ಮಳೆಯೆಂದರೇನು?
ಮಳೆಯೆಂದರೇನು?
ಮಳೆಯೆಂದರೇನು?
ಬರಿ ಬಾನಿಂದ ಸುರಿವ ನೀರಲ್ಲ
ಭುವಿಗೊಳಗೆ ಮಾನವರು ಮಾಡಿದ
ಪಾಪವು ಆವಿಯಾಗಿ ಮೋಡವ
ಸೇರಿ ಕಪ್ಪಾಗಿ ಆರ್ಭಟಿಸುತ ಧುಮುಕುತಲಿ
ಮತ್ತೆ ಮನುಜನ ಕಾಲಡಿ ಬಂದು ಕೂರುವ
ಕರ್ಮಗಳ ಮಹಾ ಸಮುದ್ರವೇ ಮಳೆ
ಮಳೆಯೆಂದರೇನು?
ಶಿವನ ಜಡೆಯಿಂದ ಇಳಿದು ಬರುವ ಗಂಗೆಯಲ್ಲ
ಕಾಣದ ಕಾದಂಬಿನಿಯರ ಸಾಲುಗಳೊಳಗೆ
ಅವಿತು ಕುಳಿತಿರುವ ಅದೆಷ್ಟೋ ಮಹಿಳೆಯರ ಅಳು
ಸಂಸಾರ ಸಾಗರದಿ ನೊಂದು ಬೆಂದು ಬಸವಳಿದು
ಕಾದು ಕೊರಗಿ ಕಂಗೆಟ್ಟ ಮಾನಿನಿಯರ ಅಳಲು
ದೂರ್ತರಿಂದ , ಕಲಿಯುಗದ ಸುಯೋಧನನಂತವರಿಂದ
ಪಾಂಚಾಲಿಯ
ಂತೆ ನೊಂದು ಅತ್ಯಚಾರಕ್ಕೊಳಗಾಗಿ
ಅಪಮಾನಕ್ಕೊಳಗಾಗಿ ಅಸಹನೆಯಿಂದ ಅವಿತು ಕುಳಿತ
ಅದೆಷ್ಟೋ ಅಬಲೆಯರ ವ್ಯಥೆಯ ಮಹಾ ಕಡಲೇ ಮಳೆ
ಮಳೆಯೆಂದರೇನು?
ಹವಮಾನದ ಅದೆ ಹಳೆ ಲಕ್ಷಣವಲ್ಲ
ಪ್ರಕೃತಿಯ ಮೇಲೆ ಮನುಜನ ದೌರ್ಜನ್ಯಕೆ
ಪ್ರತಿಕ್ರಿಯಿಸಿದ ವರುಣನ ರೌದ್ರಾವತಾರದ ನರ್ತನ
ಮರಗಿಡಗಳ ಕಡಿದು ಕಾಂಕ್ರಿಟ್ ಕಾಡನು ನಿರ್ಮಿಸಿ
ಪ್ರಾಣಿ ಪಕ್ಷಿಗಳ ಹೆದರಿಸಿ ಓಡಿಸಿ ವಸತಿ ಹೀನರನ್ನಾಗಿ ಮಾಡಿ
ಅವನತಿಯತ್ತ ಸಾಗುತ್ತಿರುವ ಹೀನ ಮಾನವನ ಕುಕೃತ್ಯಕ್ಕೆ
ಪಾಠವ ಕಲಿಸಲು ಬರುತ್ತಿರುವ ಮಹಾ ಕಾಲನೆ ಈ ಮಳೆ