದೆ
ಅಂದರೆ ಬಹುಮಕ್ಕಳ ಯೋಗವಿದೆ ದಿವ್ಯಾ ಇದು ಸತ್ಯ ಎಂದೂ ಅಳುತ್ತಾಳೆ.
ಇದನ್ನೂ ದೂರದಿಂದಲೇ ಕೇಳಿದ ದೀಪಕ್ ಸೌಖ್ಯ ಒಳ ಬರುತ್ತಾರೆ.
ಶಭಾಷ್ ಅಕ್ಕಾ, ಕೊನೆಗೂ ನಿನ್ನ ನೀಚ ಬುದ್ಧಿ ತೋರಿಸಿ ಬಿಟ್ಟೆ ಅಲ್ವಾ ಸ್ವಂತ ತಮ್ಮನ ಬದುಕಿಗೆ ಕೊಳ್ಳಿ ಇಟ್ಟು ಇನ್ನೂ ಯಾವ್ ಸೌಭಾಗ್ಯಕ್ಕೆ ಬದುಕಿದಿಯಾ ಅನ್ನುತ್ತಾನೆ.
ಆಗ,ಸೌಖ್ಯ ಈ ನಿಜ ಸ್ಥಿತಿ ಬಯಲಿಗೆ ಎಳೆಯೋಕೆ ನಾನು ದೀಪಕನ್ನೂ ವಿವಾಹವಾಗಿ ಇಷ್ಟೆಲ್ಲಾ ನಾಟಕವಾಡಿದ್ದು ಕ್ಷಮಿಸು ದಿವ್ಯಾ.
ದೀಪಕ್ ಯಾವತ್ತಿಗೂ ನಿನ್ನವನೆ, ಕೇವಲ ನಿನ್ನವನು ಮಾತ್ರ.
ಸ್ನೇಹಿತೆ ಗಂಡನೊಂದಿಗೆ ಜೀವನ ಹಂಚಿಕೊಳ್ಳುವ ಕೀಳು ವ್ಯಕ್ತಿತ್ವದ ಹೆಣ್ಣು ನಾನಲ್ಲ ಆದ್ರೆ ಆಗ ಮದುವೆ ಆಗದಿದ್ದರೆ ಬೇರೆ ಅವರ ಕೂಡಾ ದೀಪಕ್ ಮದುವೆ ಮಾಡಿಸಿ ನಿನ್ನ ಜೀವನ ಹಾಳು ಮಾಡುತಿದ್ದರು.
ಅದು ಆಗಬಾರದು ಎಂದೆ ನಾ ಮದುವೆ ಆಗಿದ್ದು. ಸತ್ಯ ಹೊರಹಾಕಿ ನಿಮ್ಮ ಜೀವನ ಸರಿ ಮಾಡಲೆಂದೆ ದೀಪಕ್ ಸತಿಯಾದೆ ದಿವ್ಯಾ.
ದೀಪಕ್ ಮನಸಿನಲ್ಲಿ ನೀನು ಮಾತ್ರ ಇರುವೆ
ಈಗ ಎಲ್ಲವೂ ಸರಿ ಹೋಗಿದೆ ಇನ್ನೂ ಮೇಲಾದರೂ ನೆಮ್ಮದಿಯಿಂದ, ನಂಬಿಕೆಯಿಂದ, ಪ್ರೀತಿಯಿಂದ ಖುಷಿಯಾಗಿರಿ ಎಂದೂ ಇಬ್ಬರನ್ನು ಜೊತೆಗೂಡಿಸಿ ಖುಷಿಪಡುತ್ತಾಳೆ.