ಕುಂಭದ್ರೋಣ ಮಳೆ
ಕುಂಭದ್ರೋಣ ಮಳೆ
ಸುರಿಯುತಿದೆ ಶ್ರಾವಣದ ಮಳೆ
ಯಾರ ಅಂಕೆಯಿಲ್ಲದೆ ಶಂಕೆಯಿಲ್ಲದೆ
ಬಿದ್ದಿವೆ ಬೃಹತ್ ಗಾತ್ರದ ಮರಗಳು
ದಾರಿಗೆ ಅಡ್ಡಲಾಗಿ ಬೋರಲಾಗಿ
ವಿದ್ಯುತ್ ತಂತಿಗಳು ತುಂಡಾಗಿ
ಕಂಬಗಳು ಹಿಡಿತ ತಪ್ಪಿ ನೆಲ ಕಚ್ಚಿವೆ
ಗಾಳಿಯೊಡನೆ ಬರುತಿಹ ಈ ರಕ್ಕಸ ಮಳೆ
ಹಾವಳಿ ನಡೆಸುತಿದೆ ಕಷ್ಟವ ಕೊಡುತಿದೆ
ಕೂಲಿ ನಾಲಿಯ ನಂಬಿ ಬದುಕುತಿಹ ಜನರ
ಕರುಳ ಹಿಂಡುತಿದೆ ಅನ್ನ ಕಸಿಯುತಿದೆ
ಮಲಿನ ಮಾಡುತಿದೆ ಹರಿವ ಹೊಳೆಯ
ಹದಗೆಡಿಸಿ ಕೆಂಪಾಗಿಸಿ ಕುಡಿವ ತಿಳಿ ನೀರ
ಹಂಬಲಿಸಿ ಬೆಂಬಲಿಸಿ ಕರೆಸಿಕೊಂಡ ಮಳೆ
ಹಾಳು ಗೆಡವುತಿದೆ ಇಡೀ ಊರನೆಲ್ಲ
ಕತ್ತಲೆಯ ಗೂಡಾಗಿವೆ ಪ್ರತಿ ಹಳ್ಳಿಯ ಮನೆಗಳು
ಪೇಟೆಯ ಮನೆಗಳೊಳಗೆ ತುಂಬಿದೆ ಮೋರಿ ನೀರು
ದಾಟಲಾರದ ಸಂಕಗಳು ಸೇತುವೆಗಳೀಗ ನಿರುಪಯೋಗಿ
ತುಂಬಿ ಹರಿಯುತಿವೆ ಹಳ್ಳಕೊಳ್ಳಗಳು ಎಲೆಅಡಿಕೆ ತಿಂದಂತೆ ಕೆಂಪಾಗಿ
ಅಂಬಿಗನಿಗಿಲ್ಲ ಈಗ ದೋಣಿ ನಡೆಸುವ ಕೆಲಸ
ಸುರಿಯುತಿಹ ಮಳೆಯ ನೀರೆ ಸುಳಿಯಾಗಿ ತೇಲಿಸುವುದು
ಕುಂಬ ದ್ರೋಣ ಮಳೆಯು ಎಡಬಿಡದೆ ಸುರಿಯುತಿದೆ
ಮಳೆಗಾಲದ ಮಹಾ ಮಳೆಯು ರಭಸದಿ ಸುರಿಯುತಿದೆ