Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

ವಿದ್ಯಾತನಯ ವಿವೇಕ

Classics Inspirational Others

5.0  

ವಿದ್ಯಾತನಯ ವಿವೇಕ

Classics Inspirational Others

ಬಂಗಾರದ ಗಿಳಿ....

ಬಂಗಾರದ ಗಿಳಿ....

1 min
623


ಜಗದೆಲ್ಲ ಜನರನ್ನು ಕೈಬೀಸಿ ಕರೆದು ವೈಭವದಿ ಮೆರೆದು

ಸನ್ಮಾರ್ಗ, ಸದ್ಬುದ್ಧಿ, ಸಂಸ್ಕೃತಿಯ ಕಲಿಸುವ

ದೇಶ ಒಂದಿತ್ತಂತೆ, ಅದು ನನ್ನ ನಾಡಂತೆ.


ಮನದಿ ಆಸೆಯ ಬಿತ್ತಿ, ಕೈಲಿ ಹೊಳೆಯುವ ಕತ್ತಿ,

ಹೊಸೆವೆ ನಾನ್ ಇದನೆಂದು ನಿರ್ಧರಿಸಿದೆ

ಬಂದರಂತೆಲ್ಲರು ಸಿಂಧುವನು ದಾಟಿ.


ಯವನ ಹೂಣರಿಂದ್ ಹಿಡಿದು ಮುಗಲ ಆಂಗ್ಲರವರೆಗೆ

ಎಷ್ಟು ದೋಚಿದರಷ್ಟು ಮುಗಿಯದಿಹ ಸಂಪತ್ತು

ಬಂದು ಹೋದವರೆಣಿಕೆ ಇಟ್ಟಿಹಳೆ ಭೂತಾಯಿ.


ದೋಷ ತನ್ನಲೆ ಇದ್ದು ಪರರ ದೂಷಿಸಿದರೆಂತು

ಆದರದಿ ಠಕ್ಕರನ್ ಮನೆಗೆ ತಾ ಕರೆದು

ದೋಚಿದರು ಎನ್ನನೆಂದು ಹೇಳುವುದು ತರವೇ.


ಮೀರ ಸಾಧಕನೆಡೆಗೆ ಬೆರಳು ತೋರಿಸುವವಗೆ

ಜಯಚಂದನ ದ್ರೋಹ ಕಾಣದಾಯ್ತೆ

ಹುಳ್ಳ ಮನಸಿನ ಜನಕೆ ಇಲ್ಲ ಧರ್ಮದ ಹೊದಿಕೆ.... ತಿಳಿಯದಾಯ್ತೆ.


ಗಾಢಾಂಧಕಾರದಲು ಬೆಳಗುವುದು ಕಿರು ಜ್ಯೋತಿ

ಅಂತೆಯೇ ಮಕ್ಕಳನು ನೀಡಿದಳು ಭಾರತಿ

ಜನ್ಮ ಸವೆಸುತ ಮಾಡಿದರು ಹಲ ಜನರ ಉನ್ನತಿ.


ಅಂದಾಯ್ತು ತಾಯಿಗೆ ನೆತ್ತರಿನ ಅಭಿಷೇಕ

ಓಗೊಟ್ಟ ಮಂದಿಗೆ ಇದ್ದುದೊಂದೆಯೆ ಧ್ಯೇಯ

ನಡು ರಾತ್ರಿಯಲಿ ತಾಯಿ ಬಂಧ ಮುಕ್ತ.


ಮುಗಿಯಿತೆಂದೆಲ್ಲರು ಹರುಷದಲಿ ಕುಣಿದರು

ನನ್ನ ತಾಯಿಯ ಮೇಲೆ ಪರ ಜನರ ಆಕ್ರಮಣ

ಉಳಿಯಲಿಲ್ಲವರ ಹರುಷ ಹಲವು ದಿನವೂ.


ಇದ್ದ ಮಂದಿಗೆ ಬಂತು ಹಲ ಬಣ್ಣಗಳ ಹುಚ್ಚು

ನಾ ಕಾವಿ, ನೀ ಹಸಿರು, ಅವನಾದರೋ ಕೆಂಪು

ಯಾವ ಬಣ್ಣಕಿಹುದೊ ಹಸಿವ ನೀಗುವ ಶಕ್ತಿ.


ಒಬ್ಬರ ಮೇಲೊಬ್ಬರು ಕೆಸರೆರೆಚಿ ಇಂತೆಂದರು

ನಿನ್ನ ದಾರಿಯು ತಪ್ಪು, ನಿನ್ನ ದೇವರು ತಪ್ಪು,

ನಿನ್ನ ಪಾಠವು ತಪ್ಪು, ಕೊನೆಗೆ ಊಟವೂ ತಪ್ಪು.


ಇಹುದು ಜನರಲಿ ತಾಪ ಎಲ್ಲರ ಮೇಲ್ ಕೋಪ

ಬೊಬ್ಬಿಡುವರ್ ಅವಕಾಶ ಸಿಕ್ಕ ಕಡೆಯಲ್ಲೆಲ್ಲ

ಅವ ತಪ್ಪು, ಇವ ತಪ್ಪು, ನನ ಬಿಟ್ಟು ಉಳಿದವರೆಲ್ಲರೂ ತಪ್ಪು.


ಬಣ್ಣದ ಅಮಲಲಿ ಬೇರ್ಪಟ್ಟ ಜನರಲಿ

ಇರುವುದೊಂದೆಯೇ ಸಾಮ್ಯ

ಎಂದಿಗೂ ಮುಗಿಯದ ಹಸಿರು ಕಾಗದದಾಸೆ.


ತೆರಿಗೆ ಕಟ್ಟುವ ಜನರು ನೂರರ ಲ್ಲೈದು ಮಂದಿ

ನಿಯಮ ಪಾಲಿಸುವವರು ಬೆರಳೆಣಿಕೆಯಷ್ಟು

ದೇಶದ ಉನ್ನತಿಗೆ ದುಡಿಯುವವರಾರು ?


ಭ್ರಷ್ಟಾಧಿಕಾರಿಗಳ ದೂಷಿಸುವ ಬಗೆಯು

ಧಗೆಗೆ ತಾನ್ ಇಂಧನವನು ನೀಡಿ

ಝಳವ ತಾಳಲಾರೆನೆನ್ನುವ ಪರಿ.


ದೇವ ದೂತನು ತಾನ್ ಸ್ವರ್ಗದಿಂದಿಳಿಯುವನು

ನಾಯಕನು ಜನಗಳ ನಡುವಲ್ಲಿ ಬೆಳೆಯುವನು

ಇಳೆಯ ಅವಘಡಕೆ ಮುಗಿಲ ಪರಿಹಾರ ಸರಿಯೇ ?


ಕಳಚು ಬಣ್ಣದ ಪೊರೆಯ ಅಳಿಸಿ ಕಾಗದದಾಸೆ

ಕಳಿಸಿ ದುರಾಸೆಯನು ಬೆಳಸು ಮನದಲಿ ಧ್ಯೇಯ

ಭಾರತಿಯು ಮತ್ತೊಮ್ಮೆ ಜಗಕೆ ಬೆಳಕಾಗುವಳು.


ಆರಲು ಬಿಡದಿರು ಭರವಸೆಯ ಜ್ಯೋತಿ

ಮಾಡು ನೀ ಪ್ರತಿ ದಿನವೂ ಕರ್ತವ್ಯದಾರತಿ

ತರುವುದದುವೆ ದೇಶಕ್ಕೆ ಕೀರುತಿ.


Rate this content
Log in