ಸ್ವಗತ
ಸ್ವಗತ
ಪುಟ್ಟ ಹಕ್ಕಿ ಹಾರಿ ಬಂದು
ಮರವ ಏರಿತು
ತನ್ನ ಗೂಡಿಗಾಗಿ ಅದು
ಅರಸ ತೊಡಗಿತು
ಅತ್ತ ಇತ್ತ ಕತ್ತು ಸರಿಸಿ
ದೃಷ್ಟಿ ಹರಿಸಿತು
ತನ್ನ ಪುಟ್ಟ ಗೂಡಿಗಾಗಿ
ಇಣುಕಿ ನೋಡಿತು
ಹಸಿರಿಲ್ಲದ ಮರವ ನೋಡಿ
ಮೂಕ ವಾಯಿತು
"ಎಲ್ಲಿ ಹೋಯಿತೆನ್ನ ಗೂಡು ?
ಎಲ್ಲಿ ಹೋದರೆನ್ನ ಬಳಗ ?
ನಾನೀಗ ಎಲ್ಲಿ ಹೋಗಲಿ?"
ಮೂಕವಾಗಿ ರೋದಿಸಿತು
ದೂರದ ಸಪ್ಪಳ ಕೇಳಿ
ನಡುಗಿ ಹೋಯಿತು
"ಮರಕೆ ಕೊಡಲಿ ಪೆಟ್ಟುಗಳು
ನಮಗೆಲ್ಲಿಯ ಉಳಿವು?
ಕಾಳು ಕಡ್ಡಿ ಗಳಿಲ್ಲ ಇಲ್ಲಿ
ಈ ಸ್ವಚ್ಛ ನಗರಗಳಲಿ
ಬೀದಿ ಬಾವಿಗಳಿಲ್ಲ ಈಗ
ನೀರು ಬಾರದ ನಳಗಳು
ಒಣಗಿ ನಿಂತ ಕೆರೆಗಳು
ನೀರಿಗೇನು ಮಾಡಲಿ ?
ನಾನು ಹೇಗೆ ಜೀವಿಸಲಿ?
ಹಕ್ಕಿಗಳಿಗೂ ಜೀವವಿಹುದು
ಅವಕೂ ಬೇಕು ಕಾಳು ಕಡ್ಡಿ
ಜೀವಿಸುವ ಹಕ್ಕುಗಳು
ಎಂಬೀ ಸತ್ಯವನ್ನು
ಅರಿಯನೇಕೆ ಮನುಜನು ?
ಮೂಕ ಹಕ್ಕಿಯ ಮೂಕ ರಾಗವ
ತಿಳಿಯನೇಕೆ ದನುಜನು ?"
