ಸೀರೆ
ಸೀರೆ
ಗುಲಾಬಿ ಹೂವು ಕೈಯಲ್ಲಿ ಹಿಡಿದು
ನಸುಗೆಂಪು ಬಣ್ಣದ *ಸೀರೆ* ಯನಿರಿಸಿ
ಪ್ರೇಮ ನಿವೇದನೆ ಮಾಡಿದನವನು
ಮನಸಾಗದೇ ಹೋಯಿತು ತಿರಸ್ಕರಿಸಲು
ತಿಳಿಮುಗಿಲ ಆಗಸವೂ ಮೌನಿಯಾಗಿ
ಧರಣಿಗೆ ತನ್ನೊಲವ ಪ್ರಸ್ತಾಪಿಸಿದಂತೆ
ಇಳಿಸಂಜೆಯ ಹೊತ್ತಿಗೆ ಭೇಟಿಯಾಗಿ
ತೆರೆದನು ನನ್ನಿನಿಯ ಪ್ರೀತಿಯ ಖಾತೆ
ಅವನುಡುಗೊರೆಯ *ಸೀರೆಯುಟ್ಟು*
ಗುರುಹಿರಿಯರ ಸಮ್ಮುಖದಲ್ಲಿ ನೀಡಿದೆ ಒಪ್ಪಿಗೆ
ಸಪ್ತಪದಿಯಲಿ ಜೊತೆಗೆ ಹೆಜ್ಜೆಯನಿಟ್ಟು
ಜೀವಗಳನೊಂದಾಗಿಸಿತು ಮದುವೆಯೆಂಬ ಬೆಸುಗೆ
