STORYMIRROR

ವಿದ್ಯಾತನಯ ವಿವೇಕ

Drama Romance Tragedy

4  

ವಿದ್ಯಾತನಯ ವಿವೇಕ

Drama Romance Tragedy

ಅವಳೆಂಬ ಮಳೆಬಿಲ್ಲು...

ಅವಳೆಂಬ ಮಳೆಬಿಲ್ಲು...

1 min
375

ಮನವೆಂಬ ಪರಿಸರದಿ

ಒಂಟಿತನವೆಂಬ ತೇವವಿರಲು

ನೆನಪೆಂಬ ಕಿರಣವದರಿಂದ ಹಾದು

ಅವಳೆಂಬ ಕೈಗೆಟುಕದ

ಮಳೆಬಿಲ್ಲೊಂದು ಮೂಡುವುದು.


ಕೆಂಪಿನಲಿ ಕಾಣುವುದು

ಅವಳ ಮುಗಿಯದುತ್ಸಾಹ

ಜೀವನದೆಡೆಗಿನ ಅವಳ ಅನುರಾಗ

ಇದೆ ಸೆಳೆಯಿತೆನ್ನವಳ ಕಡೆಗೆ 

ಪ್ರೀತಿಗೆ ನಾ ಜಾರಿದ ಮೊದಲ ಘಳಿಗೆ.


ಪ್ರೇಮದ ಕುಡಿಯದುವೆ

ಬೆಳೆದಿತ್ತು ಹಸುರಾಗಿ 

ಕಂಡಿತಿಬ್ಬರಿಗೂ ಜಗ ಹೊಚ್ಚ ಹೊಸದಾಗಿ

ಇಚ್ಛೆಯಲಿ ಮನವ ತೆರೆದಿಡುತಲಿ

ಮುಳುಗಿದೆವು ಪ್ರೇಮದಮಲೆಂಬ ಹುಚ್ಚಿನಲಿ.


ತಿಳಿನೀಲಿ ನೆನಪಿಸುವುದು

ಅಂದಿನ ಪ್ರಶಾಂತತೆ

ಬೇರೇನು ಬೇಕಿಲ್ಲವೆಂಬ ಭಾವುಕತೆ

ಪ್ರೇಮದಮೃತವ ಕೊಡಿಸಿದವಳವಳೇ

ಮೊಗೆಮೊಗೆದು ಭರಿಸಿದೆ ನಾನದರ ಬೆಲೆ.


ಕೆನ್ನೀಲಿ ಕಾಣುತಲೆನ್ನ

ಮನ ಬಹಳ ಕದಡುವುದು

ವಿಧಿಯಾಟದೆದುರೆಮ್ಮ ಹತಾಶೆ ನೆನಪಾಗುವುದು

ಹಾರು ಹಕ್ಕಿಯ ರೆಕ್ಕೆಗತ್ತರಿಸಿ

ಪ್ರಪಾತಕೆಸೆದನದ ಭಗವಂತ ಬೀಸಿ.


ಪ್ರಪಂಚದ ಪ್ರತಿ ಕಣದ

ಕಡೆಗೆನಗೆ ವೈರಾಗ್ಯ

ಅವಳನುಳಿಸಿಕೊಳ್ಳದವ ನಾ ಬರಿ ಅಯೋಗ್ಯ

ಇರುವಳಲ್ಲೆಲ್ಲೋ ಇರಲವಳು ಸುಖವಾಗಿ

ಬರಿ ಕಲೆಯುಳಿದಿದೆ ಮನದ ಗಾಯವು ಮಾಗಿ.


ಮನವೆಂಬ ಪರಿಸರದಿ

ಒಂಟಿತನವೆಂಬ ತೇವವಿರಲು

ನೆನಪೆಂಬ ಕಿರಣವದರಿಂದ ಹಾದು

ಅವಳೆಂಬ ಕೈಗೆಟುಕದ

ಮಳೆಬಿಲ್ಲೊಂದು ಮೂಡುವುದು.


Rate this content
Log in

Similar kannada poem from Drama