ನೆನಪುಗಳು
ನೆನಪುಗಳು
ಹಸಿರುಟ್ಟ ಮರದ ತುಂಬಾ
ನಿಗಿ ನಿಗಿ ಕೆಂಡಗಳು
ಅರಳಿ ಹೂವಾದಂತೆ
ಮುಗಿಲು ಮುಖ ಗುಲ್ಮೊಹರು
ಕೆಂಪು ಕೆಂಪು .......
ಹೂ ಹಣ್ಣುಗಳ ಭಾರಕ್ಕೆ
ತೂಗಿ ತೊನೆಯುತ್ತಿದೆ
ಈಗಷ್ಟೇ ಬಿದ್ದ ಹನಿ ಮಳೆಗೆ
ತೊಯ್ದು ಮಣ್ಣರಳಿ
ಕಮ್ಮನೆಯ ಕಂಪು ತಂಪು .....
ಚಿಗುರು ಪಾದದ ತುಳಿತಕ್ಕೆ
ಮೈ ಅರಳಿಸಿದೆ ಹುಲ್ಲು
ಹರಿದ ಹೊಳೆ ಜುಳು ಜುಳು ನಡುವೆ
ಹಲ್ಲು ಕಿರಿಯುವ ಮುಗುದೆಯೊಡಲ
ಕಂಡು ಸೂರ್ಯನ ಚೆಲುವು
ಬಯಕೆ ಕನಸುಗಳ ಓಕುಳಿಯಾಟಕ್ಕೆ
ಧರೆಯೇ ಸಜ್ಜಾಗಿ ನಿಂತು
ತಲೆದೂಗಿ ಕರೆದಿದೆ
ಸೀತಾಳೆ ಹೂದಂಡೆ
ಮಾಮರದ ಒಡಲಿಂದ
ಹರಿದು ಬರುತಿದೆ ಹಾಡು
ಕೋಗಿಲೆಯ ಜೀವಂತ ಗೀತೆ
ಮುಚ್ಚಿರುವ ಕಣ್ಣು ತೆರೆ
ಕಾಣುವುದು ನೋಡು
ಈ ನೆಲದ ಹಚ್ಚನೆಯ ತುಂಬು ಬಾಳು
ಅಂತರಾಳದಲ್ಲಿ ಹನಿಯೊಡೆದ ಪ್ರೀತಿ
ಮನಸ್ಸೆಲ್ಲ ತೇವ ತೇವ
ತಂಗಾಳಿ ಬೀಸಿ , ಹೂಗಂಧ ತೀಡಿ
ಝಲ್ಲೆನಿಸುವ ಮನದ ಭಾವ
ಚಿಗುರು ,ಹೂ ,ಹಣ್ಣು ಬೆಳೆಯುವುದೇ ಬದುಕು
ಒಳಗಿರಲಿ ಅನುಭಾವದೊಂದು ಪಲಕು
ಸಂಜೆ ಇಳಿಗಂಪಿನಲಿ
ಕಸುವಳಿದ ದವಡೆಯಲಿ
ನೆನಪುಗಳ ಮೆಲುಕು