ಅಜ್ಜ ಹೇಳಿದ ಸತ್ಯ
ಅಜ್ಜ ಹೇಳಿದ ಸತ್ಯ


ಏಕೆ ಅಜ್ಜ ಬೇರೆ ದಾರ ನಿನಗೆ ಸಿಕ್ಕಲಿಲ್ಲವೇ ?
ಹೊಸೆದು ಹಗ್ಗ ಮಾಡಲಿಕ್ಕೆ ಕೆಂಪು ಹಳದಿ ದಾರವೇ ?
ಕೆಂಪು ಹಳದಿ ಕರುನಾಡಿನ ವಿಶೇಷ ಬಣ್ಣವಲ್ಲವೇ ?
ಅರಿಷಿಣ ಕುಂಕುಮಗಳನದು ನೆನಪಿಸಲೇ ಇಲ್ಲವೇ ?
ನಾಡ ನಾಡಿಗರನು ಎಲ್ಲಾ ಹೀಗೇ ಹೊಸೆವರಲ್ಲವೇ ?
ಹೊಸೆಸಿಕೊಂಡು ನಾವೇ ಹೊಂದಿಕೊಳುತ ಬಾಳುತಿಲ್ಲವೇ?
ಹೀಗೆ ಹಗ್ಗ ಹೊಸೆಯುತೆಮಗೆ ತಿಳಿ ಹೇಳುತಲಿರುವೆಯಾ ?
ಯವನರೆಮ್ಮ ನಿಮ್ಮ ಹೀಗೇ ಹೊಸೆವರೆಂದು ಅಂದೆಯಾ ?
ದಾರವೊಂದು ಸಾಂಕೇತಿಕವೆಂದು ಇಂತು ಒರೆದೆಯಾ ?
ನೇರವಾಗಿ ಹೇಳಿಲೇನು ಕೇಳರೆಂದು ಅಂದೆಯಾ ?
ಹೊಸೆವುದನ್ನು ನಿಲಿಸಿ ಅಜ್ಜ ನನ್ನ ಮುಖವ ನೋಡಿದ
ಹುಚ್ಚನಂತೆ ಒರಲದಂತೆ ಮೂಕಸಂಜ್ಞೆ ಮಾಡಿದ
ಬಟ್ಟೆ ಅಂಚ ತಿರುಗಿಸಿರುವೆನಷ್ಟೇ ಎಂದು ಹೇಳಿದ
ಉಳಿದ ಭಾಗ ಹರಿದು ಬಳಸಲಾಗದೆಂದು ಉಸುರಿದ
ಬಳಸುವಂಥ ಭಾಗವನ್ನು ಮಾತ್ರ ತೆಗೆದುಕೊಂಡೆನು
ಎಸೆವ ಬದಲು ಹಗ್ಗಮಾಡಿ ಬಳಸಲೆಂದುಕೊಂಡೆನು
ಕಣ್ಣೆದುರಿಗೆ ಕಾಂಬ ನೋಟವೆಂದು ಸತ್ಯ ತಿಳಿಸದು
ಒಳಹೊಕ್ಕೊಡೆ ಬೇರೆ ನಿಜವು ನಿನ್ನ ಕಾಯುತಿರುವುದು