ಮುಟ್ಟು-ಗುಟ್ಟು
ಮುಟ್ಟು-ಗುಟ್ಟು


ಮುಟ್ಟು-ಗುಟ್ಟು
ಮುಟ್ಟಾಗಿರುವಳೆಂದು
ಮೂಲೆಯಲ್ಲಿ ಕೂರಿಸುವಿರಿ
ಮುಟ್ಟಬೇಕೆಂದಾಗ
ಮಂಚದ ಮೇಲಿಂದಲ್ಲ.
ಅಶುದ್ಧಳೆಂದು ಮೌಢ್ಯದಿ
ತಟ್ಟೆ,ಲೋಟ,ಬಟ್ಟೆ ಕೊಟ್ಟು
ಹೊರಗಿರಿಸುವಿರಿ
ತರುವ ಸಂಬಳದಿಂದಲ್ಲ.
ಮಡಿಯ ಸಮಜಾಯಿಷಿ
ಪೂಜೆಗೆ, ಪ್ರವೇಶಕ್ಕೆ
ಹೆಣ್ಣು ದೇವಿಯು
ಮುಟ್ಟಿನಿಂದ ಹೊರತಲ್ಲ.
ಶುಭ ಸಮಾರಂಭಗಳಿಗೆ
ಆಹ್ವಾನಿಸದ ನೋವು,
ಹುಟ್ಟಿನ ಸಂಭ್ರಮಕ್ಕೆ
ಎಂಬುದ ಅರಿತಿಲ್ಲ.
ಹಿಗ್ಗಿದ ಗಂಡಿನ ದೌರ್ಜನ್ಯ
ತಗ್ಗಿದ ಹೆಣ್ಣಿನ ಸೌಜನ್ಯವ
ದುರ್ಬಲಗೊಳಿಸುವಿರಿ
ಹೆಣ್ತನದ ಶಕ್ತಿಯಿಂದಲ್ಲ.
ಮುಟ್ಟು ಕೆಟ್ಟದ್ದೆಂದು
ಹೇಳುವ ಮೂಢರು
ಹುಟ್ಟಿದ್ದು ಮುಟ್ಟಿನಿಂದಲೇ
ಕೆಟ್ಟ ಆಲೋಚನೆಗಳಿಂದಲ್ಲ.