STORYMIRROR

ವಿದ್ಯಾತನಯ ವಿವೇಕ

Drama Action Classics

5  

ವಿದ್ಯಾತನಯ ವಿವೇಕ

Drama Action Classics

ಭೀಷ್ಮನೆದೆ ಕಂಪನ

ಭೀಷ್ಮನೆದೆ ಕಂಪನ

1 min
470

ಅಡಿಗಡಿಗೆ ವೈರಿಗಳ ಬಡಿಬಡಿದು ಮುನ್ನುಗ್ಗಿ

ತಡೆಯುವರು ನನ್ನನು ಯಾರೆಂದು ಉಬ್ಬಿ

ನಡೆದಿಹೆನು ನಾನಿಲ್ಲಿ ಅರೆಮನದ ಜೊತೆಯಲ್ಲಿ

ಧರ್ಮದ ಬಂಧನಕೆ ನಾ ಬಂಧಿ ಇಲ್ಲಿ


ಇದೆ ನನಗೆ ಪ್ರೀತಿಯು ಪಾಂಡವರ ಕಡೆಗೆ

ಆದರೂ ಈ ಪ್ರೀತಿ ಧರ್ಮದ ಕೆಳಗೆ

ಧರ್ಮದ ಯುಧ್ದದಲ್ ಅಧರ್ಮಿಯ ಪಕ್ಷವನು

ಸೇರಿ ಮುನ್ನಡೆಸುವುದೆ ಧರ್ಮವಾಗಿಹುದೆನಗೆ



ದೂರದಲಿ ಕಂಡಿಹುದು ಹನುಮ ಧ್ವಜವು

ಅದರಾಚೆಯಲೆ ಇಹುದು ಮತ್ತೊಂದು ರಥವು

ಬಡಿದುರುಳಿಸುವೆ ನಿನ್ನ ಎಂದು ನಾ ನುಗ್ಗಿದೊಡೆ

ಕಾದಂತೆ ಅದು ಚಿಮ್ಮಿ ಬಂತು ನನ್ನೆಡೆಗೆ



ಆ ಯೋಧನಾ ವದನ ಕಂಡು ನಾ ದಿಕ್ಕೆಟ್ಟೆ

ಎದೆ ನಡುಗಿ ಮನ ಕಲುಕಿ ಶಸ್ತ್ರಗಳ ಕೈಬಿಟ್ಟೆ

ಬಯಸಿದ್ದೆ ಬದುಕಿಡೀ ಬರಿ ನಿನ್ನ ಸಾವ

ಎಂದೆನಗೆ ನುಡಿಯಿತು ಆ ಮುಖದ ಭಾವ



ಹಲ ವರುಷಗಳ ಹಿಂದೆ ಕಂಡಿದ್ದೆ ಈ ಮುಖವ

ಶೃಂಗಾರವನು ಕಂಡು ಮೆಚ್ಚಿತ್ತು ಆರ್ಯಕುಲ

ಇವಳೊಡನೆ ಇನ್ನಿಬ್ಬರಾ ಹೊತ್ತು ತಂದಿದ್ದೆ

ಅನುಜನ ಪರಿಣಯಕೆ ವಧುವೆಂದುಕೊಂಡಿದ್ದೆ



ಆ ಕ್ಷಾತ್ರ ಗುಣವದುವೆ ಸರಿಯಲ್ಲವೆಂದು

ಪ್ರಿಯನಲ್ಲಿ ಕಾದಿಹನು ನಾ ಬರುವೆಂದು

ಎಂದರುಹಿದಾ ಸೌಮ್ಯ ಮುಖ ಇದುವೆ ತಾನೆ

ಬಿನ್ನಪವ ಮನ್ನಿಸುತ್ತ ಬೀಳ್ಕೊಟ್ಟೆ ಸುಮ್ಮನೆ



ಆದರೂ ಮರಳಿದಳು ಹಸ್ತಿನಾವತಿಗೆ

ಮೊಗದಲ್ಲಿ ಕ್ರೋಧವದು ಇತ್ತು ಪ್ರಿಯನೆಡೆಗೆ

ಪರಿತ್ಯಕ್ತ ಹೆಣ್ಣುನಾ ವಾರೀಸು ನೀ ನನ್ನನ್ನು

ಬಂದಿಹೆನು ಬಹುದೂರ ನಂಬಿ ನಾ ನಿನ್ನನ್ನು



ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ

ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ

ಬರಸಿಡಿಲಿನಂತೆರಗಿತೀ ನನ್ನ ಮಾತುಗಳು

ವದನದಲಿ ಉಕ್ಕಿತು ದ್ವೇಶದಾ ಉರಿಯು



ಈ ಮೂಢನಿಗೆ ಬುದ್ಧಿ ಕಲಿಸಬೇಕೆಂದು

ಗುರು ಬಂದು ನಿಂತನು ಪರಶು ಹಿಡಿದು

ಆ ಯುದ್ಧದಲು ಕೂಡ ಜಯವದುವೆ ಧರ್ಮಕೆ

ಆದರೂ ನ್ಯಾಯವು ಸಿಗಲಿಲ್ಲ ಅಂಬೆಗೆ



ಈ ಜನ್ಮ ಬಹು ಘೋರ ಮಾತ್ರವದು ಹೆಣ್ಣಿಗೆ

ಧರ್ಮದ ಪೊರೆ ಇಹುದು ನಿನ್ನೆರಡು ಕಣ್ಣಿಗೆ

ಗಂಡಾಗಿ ಜನ್ಮವನು ಪಡೆವೆಯೊಂದು ಸರತಿ

ಎಂದೆನ್ನ ಶಪಿಸುತ್ತ ಮಾಡಿದಳು ಆತ್ಮಾಹುತಿ


ಇಂದವಳು ಕಂಡಿಹಳು ಈ ಯೋಧನಲ್ಲಿ

ಮರಣದ ಇಚ್ಛೆಯು ಮೂಡಿಹುದು ಮನದಲ್ಲಿ

ಹಿಂದಾವ ಕ್ಷಣದಲ್ಲೂ ಇರದಂಥ ತಲ್ಲಣ

ಇಂದೇಕೋ ಈ ಭೀಷ್ಮನೆದೆಯಲ್ಲಿ ಕಂಪನ


Rate this content
Log in

Similar kannada poem from Drama