ಬದುಕು
ಬದುಕು
ಯಾರದೋ ಹರಕೆ
ಮತ್ತಾರದೋ ಬಯಕೆ
ಕೆಲವರಿಗೆ ವೇದನೆ
ಸುಖದಲ್ಲಿದ್ದವರ ಭೋಧನೆ
ಇದೇನಾ ಬದುಕೆಂದರೆ
ಉಳ್ಳವರದು ಅಪರಿಮಿತ ಭಕುತಿ
ದೇವರಿಗೆ ಕ್ಷೀರಾಭಿಷೇಕ ಮಾಡಿ
ಹಸಿದ ಬಡವನಿಗೆ ಗುಡಿಯ ಹಂಗಿಲ್ಲ
ಹೊತ್ತಿನ ಕೂಳಿಗಷ್ಟೇ ಅಲೆದಾಟ
ಇದೇನಾ ಸೃಷ್ಟಿಯೆಂದರೆ
ಯಾವ ಜನುಮದ ಫಲವೋ
ಈ ಹುಟ್ಟಿಗೆ ಭಾಧಿಸಿಹುದಂತೆ
ಯಾರದೋ ದರ್ಪಕ್ಕೆ ಸಿಲುಕಿ
ಮುಗುದ ಜೀವಿಗಳಿಗೆ ನೋವೇ
ಇದೇನಾ ಜನ್ಮಾಂತರದ ಫಲವೆಂದರೆ
ಪುಟ್ಟ ಕಂದನಿಗೆ ಹುಟ್ಟಿನಿಂದಲೇ
ಧರ್ಮ ಜಾತಿಯ ಹಣೆಪಟ್ಟಿ
ಅಕ್ಷರ ಕಲಿಯುವ ಮೊದಲೇ
ದ್ವೇಶದ ಬೀಜ ಬಿತ್ತಿದರೆ
ಅದೇನಾ ಸಂಸ್ಕಾರವೆಂದರೆ
ಸರ್ವರಿಗೂ ಸಮಾನ ಹಕ್ಕು
ಶಿಕ್ಷಣದಲ್ಲಿ ಇರಬಾರದು ತಾರತಮ್ಯ
ಇದೆಲ್ಲಾ ಪುಸ್ತಕದ ಮುದ್ರಣವೇ
ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ
ಇದೇನಾ ಸಮಾನತೆಯೆಂದರೆ
