ವಾನರ ಪ್ರಶ್ನೋತ್ತರ
ವಾನರ ಪ್ರಶ್ನೋತ್ತರ
ಮರ್ಕಟಗಳ ಮರಿಯ ಜತೆಗೆ ವೀಕ್ಷಿಸಲು ಒಡನೆ
ಹಾರಿ ಬಂತು ಮನಕೆ ಹಲವು ಹತ್ತು ತರಹ ಯೋಚನೆ
ಮರಿಯು ತಾಯ ಒಡಲಿಗಾತು ಕುಳಿತಿರುವುದ ನೋಡಿದೆ
ಹಿರಿಯ ಮಂಗ ಮರಿಯ ತಲೆಯ ಸವರುತಿಹುದು ಕಂಡಿದೆ
ಸುತ್ತ ಸುಳಿವ ಮನುಜರಾಟ ಮರಿಗೆ ಭಯವ ತರಿಸಿದೆ
ಅದಕೆ ಅಮ್ಮನನ್ನು ತಬ್ಬಿ ಹಿಡಿದು ಪ್ರಶ್ನೆಗಳನು ಕೇಳಿದೆ
ಅಮ್ಮ ಹೇಳು ನನ್ನ ಹೆಸರು ಅದರ ಅರ್ಥ ಏನಿದೆ
ನಿನ್ನ ಹೆಸರು ಇವರದೆಲ್ಲ ನಾನು ತಿಳಿಯಬೇಕಿದೆ
ತಾಯಿ ಮಂಗ ಮಗುವ ಪ್ರಶ್ನೆ ಕೇಳಿ ಮುಗುಳು ನಕ್ಕಿತು
ನಿನ್ನ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವೆನೆಂದಿತು
ಮಗುವೆ ನರರು ಹೆಸರನಿಟ್ಟು ಹೆಸರಿಗಾಗಿ ನವೆವರು
ಮಗುವು ಬೆಳೆಯೆ ಶಾಲೆಯೆಂಬ ಕಾರಾಗೃಹಕೆ ತಳುವರು
ಜಗವೆ ಶಾಲೆ ಗುರುವೆ ಎಲ್ಲ ಎನುವ ಸತ್ಯ ಮರೆವರು
ನಾಲ್ಕು ಗೋಡೆ ಮಧ್ಯೆ ಕಲಿಕೆ ಎಂದು ನಂಬಿ ನಡೆವರು
ಒಂದು ಶಾಲೆಗೊಂದು ಹೆಸರು ಮತ್ತೆ ಅಲ್ಲಿ ಗೊಂದಲ
ಎಲ್ಲಿ ಕಡೆಯು ಕಲಿವುದೊಂದೆ ಅರ್ಥವಿರದ ಹಂಬಲ
ಮನೆಯ ಒಳಗೆ ಆಡುತಿದ್ದ ಮಗುವು ಆಟ ಮರೆವುದು
ಇಷ್ಟವಿರದೆ ಇದ್ದರೂನು ಓದು ಬರಹ ಕಲಿವುದು
ಹೆಚ್ಚು ಹೆಚ್ಚು ಅಂಕ ಪಡೆವ ಸ್
ಫರ್ಧೆಯೊಳಗೆ ಜಿಗಿವುದು
ಓದಿ ಓದಿ ಅಂಕ ಪಡೆದು ದೊಡ್ಡ ಹುದ್ದೆ ಪಡೆವುದು
ಹೆಚ್ಚು ಗಳಿಕೆಯಾಸೆಯಿಂದ ದೇಶ ತೊರೆದು ನಡೆವುದು
ಮನುಜನಾಗಿ ಬದುಕುವಂಥ ಮೌಲ್ಯಗಳನು ತೊರೆವುದು
ತಂದೆ ತಾಯ ವೃದ್ಧಾಪ್ಯದಿ ಅವರ ದೂರವಿಡುವುದು
ಅವರು ಕೂಡಾ ಹೆಮ್ಮೆ ಪಟ್ಟು ಬಳಿಕ ನೋವ ತಿನುವರು
ಕಡೆಗಾಲದಿ ಮಗುವ ಸನಿಹ ಬಯಸಿ ಬರಿದೆ ಉರಿವರು
ಮನ್ನಣೆಯನು ಬಯಸಿ ಬಳಸಿ ಬಾಳಿನರ್ಥ ಮರೆವರು
ಆಸ್ತಿ ಪಾಸ್ತಿ ತಮ್ಮ ಹೆಸರಿನಲ್ಲಿ ಇರಿಸಿ ಮೆರೆವರು
ಅಂತಸ್ತಿನ ಗೋಜಲೊಳಗೆ ಸಿಕ್ಕು ಸುಖವ ತೊರೆವರು
ಅಳುತ ಹುಟ್ಟಿ ಹೇಗೋ ಬೆಳೆದು ನಿರಾಶೆಯಲಿ ಮಡಿವರು
ಕೇಳು ಮಗುವೆ ನಮಗೆ ಅಂಥ ಬಾಳು ಏಕೆ ಬೇಕಿದೆ
ನರರ ಪಾಡು ಅವರಿಗಿರಲಿ ನಮಗಿದರಲೆ ಖುಷಿಯಿದೆ
ನಮಗೆ ಹೆಸರು ಭಾಷೆ ಲೆಕ್ಕ ಏನೂ ಬೇಡವಾಗಿದೆ
ಇವುಗಳಿಂದ ತಾನೆ ಮಗುವೆ ನರನ ಬದುಕು ಕೆಟ್ಟಿದೆ
ನೋಡು ನೀನು ಬಾಳ ಪೂರ್ಣ ಆಡಿ ನಲಿವ ಸುಖವಿದೆ
ಆಟದಲ್ಲೆ ಬಾಳತತ್ವ ಅರಿವ ಯೋಗ ನಿನಗಿದೆ
ಪ್ರಕೃತಿಯನು ಪ್ರೀತಿಸುವ ದೊಡ್ಡ ಮನಸು ನಿನದಿದೆ
ದುಃಖವೇಕೆ ದುಗುಡವೇಕೆ ಮಂಗ ನೀನು ಖುಷಿಪಡು
ಸ್ವಾರ್ಥ ರಹಿತ ಬದುಕು ನಮದು ದೇವನಡಿಗೆ ಮುಡಿಯಿಡು