ಭಯ, ಬಯಕೆ, ಭರವಸೆ
ಭಯ, ಬಯಕೆ, ಭರವಸೆ


ನೆನ್ನೆ ಬದುಕಿ ಉಳಿದುಕೊಂಡೆವೆಂಬ ಒಂದೇ ಕಾರಣಕ್ಕೆ
ನಾವು ಇಂದಿನದನ್ನ ನೋಡಬಲ್ಲವರಾದೆವೆ?
ನೆನ್ನೆಯ ನೆನಪುಗಳ ಬಳಿ ಮತ್ತೆ ಒಮ್ಮೆ ಹೋಗಲು
ಅಲ್ಲಿ, ಇಂದಿನದು ನಾಳೆಯಂತೆ ತೋರುವುದಿಲ್ಲವೇ?
ಇಂತಿರಲು, ನಾಳೆಯೆಂಬುದು ಒಂದು ಭ್ರಮೆಯಲ್ಲವೇ?
ನೆನ್ನೆಯ ನೆನಪುಗಳಿಲ್ಲದೆಯೇ ಬದುಕಲಾಗದೆ ಇಂದು
ಕಳೆದುಹೋಗುವ ಇಂದಿನದನ್ನ ಮತ್ತೆ ಪಡೆಯಲೆಂದೇ
ನಾಳೆಯೆಂಬುದನ್ನ ನಾವು ಸೃಷ್ಟಿಸಿಕೊಂಡಿರುವೆವೇ?,
ಕಳೆದುಹೋದ ನೆನ್ನೆಯು ಇಂದಿನದೂ ಕಳೆದುಹೋದೀತೆಂದು
ಭಯವ ತಂದಿರಲಾಗಿ, ನಾಳೆಯೆಂಬ ಭರವಸೆಗೆ ಶರಣಾದೆವೆ?
ನೆನ್ನೆ ಸೃಷ್ಟಿಸಿದ ಭಯದಿಂದಾಗಿ ನಾಳೆಯ ಭರವಸೆಯಲ್ಲೇ
ನಾವಿಂದು ಮುಳುಗಿರಲು ಇಂದಿನ ಜೀವನವಾದರೂ ಏನೆಂದು
ಅರಿಯಲಾಗದೆ ಬದುಕುವುದು ಹೇಗೆಂಬುದನ್ನೇ ಮರೆತೆವಲ್
ಲ
ಈ ಭಯ ಭರವಸೆಗಳೆಂಬ ದ್ವಂದ್ವಾಲೋಚನೆಯಲ್ಲಿ ಸದಾ
ಬಂಧಿತರಾಗಿರಲು, ಬಿಡುಗಡೆಯು ಕಾಣದಾಯಿತು;
ಭಯದಿಂದ ಭರವಸೆ ಸೃಷ್ಟಿಯಾಯಿತೇ ಅಥವಾ
ಭರವಸೆಯೇ ಭಯದ ಸೃಷ್ಟಿಕರ್ತನೇ ಎಂದು ಆಲೋಚಿಸಲು
ಭರವಸೆಯ ಹಿಂದೆಯೇ ಮೂಡಿಬಂದ ಬಯಕೆ
ಇಂದಿನ ಸುಖದ ಅನುಭವವನ್ನ ಮುಂದುವರೆಸಲೋ ಅಥವಾ
ಅನುಭವಿಸಲಾಗದ ಇಂದಿನ ದುಃಖ ಕೊನೆಗೊಳ್ಳಲೆಂದೋ
ನಾಳೆಯ ಭರವಸೆಗೆ ನಾಂದಿ ಹಾಡಿರಬಹುದೆಂದೆನಿಸಿತ್ತು;
ಸಹಜವಾದ ಬಯಕೆಯಲ್ಲಿ ತಪ್ಪು ಇರುವುದಾದರೂ ಏನು?
ನಮ್ಮ ಇರುವಿಕೆ ಎಂಬ ಸಹಜ ಪ್ರಕ್ರಿಯೆಯಲ್ಲಿ
ಬಯಕೆಗಳು ಇರುವಿಕೆಗೆ ದಾರಿದೀಪಗಳಂತೆ ಇದ್ದರೂ,
ಕಳೆದುಹೋಗಬಹುದೆಂಬ ಭಯದ ಅವಾಸ್ತವಕ್ಕೆ ಸಿಲುಕಿ
ತಮ್ಮ ವಾಸ್ತವಿಕೆಯನ್ನ ಬಿಟ್ಟಿರುವುದೇ ಒಂದು ದುರಂತವೇ?