ಕುಳಿರ್ಗಾಳಿ ಕಚಗುಳಿ ಇಟ್ಟಿತ್ತು.
ಕುಳಿರ್ಗಾಳಿ ಕಚಗುಳಿ ಇಟ್ಟಿತ್ತು.
ನಾನೊಮ್ಮೆ ಚಾರಣಕ್ಕೆ ಹೊರಟಿದ್ದೆ,
ತಂಗಾಳಿ ಬೀಸುತ್ತಿತ್ತು ಹಿತವಾಗಿ.
ಸುತ್ತಲೂ ಹಸಿರು ಹೊದ್ದ ಕಾಡು,
ಎಲ್ಲೆಲ್ಲೂ ಕೇಳಿತು ಪಕ್ಷಿಗಳ ಹಾಡು.
ಗಗನ ಮುಟ್ಟುವ ವೃಕ್ಷ, ಇಳಿಬಿದ್ದ ಬಳ್ಳಿಗಳ ಸಾಲು.
ಸಿಕ್ಕಿತು ಹರಿಯುವ ನೀರು, ಧುಮ್ಮಿಕ್ಕುವ ಜಲಪಾತ.
ಇದೆಲ್ಲದರ ನಡುವೆ ತುಸು ಬೀಸಿತು ತಂಗಾಳಿ,
ಹಿತವಾಯಿತು ಮನಕೆ ಹೊಸ ಮುದವ ನೀಡಿತು.
ವೃಕ್ಷಗಳಿಂದ ಇಳಿಬಿದ್ದ ತರುಲತೆಗಳು ತೂಗಾಡಿತು,
ಕಾಡು ಮಲ್ಲಿಗೆಯ ಗಂಧ ಎಲ್ಲೆಲ್ಲು ಪಸರಿಸಿತು.
ಸುಳಿಗಾಳಿ ತೀಡಿ ಹಿತವಾಗಿ ಮೈ ನಡುಗಿತು.
ರೋಮಾಂಚನದಿ ಮೈ ಜುಮ್ ಎಂದಿತು.
ಮಾಡುತ್ತ ಚಾರಣ, ನೋಡುತ್ತ ಕಾನನ,
ಅನುಭವವಾಯಿತು ರುದ್ರ ರಮಣೀಯ,
ಏರುತ್ತಿದ್ದಂತೆ ಪರ್ವತ ತೆರೆಯಿತು ಎಲ್ಲೆಡೆ,
ಹೊಸ ಹೊಸ ದೃಶ್ಯ ಸಾಲು ಅನವರತ.
ಜುಂಡು ಹುಲ್ಲಿನ ರಾಶಿ ಅಲ್ಲಲ್ಲಿ,
ಕಾಲಿಗೆ ಸಿಲುಕಿ ತೊಡರಿತ್ತು ನವಿರಾಗಿ,
ಸುತ್ತಮುತ್ತಲಿನ ದೃಶ್ಯ ಆಗಿತ್ತು ಮನೋಹರ.
ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿದೆನು ತುತ್ತ ತುದಿಯ.
ನಡೆದಷ್ಟು ದೂರ ಇತ್ತು ವಿಶಾಲ ಪ್ರದೇಶ,
ಅಲ್ಲಲ್ಲಿ ಹೊಂದಿತ್ತು ಕಣಿವೆ ಪ್ರಪಾತ.
ಸುತ್ತಲ ವಾತಾವರಣ ಹಿತವ ತಂದಿತ್ತು.
ಮಲೆಯ ಚುಂಬಿಸಿದ ಮೋಡವೀಗಾ
ಬಾನ ಚಂಬಿಸ ಹೊರಟಿತ್ತು.
ಎಲ್ಲೆಲ್ಲೂ ಮಂಜು ಮನೆ ಮಾಡಿತ್ತು.
ಕುಳಿರ್ಗಾಳಿ ಕಚಗುಳಿ ಇಟ್ಟಿತ್ತು.
ಹೀಗೊಂದು ಚಾರಣ ಮರೆಯಲಾಗದ ಅನುಭವ,
ಇದು ಬಾಲ್ಯದಲ್ಲಿ ಕಳೆದ ಸವಿ ನೆನಪಿನ ಹೂರಣ.
