ಮುಂಜಾನೆ ಮಂಜು.
ಮುಂಜಾನೆ ಮಂಜು.
ಮುಂಜಾನೆ ಮಂಜು ಮುಸುಕಿ ಎಲ್ಲೆಲ್ಲೂ ತಂಪು ತಂಪು,
ಕೋಗಿಲೆ ಕಾಜಾಣಗಳು ಉಲಿಯುತಿದೆ ಕೇಳಲು ಇಂಪು,
ಮಂಜು ಮುಸುಕಿದ ಬಾನು ಚಿಗುರಿನ ತೋರಣ ತಳಿರು
ಹೊಳೆದಿದೆ ಕೆಂಪಾದ ನೇಸರನ ಹೊನ್ನ ಕಿರಣದ ಹರಳು.
ಮಲ್ಲೆಮೊಗ್ಗಿನ ಮೇಲೆ ಬಿದ್ದ ಹಿಮಬಿಂದುವಿನ ಹೊಳಪು,
ಆಗಸದಿ ಸಾಲಾಗಿ ಹಾರುತಿಹ ಖಗಗಳ ಬಣ್ಣ ಬಿಳುಪು,
ಉಪ್ಪರಿಗೆ ಮನೆಯ ಕಿಟಕಿಯಲಿ ತನ್ನ ಮುಖವಿಟ್ಟು,
ಕುಳಿತಿಹ ಅವಳ ಕದಪುಗಳಿಗೆ ಹೊಂಗಿರಣದ ರಂಗಿಟ್ಟು.
ಮೂಡಣದ ಬಾಗಿಲಲಿ ಎತ್ತರದ ಹೂಬಳ್ಳಿಯ ಮೇಲೆ,
ಹೊಸೆದಿಹ ಬಲೆಯಲ್ಲಿ ಹೊಳೆದಿಹುದು ಹಿಮಮಣಿ,
ಸ್ಪಟಿಕದಂತೆ ಮಿನುಗಿದೆ ಬೀಸುವ ತಂಗಾಳಿಗೆ ಚಿಗುರೆಲೆ.
ಪ್ರಜ್ವಲಿಸಿ ಕಣ್ಸೆಳೆದಿದೆ ನೋಡುಗರ ಹೊಳೆವ ದಿನಮಣಿ.
ಹಸಿರ ಕಾನನದ ನಡುವೆ ಸಾಗಿತ್ತು ದಿನಕರನ ಪಯಣ,
ಎಲ್ಲೆಲೂ ಮುಸುಕಿದ ಹಿಮದ ಮೇಲೆ ಬಿತ್ತು ರವಿಕಿರಣ,
ವಜ್ರದಂತೆ ಹೊಳೆವ ಹೊನ್ನಿನಂತಹಹನಿ ಕರಗಿಳಿಯಿತು,
ನೋಡುತ್ತಿದ್ದ ಹೊಳೆವ ನಯನಗಳು ಸಾರ್ಥಕವಾಯಿತು.