ನೀ ನನ್ನ ಜೊತೆ ಇರಲು
ನೀ ನನ್ನ ಜೊತೆ ಇರಲು
ಅಳುಕು ಉಳುಕುಗಳು ಏಳು ಬೀಳುಗಳು
ಸೋಲುವೆನೆಂಬ ಮನದಿ ಅಸ್ಥಿರತೆ ಭಾವವು
ಇವೆಲ್ಲವೂ ನನಗೆ ತೊಂದರೆ ಅನಿಸುವುದಿಲ್ಲ
ಮನದ ಅರಸಿ! ಚೆಲುವೆ! ನೀ ನನ್ನ ಜೊತೆ ಇರಲು
ಕೋಪ ತಾಪಗಳು ಸಿಹಿಯಾದ ಹುಸಿಮುನಿಸು
ತುಸು ಕಾಡಿಸುವ ಬಯಕೆ ಆಗಾಗ ನನಗುಂಟು
ಆಪಾತರಮಣೀಯ ಚೆಲುವೆ! ಇದೆಲ್ಲವೂ
ಜೀವನವೇ ಬಲು ರಮ್ಯ ನೀ ನನ್ನ ಜೊತೆ ಇರಲು
ಒತ್ತಡದ ಕ್ಷಣದಲ್ಲಿ ನೀ ನನ್ನ ಬಳಿ ಬಂದು
ಸಾಂತ್ವನದ ನಾಲ್ಕು ನುಡಿಗಳನಾಡಿದರೆ ಸಾಕು
ಇನ್ನೇನು ನಾ ನಿನ್ನ ಕೇಳಲೊಲ್ಲೆನು ಗೆಳತಿ
ಎಲ್ಲವನು ಸಹಿಸುವೆನು ನೀ ನನ್ನ ಜೊತೆ ಇರಲು
ಮೋಸ ಮಾಡುವನಲ್ಲ ದ್ವೇಷ ಮಾಡುವುದಿಲ್ಲ
ಚಿರಕಾಲ ನೀ ನಗುತ ನಲಿದು ಸಂತೋಷದಿಂದ
ಇರಲೆಂದು ಹರಸುವೆನು ಎಲ್ಲ ಕಾಲದಲಿ ನಾನು
ಮನವು ಕುಣಿಯುವುದು ನೀ ನನ್ನ ಜೊತೆ ಇರಲು
ಸುಖ ದುಃಖಗಳಲಿ ಲಾಭ ನಷ್ಟಗಳಲಿ
ಕೋಪ ತಾಪಗಳಲಿ ಕಷ್ಟ ಕಾಲಗಳಲಿ
ಏನಾದರಾಗಲೀ ನಾ ನಿನ್ನ ಜೊತೆಗಿರುವೆ
ಸುಂದರವೆ ನನಗದೂ ನೀ ನನ್ನ ಜೊತೆ ಇರಲು
ಕಾಳಜಿಯನು ಮಾಡುವೆನು ಪ್ರೀತಿಯನು ಮಾಡುವೆನು
ತಂದೆ ತಾಯಿಯರಂತೆ ಅನುದಿನವು ನಾನು
ಒಡಹುಟ್ಟಿದವರಂತೆ ಮಮತೆ ವಾತ್ಸಲ್ಯಗಳನು
ಸದಾ ತೋರುವೆ ನಾನು ನೀ ನನ್ನ ಜೊತೆ ಇರಲು
ನಿನ್ನಲ್ಲು ನಾ ಕಂಡೆ ತಂದೆತಾಯಿಯ ಪ್ರೀತಿ
ಹುರಿದುಂಬಿಸುವಿ ನನ್ನ ಅನುಜರಂತೆ
ನನ್ನೆಲ್ಲಾ ಏಳಿಗೆಗೆ ಭಾಮೆ ಕಾರಣ ನೀನು
ಸ್ವರ್ಗವೇ ನನಗದು ನೀ ನನ್ನ ಜೊತೆ ಇರಲು
ಸಲಹೆಯಲಿ ಮಂತ್ರಿ ಶಯನದಲಿ ರಂಭೆ
ಔತಣದಲಿ ತಾಯಿ ಕ್ಷಮೆಯಲ್ಲಿ ಭೂದೇವಿ
ಸರ್ವತೋಮುಖ ಪ್ರತಿಭೆ ನಿನ್ನದು ನಾರಿ
ಎಲ್ಲವೂ ಸಿದ್ಧಿಸುವುದು ನೀ ನನ್ನ ಜೊತೆ ಇರಲು
ಹೆಣ್ಣೆಂದೂ ಬರಿಯ ಭೋಗದ ಪದಾರ್ಥವಲ್ಲ
ಮೂಳೆ ಮಾಂಸಗಳ ರಾಶಿಯೂ ಅಲ್ಲ
ಎಲ್ಲರ ಪ್ರೀತಿಯ ಸಂಕೇತ ಹುಸಿಯಲ್ಲ
ಏಲ್ಲವನು ಸಾಧಿಸುವೆ ನೀ ನನ್ನ ಜೊತೆ ಇರಲು
ಏನೆಂದು ಬಣ್ಣಿಸಲಿ ನೀ ಮಾಡಿದುಪಕಾರ
ಮರೆತರೆ ಅದಕಿಂತ ಅಪರಾಧ ಮತ್ತಿಲ್ಲ
ಎಲ್ಲರ ಸ್ಥಾನದಲಿ ನಿಂತು ಸಲಹುವಿ ಚೆಲ್ವಿ
ಜೀವನವೇ ಸಾರ್ಥಕವು ನೀ ನನ್ನ ಜೊತೆ ಇರಲು
ಹೆಣ್ಣೆಂದರೆ ತುಚ್ಛ ಭಾವನೆಯು ಸಲ್ಲ
ಹೆಣ್ಣೆಂದರೆ ಉಚ್ಚ ಭಾವನೆಯು ಶ್ರೇಷ್ಠ
ಹೆಣ್ಣಿಲ್ಲದಿದ್ದರೆ ಈ ಜಗವೆ ಶೂನ್ಯ
ಖುಷಿಯಿಂದ ಜೀವಿಸುವೆ ನೀ ನನ್ನ ಜೊತೆ ಇರಲು
ಹೆಣ್ಣು ಖುಷಿಯಾಗಿರೆ ಮನುಕುಲಕೆ ಶ್ರೀರಕ್ಷೆ
ಅವಳು ಮುನಿದರೆ ಮನುಕುಲವು ನಿರ್ನಾಮ
ಏಳು ಬೀಳುಗಳು ಅವಳ ಸ್ವಾಧೀನದಲಿ
ಅಭಿವೃದ್ಧಿ ಹೊಂದುವೆನು ನೀ ನನ್ನ ಜೊತೆ ಇರಲು