ಭಾಸವಾಗುತಿದೆ ಎನಗೆ..!!!
ಭಾಸವಾಗುತಿದೆ ಎನಗೆ..!!!
ಮಳೆಯು ಕಾಲ್ಗೆಜ್ಜೆಯ ತೊಟ್ಟು ಬರುವಾಗ
ಆಗಸದಿ ನೀಲ ಕಾದಂಬಿನಿಯರ ಸಾಲು
ಸುಂದರ ತರುಣಿಯರು ಸೇರಿ ಲಾಸ್ಯವಾಡಿದಂತೆ
ಮಳೆ ಹನಿ ಹನಿಯು ಮಣ್ಣನಾವರಿಸಿ
ಘಮ್ಮೆನ್ನುವ ಮಣ್ಣ ಘಮವು ನಾಸಿಕವನಾವರಿಸಿ
ದಾಸವಾಳದ ಕಪೋಲವ ಮೆಲ್ಲನೆ ತಾಕಿದಂತೆ
ಕಲ್ಲಮೇಲೆ ಮಳೆ ಚುಕ್ಕಿಯ ಸಿಂಚನ
ಜಳಕ ಮಾಡಿಸಿದ ಮಳೆ ಕಲ್ಲನು ಅರಳಿಸಿದಂತೆ
ಮಲ್ಲೆ ಹೂವು ತೊಯ್ದು ಮಳೆಯಲಿ ನಕ್ಕಂತೆ
ಪುಟ್ಟ ಹಕ್ಕಿಯು ಮಳೆಯಲೆ ಆಹಾರವನರಿಸಿ
ಪಟಪಟನೆ ಹಾರುತಲಿ ಹೊರಟಿದೆ ಅವಸರದಿ
ಎಲೆಯ ತೋಯಿಸಿದ ಮಳೆ ಧರೆಯನು ತೊಳೆದಂತೆ
ದನ ಎಮ್ಮೆ ಕರುಗಳು ದಾರಿಯಲಿ ನಿಂತು
ಮಳೆಯ ಆಸ್ವಾದಿಸುತಿವೆ ಸಮಯದ ಪರಿವಿಲ್ಲದೆ
ಬಾಯಿ ಇರದಿದ್ದರೇನು ಅವಕು ಭಾವವಿದೆಯಂತೆ
ಕೆಂಪು ಮಣ್ಣಿನ ಗೂಡಿನೊಳಗೆ ಕಪ್ಪು ಕಟ್ಟಿರುವೆಗಳು
ಸರಸರನೆ ಕಾಯಕವ ಚುರುಕಾಗಿ ಮಾಡುತಲಿವೆ
ಮಳೆಗಾಲದ ದಿನಸಿ ದಾಸ್ತಾನಿನ ಚಿಂತೆ ಅವಕು ಇದೆಯಂತೆ
ಜೀರುಂಡೆಯ ಝೇಂಕಾರ, ಮಾವಿನ ಹಕ್ಕಿಯ ಓಂಕಾರ
ಓಡುಳದ ಓಡಾಟ , ಗೊಬ್ಬರದುಳದ ಸಗಣಿಯಾಟ
ನಿಸರ್ಗಸ ಕೂಸುಗಳಿಗೆ ಬಿಸಲಾದರೇನಂತೆ ಮಳೆಯಾದರೇನಂತೆ...??
ಭಾಸವಾಗಿದೆ ಎನಗೆ
ಮಳೆಯ ಮೋಹಕೆ ಸಿಲುಕಿದ
ಈ ವಸುಂಧರೆ ಹಸಿರಾಗಿ ಸುಭಗೆಯಾದಂತೆ
ಭಾಸವಾಗಿದೆ ಎನಗೆ...!!!
