ಕಣ್ಣೀರ ಧಾರೆ
ಕಣ್ಣೀರ ಧಾರೆ


ಹನಿ ಹನಿಯಾಗಿ ಜಿನುಗಿ
ಕೆನ್ನೆ ಮೇಲಿನಿಂದ ಜಾರುತಿರುವ
ಕಣ್ಣೀರ ಕುರುಹೂ ಕಾಣಿಸದು
ಮುಗಿಲ ಹನಿಗಳ ಧಾರೆಯಲಿ ಒಂದಾಗಿ
ಭಾರವಾದ ಉಸಿರಿನ ಸದ್ದು
ಹೊರ ಬೀಳುತ್ತಿಲ್ಲ
ಹನಿಗಳ ಚಟಪಟ ಕಲರವದಲಿ ಬೆರೆತು
ತಣ್ಣನೆಯ ತಂಗಾಳಿ
ತಡೆದು ನಿಲ್ಲಿಸಿದೆ ದೇಹದ
ಬಿಸಿ ಇನ್ನೊಬ್ಬರಿಗೆ ತಿಳಿಯದಂತೆ!
ಕುಳಿತಲ್ಲೇ ಸ್ತಬ್ಧವಾಗಿರೋ
ಮನಸ್ಸಿಗೆ ಯಾವುದರ ಪರಿವಿಲ್ಲದೆ
ಹೊರ ಹಾಕುತ್ತಿದೆ ಕಂಬನಿ
ಯಾರಿಗೂ ತಿಳಿಯದು ಎಂಬ ಧೈರ್ಯದಿ
ನೋಡುತ್ತಿರುವ ಜನ
ಇವಳಿಗೇನು ಮರುಳೇ ಅಂದುಕೊಳ್ಳುತ್ತಿದ್ದಾರೆ
ಮಳೆಯಲಿ ಒದ್ದೆಯಾಗುತ್ತಿರುವ ಪರಿಗೆ
ಅವರಿಗೇನು ತಿಳಿದಿದೆ..?
ನನ್ನ ಪಾಲಿಗೆ ವರ್ಷಧಾರೆ
ನೆನೆದು ಸಂಭ್ರಮಿಸುವ ಸುಖವಲ್ಲವೆಂದು?!