ಕಸಿಯಾಗದ ಕನಸುಗಳು
ಕಸಿಯಾಗದ ಕನಸುಗಳು
ನಿನ್ನ ನನ್ನ ಬಂಧ ಇಲ್ಲಿತ್ತು ಅಂದು.
ಮುಂಜಾವಿನ ನದಿತಟದಲ್ಲಿ ,
ಕುಚೋಧ್ಯದ ಮಧ್ಯೆ ನಾವಾಡಿದ ನೀರಾಟದಲ್ಲಿ..
ತವರ ನೆನಪಾದಾಗಲೆಲ್ಲಾ,
ನಿನದೇ ತುಂಟತನದ ಕಚಗುಳಿಯಿಲ್ಲಿ,
ಸದಾ ಅಂಟಿಕೊಂಡೇ ಕಳೆದ ಬಾಲ್ಯ
ನಿಧಾನವಾಗಿ ದೂರವಾಗಿದೆಯಿಂದು.
ಗಜುಗಗಿಡದ ಮುಳ್ಳು ಚುಚ್ಚಿ, ಹಾಯ್ ಎಂದಾಗ,
ಓಡೋಡಿ ಬಂದು ಬೆರಳ ತೀಡಿ,
ನೋವ ಮರೆಸಿದ ಹೊತ್ತು ಎಷ್ಟು ಅಪ್ಯಾಯಮಾನವಿತ್ತು..
ಅಜ್ಜಿ ಮಜ್ಜಿಗೆ ಕಡೆದು ಬೆಣ್ಣೆ ಮಾಡುವಾಗ ಕದ್ದು
ನಿನ್ನ ಬಾಯಿಗೊರೆಸಿದಂದು ನೀ ,ನಕ್ಕು
ಚಪ್ಪರಿಸಿದ್ದಿನ್ನೂ ನೆನಪಲ್ಲಿದೆ ಎಂದು ಹೇಗೆ ಹೇಳಲಿ ನಿನಗೆ?
ಅವ್ವನೊಟ್ಟಿಗೆ ಮೊದಲ ದಿನ ಶಾಲೆಗೆಹೋದಾಗ,
ಹಿಂದಿನಿಂದ ಬಂದು,ಪೆಪ್ಪರಮೆಂಟಿನ ಚೂರನ್ನು
ಕೈಲಿಟ್ಟು ಓಡಿದ್ದು, ನಾ ಖುಷಿಯಲ್ಲೇ ನಕ್ಕಿದ್ದೆ..
ಈ ನೆನಪುಗಳ ಸಂತೆಯಲ್ಲಿ,
ಕಾಲವಾದವು ಖುಷಿಗಳು,
ಹುಸಿಯಾದವು ಆಸೆಗಳು
ಕಸಿಯಾಗದ ಕನಸುಗಳು
ಸಸಿಯಲ್ಲೇ ಬಾಡಿದವು,
ಚಿಗುರಿಸಲು ನೀನಿಲ್ಲದೆ.
