ಇರುವುದ ಮರೆತು ಇಲ್ಲದಿರುವುದರ ಚಿಂತೆ
ಇರುವುದ ಮರೆತು ಇಲ್ಲದಿರುವುದರ ಚಿಂತೆ


ಒಂದು ಕಾಳನ್ನು ಭೂಮಿಯಲ್ಲಿ ಬಿತ್ತಿ ನಂತರದಲ್ಲಿ
ಒಂದೇ ಕಾಳಿನ ತೆನೆಯ ಪಸಲನ್ನ ಕೊಡಬಲ್ಲ
ಬೆಳೆಯನ್ನ ಬೆಳೆದು ಹರ್ಷದಿ ಪೋಷಿಸುವವರುಂಟೆ?
ದಿನ ನಿತ್ಯದಿ ತಾ ತಿನ್ನುವ ಮೇವಿನ ಪ್ರಮಾಣಕ್ಕಿಂತ
ಅತಿ ಕಡಿಮೆ ಪ್ರಮಾಣದಲಿ ಹಾಲನು ನೀಡುವ ಹಸುವನ್ನ
ಹಾಲು ಮಾರಿ ಜೀವಿಸಲೆಂದು ಸಾಕಿ ಪೋಷಿಸುವವರುಂಟೆ?
ಹಲವು ವರುಷಗಳು ಸಾಧನೆಗೈದು ಕಲಿತ ವಿದ್ಯೆಯಿಂದ
ನಿತ್ಯ ಜೀವನ ಸಾಗಿಸಲೆಂದು ಬಿಡಿಗಾಸನ್ನೂ ಗಳಿಸಲಾಗದಿರೆ
ಅದೊಂದು ವಿದ್ಯೆಯೆಂದು ಕಲಿಯಲಿಚ್ಚಿಸುವರೇ?
ತನ್ನಿರುವಿಕೆಯ ಸಹಜ ಸ್ಥಿತಿಯಲ್ಲೇ ಸಂತಸದಿ ಬದುಕಲೆಂದು
ದೇಹ ಮನಸ್ಸುಗಳಿಗೆ ಸಾಮರ್ಥ್ಯ ಕರುಣಿಸಿರುವುದ ಮರೆತು
ಇನ್ನಷ್ಟು ಕೊಡೆಂದು ದೈವಕ್ಕೆ ಬೇಡಲದು ಭಕ್ತಿಯೆನಿಸುವುದೇ?
ಭಯ, ಬಯಕೆಗಳಿಂದಾದ ಗೊಂದಲಗಳ ಅನುಬಂಧನದಲಿ ಸಿಲುಕಿ
ತನ್ನಿರುವಿಕೆಯ ಅನುಕ್ಷಣದ ನೈಜತೆಯನ್ನ ಅರಿಯಲಾಗದೆ
ಬೂತದಿಂದ ಭವಿಷ್ಯತ್ತಿಗೆ ಹಾರಬಯಸುವ ಮನಸಿಗೆ
ಬದುಕಿನ ಅನುಕ್ಷಣದಲ್ಲಿನ ಸತ್ಯ, ಸೌಂದರ್ಯವು ಕಾಣುವುದೇ?