ಮುಂಗಾರಿನಹಾಡು
ಮುಂಗಾರಿನಹಾಡು
ಮಲೆನಾಡಿಗೆ ಮುಂಗಾರು ಅಡಿ ಇಟ್ಟಿತು,
ಮಲೆಗಳಲಿ ಮೋಡ ಕಂಗೊಳಿಸಿತು.
ಭೂಮಾತೆ ತಂಪಾಗಿ ಮಣ್ಣೆಲ್ಲ ಹದವಾಗಿ,
ಭತ್ತ ಬೆಳೆಯಲು ಗದ್ದೆ ತಯಾರಾದವು.
ಮಣ್ಣನ್ನು ಹದ ಮಾಡಲು ಎತ್ತು ಕೋಣಳಿಲ್ಲ,
ಟ್ರ್ಯಾಕ್ಟರ್ ಟಿಲ್ಲರ್ ಬಂದವು ಜಮೀನಿಗೆಲ್ಲ.
ಸಿರಿವಂತರ ಮನೆಯ ನಾಟಿ ಕಾರ್ಯವು,
ಸಾಗುವುದು ಕೂಡ ಈಗ ಯಂತ್ರದಲ್ಲೇ.
ಆದರೂ ಈಗಲೂ ಕೆಲವೆಡೆ ಕಾಣುವುದು,
ರೈತರು ನಾಟಿ ಮಾಡುವ ದೃಶ್ಯ ಅಲ್ಲಲ್ಲಿ.
ಮಳೆ ಬಂದರೆ ಬೆಳೆ, ಬೆಳೆಯಿಂದಲೆ ಬದುಕು,
ಆಗಲೇ ಹಸಿರು ಹೊಳೆಯುವುದು ಇಲ್ಲಿ.
ತುಂತುರು ಮಳೆಯಲ್ಲಿ ಗದ್ದೆಗೆ ಇಳಿದು,
ಸೀರೆ ಸೊಂಟಕ್ಕೆ ಸಿಗಿಸಿ, ಕೆಸರಲ್ಲಿ ಕೈ ಇರಿಸಿ
ಪುಟ್ಟ ಸಸಿಗಳ ಗದ್ದೆಯ ತುಂಬಾ,
ನಾಟಿಯ ಮಾಡುತಿಹಳಿಲ್ಲಿ.
ಅವನೊಮ್ಮೆ ಹಾರೆಯನ್ನು ಹಿಡಿದು,
ಅವಳ ಕಡೆ ಒಮ್ಮೆ ಒಲವ ನೋಟವ ಹರಿಸಿ,
ಕಾಲುವೆಯ ನೀರನ್ನು, ಗದ್ದೆಯ ಅಂಚನ್ನು,
ಸರಿ ಮಾಡಿ ಬರುವೆ ಎಂದು ಹೊರಟ ಕೈ ಬೀಸಿ
ಇವರಿಬ್ಬರ ಜೋಡಿ ಸಾರ್ಥಕವು ನೋಡಿ
ಅರಿತು ಬೆರೆತು ಪ್ರೇಮದಲಿ ಕೂಡಿ,
ಇಬ್ಬರೇ ಸೇರಿ ಮಾಡಿಹರೆಲ್ಲಾ ಕೆಲಸವ ಕೇಳಿ,
ಬಿಡದೇ ಜೊತೆಗೆ ಬಂದಿವೆ ಸಾಕಿದ ಕುರಿ ಕೋಳಿ.
ಮುಂಗಾರಿನ ಹಾಡು ಇದೆ ನೀವೇ ನೋಡಿ.