ಪರಿಪರಿ ಹಂಬಲಿಸುವೆಯೇಕೆ?
ಪರಿಪರಿ ಹಂಬಲಿಸುವೆಯೇಕೆ?
"ಪರಿಪರಿ ಹಂಬಲಿಸುವೆಯೇಕೆ ನೀ ನನ್ನ ನೋಡಲೆಂದು?"
ಪರಿಪರಿ ಹಂಬಲಿಸುವೆಯೇಕೆ ಸದಾ ನೀ ನನ್ನ ನೋಡಲೆಂದು
ನೋಡುವೆಯಾದರೂ ಯಾವ ರೂಪದಲೆಂದು ತಿಳಿದಿಹೆಯೇನು?
ನೋಡಬಯಸಿದವರ ನೋಟದಲಿ ಬಯಸಿದಂತಿಹೆನು
ನಾನೇನು ಮಾಡಲಿ ನೀನರಿಯೆ ನನಗಿರದು ದಿಟದ ರೂಪವೆಂದು;
ಯಾವ ರೂಪದಲಿ ಬಂದರೇನು ನಿಮ್ಮ ಬಯಕೆಗಳನೇಕವಿರಲು
ವೈಯಕ್ತಿಕ ವಿರೋಧಭಾಸದಲಿ ನೀವೆಲ್ಲ ಬಡಿದಾಡಿಕೊಳುವಿರಲ್ಲ,
ನಿಜ ಪ್ರೀತಿಯಲಿ ಅವರವರ ಭಾವಕ್ಕೆ ಅವರಿಚ್ಛೆಯ ಪೂರೈಸುವೆ
ಇಷ್ಟೂ ಮಾಡಲಾಗದೆಂದರೆ ನಿಮ್ಮ ಪ್ರೀತಿಗಾದ ಅಪಚಾರವಲ್ಲವೇ?
ಮನಸಿನಿಂದಾಗಲೀ, ಇಂದ್ರಿಯಗಳಿಂದಾಗಲೀ ಗ್ರಹಿಸಲಾಗದ ನನ್ನ
ವಿಶ್ವವ್ಯಾಪಿ, ಸರ್ವಾಂತರ್ಯಾಮಿ ಎಂದೆಣಿಸಿ ನಂಬಿಕೊಂಡಿರುವಿರೆಲ್ಲ,
ಅಂತರಂಗದ ಭಯ, ಬಯಕೆಗಳ ನೀಗಲೆಂದು ನಿಷ್ಠೆ ತೋರುವಿರೆಲ್ಲ,
ಕಲ್ಪನಾಲೋಕದಲ್ಲಿ ತೇಲಾಡುತ್ತ ನನ್ನನ್ನರಿಯುವುದನ್ನೇ ಮರೆತಿರೆಲ್ಲ;
ವಿಶ್ವವ್ಯಾಪಿಯೆಂದ ಮೇಲೆ ಪ್ರತೀ ಸೃಷ್ಠಿಯಲ್ಲಿ ನನ್ನ ಗುರುತಿಲ್ಲವೇ?
ಸರ್ವಾಂತರ್ಯಾಮಿಯೆಂದ ಮೇಲೆ ನಿಮ್ಮೊಳಗೂ ನಾನಿರಬೇಕಲ್ಲವೇ?
>ಬಗೆ ಬಗೆ ನಾಮ ರೂಪಗಳನಿಟ್ಟು ನಿರಂತರ ಪೂಜಿಸುವುದ ಬಿಟ್ಟು
ಒಂದೊಂದು ಸೃಷ್ಟಿಯಲೂ ಇರುವ ಅದ್ಭುತವನ್ನ ನೋಡಬಾರದೇ?
ನಂಬಿಕೆಗಳಿಂದಾಗಿ ನನ್ನೆಲ್ಲ ಸೃಷ್ಟಿಯಿಂದ ದೂರವಾಗಿರುವಿರೆಲ್ಲ,
ದ್ವೇಷಾಸೂಯೆಯಲಿ ಪರಸ್ಪರ ಧೂಷಿಸಿ ಬಡಿದಾಡಿಕೊಳುವಿರೆಲ್ಲ,
ಪ್ರೀತಿಯಿರದೆ ಭಯದಲ್ಲಿ ಗೊಡ್ಡು ಆಚರಣೆಗಳ ಆಶ್ರಯಿಸುವರೆಲ್ಲ,
ವಾಸ್ತವದಲ್ಲಿರುವ ಸತ್ಯವನರಿಯದೆ ದುಃಖದಲಿ ಮುಳುಗಿರುವಿರೆಲ್ಲ;
ಬೆಳ್ಳಿ ಹಾಸಿಗೆಯ, ಸ್ವರ್ಣ ಶಿಖರದ ಪರ್ವತಗಳ ಅದ್ಭುತ ನೋಟದಲ್ಲಿ,
ಹರಿದೆಲ್ಲೆಡೆ ಮಲಿನವ ಕುಡಿದರೂ ಸದಾ ಶುಭ್ರವಾಗಿರುವ ನದಿಗಳಲ್ಲಿ,
ಆಕಾಶದೆತ್ತರದಿ, ಹಸಿರ ಹೊದ್ದ, ಹಲವು ಜೀವ ಸಂಕುಲಗಳ ಕಾನನದಲ್ಲಿ,
ಜೀವನದ ಸೊಬಗಿನಲ್ಲಿ, ಸೃಷ್ಟಿಯ ಚಮತ್ಕಾರಗಳಲ್ಲಿ ನಾನಿಲ್ಲವೇನು ?
ಮನದ ದುಡುಕು, ದುಮ್ಮಾನಗಳ ಬಿಟ್ಟು ಸಂವೇಧನಾಶೀಲತೆ ತೋರಿ,
ಸೃಷ್ಟಿಯಲ್ಲಿನ ಅನುಕ್ಷಣದ ನೈಜತೆಯ ಸೌಂದರ್ಯವನ್ನ ಆನಂದಿಸುತ್ತಾ,
ನೋವು, ನಲಿವುಗಳೆಂಬ ವಿರೋಧಾಭಾಸಗಳಲ್ಲಿ ಸಿಲುಕಿ ಪರಿತಪಿಸದೆ,
ನಿನ್ನಿರುವಿಕೆಯನ್ನೇ ಅನುದಿನವೂ ಪ್ರೀತಿಸುವಲ್ಲಿ ನಾನಿರುವೆನಲ್ಲವೇ?