ಬಾಲ್ಯದ ಮಳೆಯಾಟ
ಬಾಲ್ಯದ ಮಳೆಯಾಟ
ಕಾಗದದ ದೋಣಿಯನ್ನು ಮಾಡಿ
ಕೆರೆಯೊಳಗೆ ಮಳೆ ಹೊಯ್ಯುವಾಗ
ತೇಲಿಬಿಡುವ ಆ ಆಟ ಚೆನ್ನಾಗಿತ್ತು
ಮಳೆಗಾಲದ ಜೂನಿನ ಸಮಯದಿ
ಧರೆಯ ಮೇಲಿನ ಹುಲ್ಲಿನ ನೀರನು
ಕಣ್ಣಿಗೆ ಬಿಟ್ಟುಕೊಂಡಾಡುವ ಆ ಆಟ ಚೆನ್ನಾಗಿತ್ತು
ಪಾಚಿಗಟ್ಟಿದ ನೆಲದ ಮೇಲೆ
ಬೇಕೆಂದೆ ಕಾಲಿಟ್ಟು ಜಾರಿ ಬೀಳುತಲಿ
ಮತ್ತದನೆ ಪುನಾರಾವರ್ತಿಸುವ ಆ ಆಟ ಚೆನ್ನಾಗಿತ್ತು
ಮಳೆಯೊಡನೆ ಬರುವ ಗಾಳಿಗೆ
ಛತ್ರಿಯು ಹಾರಿ ಮೇಲಾಗಿ ಕಡ್ಡಿ ಮುರಿದು
ಬೆಂಡಾದ ಛತ್ರಿಯ ಜೊತೆ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು
ಮಳೆಗಾಲದಿ ಮನೆಯೊಳಗೆ ಬೆಚ್ಚಗೆ ಕುಳಿತು
ಚೆನ್ನೆಮಣೆಯ , ಪಗಡೆ, ಕಣ್ಣಾಮುಚ್ಚಲೆ, ಜೂಟಾಟ
ಗೆಳತಿಯರ ಜೊತೆಯಲಿ ಆಡುತ್ತಿದ್ದ ಆ ಆಟ ಚೆನ್ನಾಗಿತ್ತು
ಶಾಲೆಯಿಂದ ಮನೆಗೆ ನಡೆದು ಬರುವಾಗ
ಕಾಲಿಗೆ ಮೈಗೆ ಕಚ್ಚಿದ ಇಂಬಳಗಳ ನೋಡಿ
ಒಂದೊಂದನೆ ಹುಡುಕಿ ತೆಗೆದು ಹಾಕುವ ಆ ಆಟ ಚೆನ್ನಾಗಿತ್ತು
ಮನಸ್ಸಿನ ಕೊಳೆ ತೊಳೆವ ಶಕ್ತಿ ಮಳೆಗೆ ಮಾತ್ರ ಇದೆ
ಹೌದು ..!! ಬಾಲ್ಯದ ಮಳೆಯಾಟವೇ ಚೆನ್ನಾಗಿತ್ತು
ಹೊರಗೆ ಸುರಿವ ಮಳೆಗೆ ಬಾಲ್ಯವೇಕೋ ನೆನಪಾಯಿತು.
