ಶ್ರಾವಣದ ಸೋನೆ ಮಳೆ
ಶ್ರಾವಣದ ಸೋನೆ ಮಳೆ
ಶ್ರಾವಣದ ಜಡಿ ಮಳೆಯಲ್ಲಿ
ಇನಿಯನಿಗಾಗಿ ಕಾದು ಕುಳಿತಳವಳು
ಶರಧಿಯಂತೆ ತಂಪಿನ ಗುಣದವಳು
ಇಳೆಯಂತೆ ಹೊಳೆಯುತ್ತಿದ್ದಳು ಹಸಿರು ಸೀರೆಯಲ್ಲಿ
.
ಮಳೆಯೊಳಗೆ ಕಾಣದ ದಾರಿಯೊಳಗೆ
ಅಲ್ಲಲ್ಲಿ ವಾಹನ ಸವಾರರ ಓಡಾಟ
ಗಿಜಿಗುಡುವ ಟಾರು ರಸ್ತೆಯಲಿವೆ ಗುಂಡಿಗಳು
ಗುಲ್ ಮೊಹರಿನ ಕೆಂಪು ಹೂಗಳು ಬಿದ್ದಿವೆ ಹಾದಿಯೊಳಗೆ
ಮಳೆಯೊಳಗು ವಿಧವಿಧ ಹೂವ ಮಾರುತಲಿ
ಕುಳಿತ ಅಜ್ಜಿಯ ಮೊಗದಲಿ ಮಳೆಯ ಕಳೆ
ಮಲಿನವಿಲ್ಲದ ನಿಷ್ಕಲ್ಮಶವಾದ ಮಳೆ ಹನಿಯಂತೆ
ಕಾಕಡದ ಮಾಲೆ ಮಳೆಯ ಹನಿ ಬಿದ್ದು ಮತ್ತೆ ಅರಳಿತು
ಮಳೆಯ ನಂಬಬಹುದೇನೋ ಆದರೆ ಮನುಷ್ಯನನ್ನ?
ಮೇ ಪ್ಲವರ್ ಮರದಡಿ ಕುಳಿತವಳ ಎದೆ ಡವಗುಟ್ಟುತಿತ್ತು
ಮಳೆಯ ರಭಸ ಹೆಚ್ಚಾಗಿ ಸುತ್ತಲು ಶೂನ್ಯ ಆವರಿಸಿತು
ಮೊಗದಲಿ ಮೌನವ ಹೊದ್ದು ಕುಳಿತವಳ ಹೆಸರು ಮಳೆಯೇ!
ವರುಷ ಧಾರೆ ಸುರಿವಾಗ ಕಾಣೆ ಆದವರೆಷ್ಟೋ!
ತೇಲುತ ಪ್ರವಾಹದಲ್ಲಿ ಸಿಲುಕಿದವರೆಷ್ಟೋ
ಹರುಷವಿಲ್ಲ ಕಾದು ಕುಳಿತವಳ ಮೊಗದಲ್ಲಿ
ಶ್ರಾವಣದ ಜಡಿಮಳೆ ಅವಳಿಗೇನನು ಕೊಡಲಿಲ್ಲ!!?