ಗಜಲ್
ಗಜಲ್
ಇರುವುದಾದರೆ ಮೌನವಾಗಿದ್ದುಬಿಡು ಅಹಂನ ಕೋಟೆಯೊಳಗೆ ಸಿಲುಕಬೇಡ
ನೆಮ್ಮದಿ ಸಿಗುವುದೆಂದು ಅಲ್ಲೆಲ್ಲೋ ಮಸಣದ ಗೋರಿಯೊಳಗೆ ಇಣುಕಬೇಡ
ಇಲ್ಲಂತೂ ಇಂಚು ನೋವಿಗೂ ಈಗೀಗ ಸುಂಕ ಕೊಡಲೇಬೇಕು ಮರೆಯದಿರು
ಕಷ್ಟಗಳು ಕರಗುತ್ತವೆ ಕತ್ತಲು ಮುಗಿದು ಹಗಲು ಬರುವುದರೊಳಗೆ ಮರೆಯಬೇಡ
ಬಯಲ ಜಾತ್ರೆಯ ತುಂಬಾ ಸುಖದ ಇನಾಮಿಗಾಗಿ ಹುಡುಕಾಡುವವರೇ ಹೆಚ್ಚು
ಸತ್ತರೂ ಹೆಗಲು ನೀಡುವ ಜನರಿಲ್ಲ ಜಗದೊಳಗೆ ಸಾವಿನ ಸೆಲೆಯೊಳಗೆ ಹೋಗಬೇಡ
ಬಾಡಿದ ಮನಸ್ಸಿನಲ್ಲಿ ನಗುವಿನ ಹೂವೆಂದೂ ಅರಳುವುದಿಲ್ಲ ಗೆಳೆಯ
ಮೌನದಲ್ಲೂ ಕೆತ್ತಿದ ಮಾತುಗಳ ಹೆಸರಿದೆ ಸುಮ್ಮನೆ ಮನಸ್ಸಿನೊಳಗೆ ಕೊರಗಬೇಡ
ಇಳಿಸಂಜೆಯಲ್ಲಿ ಜಾರಿದ ಕನಸಿಗೇನು ಗೊತ್ತು ‘ಲಕ್ಷ್ಮೀಶ’ ಬದುಕಿನ ಮರ್ಮ
ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ
