ಆತ್ಮ ವಿಶ್ವಾಸ
ಆತ್ಮ ವಿಶ್ವಾಸ
ನಮ್ಮ ಇಳಿವಯಸಿನಲಿ ಹೊರಗಿಟ್ಟಿರಲ್ಲ
ಪೊರೆವ ಸಮಯದಲೆಮ್ಮ ಕೈಬಿಟ್ಟಿರಲ್ಲ
ಊರುಗೋಲೇ ಬೇಡ ಇವರೆ ಸಾಕೆಂದು
ಭಾವಿಸಿದ ಭಾವನೆಯೆ ಸುಳ್ಳಾಯಿತಲ್ಲ
ಆಸರೆಗೆ ಪಕ್ಕದಲಿ ಬಿದ್ದ ಕೋಲೇ ಗತಿ
ಜೊತೆಗೆ ತಂದ ಚೀಲದಲ್ಲಿ ಇಲ್ಲ ಏನೇನೂ
ಹಳೆ ನೆನಪು ಚಿಂತೆಗಳೆ ಇರಬಹುದೇನೋ
ನಮ್ಮಾಸ್ತಿ ಬಯಸಿದಿರಿ ನಮ್ಮನಂತೂ ಅಲ್ಲ
ನಮ್ಮ ಗಳಿಕೆಯನೆತ್ತಿ ನಮ್ಮ ಹೊರಗೊತ್ತಿ
ಸೂರಿಟ್ಟವರ ಸೂರ ಹೊರಗಿಟ್ಟಿರಲ್ಲ
ಪಾಪ ಪುಣ್ಯಗಳೆಲ್ಲ ಮೂಲೆಸೇರಿದವಲ್ಲ
ನಾನೆಂಬ ಸ್ವಾರ್ಥವೇ ಅತಿಯಾಯಿತಲ್ಲ
ಎತ್ತಿ ಆಡಿಸಿವರೇ ತೊತ್ತೆಂದರಿಲ್ಲ
ಅಂದು ಇಡಿ ಸಂಸಾರವನು ಹೊತ್ತವರು
ಇಂದಿವರಿಗೆಲ್ಲ ನಾವ್ ಹೊರೆಯಾದೆವಲ್ಲ
ದೀರ್ಘಾಯುವಾಗಲ್ಕೆ ನಾವ್ ಭೀಷ್ಮರೇನಲ್ಲ
ಇಚ್ಛಾಮರಣದ ವರ ನಮಗಿಲ್ಲವಲ್ಲ
ಬಾಳಿನುದ್ದಕೂ ಸತ್ತು ಬದುಕಿರ್ದೆವಾವೆಲ್ಲ
ಸಾವಿಗಂಜುವ ಹೇಡಿ ಬಾಳು ನಮದಲ್ಲ
ಕುಳಿತು ಮರದಡಿಯಲ್ಲಿ ದೂರ ದಿಟ್ಟಿಸುತಲ್ಲಿ
ಬಾಳಸತ್ವವನಿಂದು ನೆನೆಯುತಿಹೆವಲ್ಲ
ಎಷ್ಟು ದಿಟ್ಟಿಸಲೇನು ಹಿಟ್ಟಿಡುವರಾರಿಲ್ಲ
ಅಟ್ಟು ನಚ್ಚಿನೊಳಾರೂ ಬಡಿಸುವವರಿಲ್ಲ
ನಾವು ಹಿರಿ ಜೀವಗಳು ಯಾರಿಗೂ ಬೇಕಿಲ್ಲ
ಈ ಭುವಿಗೆ ನಮ್ಮಿಂದ ಯಾವ ಲಾಭವು ಇಲ್ಲ
ನಾವಿನ್ನು ಹೆಚ್ಚು ದಿನ ಬದುಕಿರುವುದಿಲ್ಲ <
/p>
ಧನ್ಯವಾದವು ನಿಮಗೆ ಸತ್ಯವರುಹಿದಿರಲ್ಲ
ಆದರೇನಂತೆ ಆದರೇನಂತೆ
ಇನ್ನು ನಮ್ಮಯ ಬದುಕು ಹೀಗಂತು ಅಲ್ಲ
ದಿಟ್ಟಿ ದೂರದಿ ನೆಟ್ಟು ನೋಡುತಿಹೆವಲ್ಲ
ಅದರರ್ಥ ನಾವ್ ಬದುಕಿನಾಸೆ ತೊರೆದಿಲ್ಲ
ಸಾಧನೆಗೆ ವಯಸೊಂದು ಕಾರಣವೆ ಅಲ್ಲ
ನೋಡುತಿರಿ ನಾವ್ ಬೆಳೆವ ಪರಿಯ ನೀವೆಲ್ಲ
ಉಂಡುಟ್ಟು ನಲಿದಾಯ್ತು ಹಿಂದೆ ನಾವೆಲ್ಲ
ಈಗದರ ಮೇಲೆಮಗೆ ವ್ಯಾಮೋಹವಿಲ್ಲ
ಲೋಕೋಪಕಾರಕ್ಕೆ ಇನ್ನು ಬದುಕೆಲ್ಲ
ನಮ್ಮ ತಡೆವವರಿನ್ನು ಜನಿಸಿಯೇ ಇಲ್ಲ
ಸೇರುವೆವು ನಮ್ಮಂಥ 'ನಿಷ್ಪ್ರಯೋಜಕ'ರೆಲ್ಲ
ಒಂದೆಡೆಗೆ ಕೂಡುವೆವು ಚರ್ಚಿಸುವೆವೆಲ್ಲ
ನಮ್ಮ ಅನುಭವಗಳಿಗೆ ರೂಪವೊಂದನು ನೀಡಿ
ಒಯ್ವೆವೆಲ್ಲರ ಜೊತೆಗೆ ನಮ್ಮ ಸಮರಿಲ್ಲ
ಸೂರಾಸರೆಗಳಿರದಂಥ ನಮ್ಮಂಥವರಿಗೆಲ್ಲ
ಊರುಗೋಲಾಗುವೆವು ಮಾತು ಬದಲಿಲ್ಲ
ಯಾರು ಹಂಗಲು ಬಾಳ್ವ ಹೀನ ಸ್ಥಿತಿ ನಮಗಿಲ್ಲ
ದಿಕ್ಕೆಟ್ಟು ಕುಳಿತಿಹೆವು ಎಂದೆಣಿಸುವುದು ಸಲ್ಲ
ಪರರಿಂಗೆ ದಿಕ್ಕಾಗುವಾ ದಿಸೆಯೊಳಿಹೆವೆಲ್ಲ
ದೃಢತೆಯಾ ಸಂಕೇತ ಮರದ ಬುಡ ಹಿರಿವ್ಯಾಸ
ನಮ್ಮ ಬಾಳ್ನನುಭವವೂ ಅಂತೆಂಬ ವಿಶ್ವಾಸ
ನೆರಳೀವೆವು ಕೇಳಿ ನೆರಳಿರಿರದವರಿಗೆಲ್ಲ
ಬೇವನ್ನೆ ಉಂಡಿಹೆವು ನಮ್ಮ ಬದುಕಿನಲೆಲ್ಲ
ಉಣಿಸುವೆವು ಬೆಲ್ಲವನೆ ಬಂದವರಿಗೆಲ್ಲ
ಬೇವನ್ನೆ ಉಂಡಿಹೆವು ನಮ್ಮ ಬದುಕಿನಲೆಲ್ಲ
ಉಣಿಸುವೆವು ಬೆಲ್ಲವನೆ ಬಂದವರಿಗೆಲ್ಲ