ಅವನೋ .... ನಾನೋ....
ಅವನೋ .... ನಾನೋ....


ಅವನೋ ...... ನಾನೋ.......
ತಲೆಗೂದಲುದ್ದುದ್ದ ಬೆಳೆದಿತ್ತು ಎಂದೆನಿಸಿ
ಕ್ಷೌರಿಕನ ಅಂಗಡಿಗೆ ಅಡಿಯನಿರಿಸಿ
ಕಣ್ಮುಚ್ಚಿ ಕುಳಿತೆನವ ತೋರಿರ್ದ ಕುರ್ಚಿಯಲಿ
ತಲೆಯ ಮೇಲ್ ಕತ್ತರಿಯ ನೃತ್ಯವಲ್ಲಿ
ಕ್ಷಣಗಳುರುಳಿದವಲ್ಲಿ ಹುಲುಸಾಗಿ ಬೆಳೆದಿರ್ದ
ಕೇಶವದು ತುಂಡಾಗಿ ಉರುಳಿತರ್ಧ
ಮತ್ತೆ ಕೆಲ ಚಣವುರಳೆ ಕೇಶ ಮಾರಣಹೋಮ
ನಡೆದಲ್ಲಿ ಖಲ್ವಾಟ ಕೇಶ ಕ್ಷಾಮ
ಎಷ್ಟು ದಿನಗಳ ತಪವು ಇಂಥ ಫಲ ಕಂಡಿತ್ತು
ಕೇಶರಾಶಿಯು ಚಣದೆ ನೆಲದೊಳಿತ್ತು
ಕ್ಷೌರಿಕನ ಮುಖವೊಮ್ಮೆ ವೀಕ್ಷಿಸಿದೆ ಕಂಡಿತ್ತು
ನಿರ್ಭಾವುಕ ಸ್ಥಿತಿಯು ನಲಿಯುತಿತ್ತು
ಮತ್ತೆ ಕಣ್ಮುಚ್ಚಿದೊಡೆ ಸತ್ಯವೊಂದೆದುರಾಯ್ತು
ನಿದ್ದೆಯನು ಬರದಂತೆ ತಳ್ಳಿಹೋಯ್ತು
ನನ್ನ ಕೇಶದ ಹಾಗೆ ಸಸ್ಯ ಸಂಕುಲವೆಲ್ಲ
ಹುಲುಸಾಗಿ ಹಸಿರಾಗಿ ನಗುತಲಿತ್ತು
ನಮ್ಮ ಸ್ವಾರ್ಥದ ಕತ್ತಿ ಸವರುತೆಲ್ಲವನಲ್ಲಿ
ಎಳೆ ಹುಲ್ಲು ಕೂಡ ತಾ ಬೆಳೆಯದಲ್ಲಿ
ಹಸಿರನ್ನೆ ನಂಬಿರ್ದ ಹಲ ಜೀವ ಸಂಕುಲಕೆ
ಅಸ್ಥಿರತೆ ತಂದಂಥ ಹೆಮ್ಮೆ ಮನಕೆ
ಎಷ್ಟು ಪಡೆದರು ಸಾಲದೆನ್ನುವಂಥ ದುರಾಸೆ
ವನ್ಯಜೀವಿಗಳು ವಾಸಕಾಯ್ತು ಖುಲಾಸೆ
ಮಳೆ ಬಿಸಿಲು ಗಾಳಿಯಲಿ ಏರುಪೇರಾಗಿರುಹುದು
ಋತುಮಾನ ಸಹಜತೆಯ ತೊರೆಯುತಿಹುದು
ವೃತ್ತಿಯಲಿ ಅವನೋರ್ವ ಕ್ಷೌರಿಕನೆ ಇರಬಹುದು
ನಾವೆಲ್ಲ ಪರಿಸರಕೆ ಕ್ಷೌರಿಕರೆ ಅಹುದು
ಬದುಕಲವ ಕತ್ತರಿಯ ಬಳಸಿದರೆ ನಾವೆಲ್ಲ
ಜೀವನಾಶಕೆ ಕತ್ತಿ ಬಳಸುತಿಹೆವಲ್ಲ
ಅತಿವೃಷ್ಟಿ ಎಲ್ಲವನು ಕೊಚ್ಚಿ ಕೊಂಡೊಯ್ದರೂ
ಎಚ್ಚರವ ಹೊಂದಿಲ್ಲ ಮನುಜರಾರೂ
ನಮ್ಮ ಕಾಲ್ಬುಡಕೆಲ್ಲ ಅಮರಿ ಅಡರುವ ತನಕ
ನರ ಬಾಲ ನೆಟ್ಟಗಿರದಂಥ ಶುನಕ