STORYMIRROR

Thrineshwara Mysore

Inspirational

4  

Thrineshwara Mysore

Inspirational

ಮಾಯವಾದ ಸಾವಿನ ಭಯ

ಮಾಯವಾದ ಸಾವಿನ ಭಯ

1 min
693

ನೀರಿನಲ್ಲಿ ಮುಳುಗಿ ಸಾಯುವ ಭಯ ಸದಾ ಕಾಡುತ್ತಿರಲದು 

ಈಜುವುದ ಕಲಿತು, ನೀರೊಳಗಿಳಿದು ಒಮ್ಮೆ 

ನಿರಾಯಾಸವಾಗಿ ಮೇಲೆದ್ದು ಬಂದಾಗ ಮಾಯವಾಗಿತ್ತು,


ಮೇಲಿಂದ ಕೆಳಗೆ ಬಿದ್ದು ಸಾಯುವ ಭಯ ಮತ್ತೆ ಕಾಡಲದು

ರೆಕ್ಕೆಯ ಕಟ್ಟಿಕೊಂಡು ಗಾಳಿಯಲ್ಲಿ ಹಾರಾಡಿ

ಕಂದಕದೊಳಗಿಳಿದು ಮೇಲೇರಿ ಬಂದಾಗ ಮಾಯವಾಗಿತ್ತು,


ಮೈಗೆ ಬೆಂಕಿ ತಾಕಿ ಸುಟ್ಟುಹೋಗಿ ಸಾಯುವ ಭಯ ಕಾಡಲದು

ಕಂದಮ್ಮವೊಂದು ಬೆಂಕಿಯಲ್ಲಿ ಒಮ್ಮೆ ಸಿಲುಕಿರಲು

ಧೈರ್ಯದಿಂದ ಒಳನುಗ್ಗಿ ಕಂದಮ್ಮನ ರಕ್ಷಿಸುವಲ್ಲಿ ಮಾಯವಾಗಿತ್ತು,


ಸಾಯುವ ಭಯ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಲಿರಲು

ಒಂದೊಂದು ಅನುಭವವೂ ತನ್ನದೇ ರೀತಿಯಲ್ಲಿ ಆಗಾಗ್ಗೆ

ಭಯವನ್ನ ದೂರಮಾಡಿದರೂ, ಅದು ಸದಾ ಕಾಡುತ್ತಲೇ ಇತ್ತು;


ಅರಿವಿಗೆ ಸಿಲುಕುವ ನಿತ್ಯ ಜೀವನದ ಅನುಭವಗಳಿಂದಾಗಿ

ಸಾವಿನ ಹತ್ತಿರ ಹೋಗಿ ಬದುಕಿ ಬಂದರೂ

ಸಾವಿನ ಭಯವೇಕೆ ತನ್ನಲ್ಲಿ ಉಳಿದುಕೊಂಡಿತೆಂದು ತಿಳಿಯದಾಗಿತ್ತು;


ಸಾವಿನ ಹತ್ತಿರ ಹೋಗಿ ಬಂದೆನೆಂಬುದು ಒಂದು ಭ್ರಮೆಯೇ?

ಅರಿವಿಗೆ ಬಾರದ ಸಾವಿನ ನೆಲೆಯನ್ನೇ ತಿಳಿಯದ ಮೇಲೆ

ಅದರ ಹತ್ತಿರ ಹೋಗುವುದರಲ್ಲಿ ಅರ್ಥವಿದೆಯೇ?


ಸಾವು ಎಂಬುದು ಎಂದಾದರೊಮ್ಮೆ ಕೊನೆಯಾಗಲೇಬೇಕಾದ

ಭೌತಿಕ ಶರೀರದ ನಾಶವೆಂದು ತಿಳಿದ ಮೇಲೆ

ನಾಶವಾದುದನ್ನ ಅರಿತುಕೊಳ್ಳಲೆಂದು ಇರುವವರಾರು?


ಅಂತೆಯೇ, ಈ ಸಾವು ಅರಿವಿಗೆ ಬಾರದುದಾಗಿ,

ಅದೊಂದು ಅಜ್ಞಾತವಾದುದೆಂಬ ಸತ್ಯದ ಅರಿವಾಗಿರಲು

ಸದಾ ಕಾಡುತ್ತಲಿದ್ದ ಅದರ ಭಯ ತಾನಾಗೇ ಮಾಯವಾಗಿತ್ತು;


ಸಾವು ಎಂದರೆ ಅಂತ್ಯವಾಗುವುದೆಂದು ತಿಳಿದ ಮನಸ್ಸು

ನಿತ್ಯ ಜೀವನದಲ್ಲೇ ಹಳೆಯದರ ಸಾವನ್ನಕಾಣುವಲ್ಲಿ

ಹೊಸದರ ಸೃಷ್ಟಿಯ ತಂದು ನಿರಂತರ ನೈಜತೆಯ ತೋರುತಲಿತ್ತು;


ಬದಲಾವಣೆಯೆಂಬುದು ಒಂದು ಪ್ರಕೃತಿ ನಿಯಮವಾಗಿದ್ದು

ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವುದರಲ್ಲಿ ಸಂತೋಷವಿದೆ,

ಆದರೆ ವಿರೋಧಿಸುವುದು, ನಿರಾಕರಿಸುವುದು ಗೊಂದಲಕ್ಕೆ ದಾರಿ;


ಬದಲಾವಣೆ ಇರುವುದಕ್ಕಿಂತ ಉತ್ತಮವಾದುದನ್ನ ಬಯಸುವುದಲ್ಲ;

ಸ್ವಾಭಾವಿಕವಾಗಿ, ನಿರಂತರವಾಗಿ ಜರುಗುವ ಈ ಕ್ರಿಯೆಯನ್ನ

ಹರುಷದಿ ಸ್ವೀಕರಿಸುವುದರಲ್ಲಿ ಹೊಸತನ ಬದುಕಿಗೆ ಬಂದೀತು;


ಹಳೆಯದರ ಸಾವಿನಲ್ಲಿ ಹೊಸದರ ಸೃಷ್ಟಿಯಾಗಿ ಬಾಳು ಹಸನಾದೀತು;

ನಿತ್ಯ ಜೀವನದಲ್ಲಿ ಈ ಹುಟ್ಟು ಸಾವುಗಳು ಸಾಗುತ್ತಿರಲು ಅದರ

ಪೂರ್ಣ ಅರಿವಿನಿಂದ ಸಾವಿನ ಭಯ ಕುರುಹಿಲ್ಲದೆ ಮಾಯವಾದೀತು. 


Rate this content
Log in

Similar kannada poem from Inspirational