Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Abstract

2  

Vijaya Bharathi

Abstract

ಅಂತರಾಳ

ಅಂತರಾಳ

4 mins
87


ಇಂದಿಗೆ ಮಹತಿಯ ವಿವಾಹವಾಗಿ ಇಪ್ಪತ್ತು ವರ್ಷಗಳು. ಎಂದಿನಂತೆ ಗಂಡನ ಉಡುಗೊರೆ ಗಾಗಿ ಕಾದವಳಿಗೆ ಈ ವರ್ಷವೂ ನಿರಾಸೆಯೇ. ಮಹತಿಯ ಗಂಡ ಮಧು ಒಂದು ರೀತಿಯ ನಿರ್ಭಾವುಕ. ಕೆಟ್ಟವನಂತೂ ಅಲ್ಲವಾದರೂ ಯಾವುದರಲ್ಲೂ ಆಸಕ್ತಿ ಇಲ್ಲದ‌ ಮನುಷ್ಯ. ಆಡಿಟರ್ ವೃತ್ತಿ ಯಲ್ಲಿರುವ ಅವನು ಜವಾಬ್ದಾರಿಯಿಂದ ಸಂಸಾರ ನಡೆಸುತ್ತಿದ್ದಾನೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಾಗಾದರೆ ಅವನಲ್ಲಿರುವ ಕೊರತೆ ಏನು?


ಹೊರಗಿನವರ ದೃಷ್ಟಿಯಿಂದ ಒಳ್ಳೆಯ ಗಂಡ, ಒಳ್ಳೆಯ ಮಗ, ಒಳ್ಳೆಯ ತಂದೆ. ಆದರೂ ಮಹಿತಿಯ ಸ್ತ್ರೀ ಹೃದಯ ಬಯಸುವ ಪ್ರೀತಿಯ ಅಂತರಾಳವನ್ನು ಈ ಇಪ್ಪತ್ತು ವರ್ಷಗಳಲ್ಲಿ ಅವನಿಂದ ಅರಿಯಲಾಗದೇ ಇರುವುದು ಮಹತಿಗೆ ದೊಡ್ಡ ಕೊರತೆ. ಅವನ ದೃಷ್ಟಿ ಯಲ್ಲಿ ಅದೊಂದು ಕೊರತೆಯೇನಲ್ಲ.ಅವನ ಪ್ರಕಾರ ಅವನು ಪರ್ಫೆಕ್ಟ್ ಹಸ್ಬೆಂಡ್.


ಆದರೆ ಮಹಿತಿ ಮಾತ್ರ ಒಳಗೊಳಗೇ ಕೊರಗುತ್ತಾ ಹೋಗಿದ್ದಾಳೆ. ಅವಳು ಮಧುವಿನಿಂದ ಬಯಸುವ

ಮಧುರವಾದ ಅನುಭವ ಅವಳಿಗೆ ದೊರಕಿಯೇ ಇಲ್ಲ. ಒಂದು ಬಿಸಿಯಪ್ಪುಗೆ, ಪಿಸುಮಾತು,ಸಿಹಿ ಮುತ್ತು,ಹೆಂಡತಿ ಯ ಕಷ್ಟಸುಖ ಗಳ ಬಗ್ಗೆ ಕಾಳಜಿ,ಯಾವುದೂ ಅವನಿಂದ ನಿರೀಕ್ಷಿಸುವಂತಿರಲಿಲ್ಲ.ಲೆಕ್ಕಪತ್ರಗಳ ಲೆಕ್ಕಾಚಾರದಲ್ಲೇ ರಾತ್ರಿ ಹತ್ತು ಗಂಟೆಯವರೆಗೂ ಆಫೀಸ್ ನಲ್ಲೇ ಇರುತ್ತಿದ್ದ ಮಧು, ರಾತ್ರಿ ಮನೆಗೆ ಬರುವಾಗ ಹನ್ನೊಂದು ಆಗಿರುತ್ತಿತ್ತು.ನಂತರ ಊಟ ಆಮೇಲೆ ನಿದ್ದೆ.ಗಂಡನಿಗೆ ಬಡಿಸಿ ಅಡುಗೆ ಮನೆ ಶುಚಿಗೊಳಿಸಿ ರೂಮ್ ಗೆ ಬರುವ ವೇಳೆಗೆ ಮಧುವಿಗೆ ನಿದ್ರೆ ಹತ್ತಿರುತ್ತಿತ್ತು.

ಗಂಡ ಹೆಂಡತಿಯರ ಮಧ್ಯೆ ಎಲ್ಲವೂ ಯಾಂತ್ರಿಕವಾಗಿ ನಡೆಯುತ್ತಿರುವುದು ಮಹತಿಗೆ ತುಂಬಾ ಬೇಸರದ ಸಂಗತಿ.

ಗಂಡ ಹೆಂಡತಿಯರ ಏಕಾಂತ ಕ್ಕೆ ಇಂಬು ಕೊಡುವ ಪ್ರವಾಸವಾಗಲೀ,ಹುಟ್ಟಿದ ಹಬ್ಬ ವಾರ್ಷಿಕೋತ್ಸವ ಗಳಲ್ಲಿ ಗಂಡನಿಂದ ನಿರೀಕ್ಷಿಸುವ ಒಂದು ಸಣ್ಣ ಉಡುಗೊರೆ ಯಾಗಲೀ,ಎಲ್ಲವೂ ಅವಳ ಪಾಲಿಗೆ ಮರೀಚಿಕೆ. ಬ್ಯಾಂಕ್ ಉದ್ಯೋಗಿ ಗಿರುವ ಅವಳಿಗೆ ಹಣದ ಕೊರತೆಯಿಲ್ಲ,ಒಡವೆ ವಸ್ತ್ರ ಗಳಿಗೆ ಕೊರತೆ ಯಿಲ್ಲ, ಸ್ನೇಹಿತರಿಲ್ಲದಿಲ್ಲ.ಆದರೂ ಹೆಂಡತಿಯಾದವಳು ತನ್ನ ಗಂಡನಿಂದ ರಸ ನಿಮಿಷಗಳನ್ನು ಬಯಸುವುದು ತಪ್ಪೆ? 


ಮಧುವಿಗೆ ಇವೆಲ್ಲದರ ಬಗ್ಗೆ ಆಸಕ್ತಿಯೇ ಇಲ್ಲ. ಅವನಿಗೆ ಕೇವಲ ಸಂಪಾದನೆ ಮಾಡುವುದು, ಸಂಸಾರದ ಬೇಕು ಬೇಡಗಳನ್ನು ಈಡೇರಿಸುವುದು, ತಂದೆ ತಾಯಿಯನ್ನು ನೋಡಿಕೊಳ್ಳುವುದು,ಮಕ್ಕಳಿಗೆ ಯಾವುದಕ್ಕೂ ಕೊರತೆಯಿಲ್ಲದೆ ಅವರ ಬೇಡಿಕೆಗಳನ್ನು ಪೂರೈಸುವುದು, ಮಕ್ಕಳ ಹುಟ್ಟು ಹಬ್ಬವನ್ನು ತಪ್ಪದೇ ಆಚರಿಸುವುದು, ಅಪರೂಪಕ್ಕೆ ಮನೆಯವರೆಲ್ಲರೂ ಕೂಡಿ ಎಲ್ಲಿಯಾದರೂ ಪಿಕ್ನಿಕ್ ಅಥವಾ ದೇವಸ್ಥಾನಗಳಿಗೆ ಹೋಗುವುದು. ಇದು ಅವನ ಪರಿಪಾಠ. 

ಎಲ್ಲವನ್ನೂ ಕರ್ತವ್ಯ ವೆಂಬಂತೆ ನಿರ್ವಹಿಸುವ ಮಧುವಿಗೆ ತನ್ನ‌ ಹೆಂಡತಿಯ ಭಾವನೆಗಳೇ ಅರ್ಥವಾಗದಿರುವುದು ಒಂದು ದೊಡ್ಡ ವಿಪರ್ಯಾಸ. ಗಂಡ ಹೆಂಡತಿಯರ ನಡುವಿನ ಅನುರಾಗವೇ ಅವನಿಗೆ ಗೊತ್ತಿಲ್ಲದಂತೆ ಇರುತ್ತಿದ್ದ.ಕಡೆಗೆ ತನ್ನ ದೈಹಿಕ ನೋವುಗಳಿಗೂ ಸ್ಪಂದಿಸದೇ ತನ್ನಷ್ಟಕ್ಕೆ ತಾನು ಇರುತ್ತಿದ್ದುದು  ಮಹಿತಿಗೆ ತುಂಬಾ ನೋವಾಗುತ್ತಿತ್ತು. ಒಂದು ಬಾರಿ ಕೈಮೇಲೆ ಬಿಸಿನೀರು ಬಿದ್ದು ಬೊಬ್ಬೆ ಬಂದಾಗ ,ಮಕ್ಕಳು ಓಡಿ ಬಂದು ಬೇಗನೆ ಬರ್ನಾಲ್ ಹಚ್ಚಿದಾಗ ಅಲ್ಲೇ ಪೇಪರ್ ಓದುತ್ತಿದ್ದ ಗಂಡ ಏನಾಗಿದೆಯೆಂದು ಓಡಿ ಬಂದು ನೋಡದಿದ್ದುದು ಮಹತಿಗೆ ನೋವಾಯಿತು.ಇದೆಂತಹ ಮನುಷ್ಯ? ಹೆಂಡತಿ ಕೈ ಗಾಯವಾಗಿದ್ದರೂ ಮಕ್ಕಳ ಮೂಲಕ ಕೇಳಿ ತಿಳಿದುಕೊಂಡನಲ್ಲಾ? ಮಕ್ಕಳು ನೋಡಿ ಬರ್ನಾಲ್ ಹಚ್ಚಿದರಲ್ಲಾ ಸರಿಹೋಗುತ್ತದೆ ಎಂಬ ಉದಾಸೀನ ಭಾವವೆ?


ಮದುವೆಯಾದ ಹೊಸತರಲ್ಲಿ ಅವಳು ಇವನ ಈ ನಿರ್ಭಾವುಕ ತೆಗೆ ಅದೆಷ್ಟು ಬಾರಿ ರಾತ್ರಿ ವೇಳೆ ಒಬ್ಬಳೇ ದಿಂಬು ತೋಯಿಸಿದ್ದಾಳೋ?ಇವಳ ಈ ಒಳಗುದಿ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಒಮ್ಮೆಅವಳು ಮದುವೆಯಾದ ಆರು ತಿಂಗಳ ನಂತರ ತವರಿಗೆ ಹೋದಾಗ ಅವಳ ಅಮ್ಮ,ಮಗಳು ಮಂಕಾಗಿರುವ ಬಗ್ಗೆ ಕೇಳಿದಾಗ, ತನ್ನ ಮನದಾಳದ ಮಾತು ಗಳನ್ನು ಅಮ್ಮ ನ ಬಳಿ‌ಹೇಳಿಕೊಂಡಿದ್ದಳು. ಆಗ ಅವಳ ಅಮ್ಮ ''ಹೆಚ್ಚು ಕಡಿಮೆ‌ ಗಂಡಸರೆಲ್ಲ ಹೀಗೇ ಇರುತ್ತಾರೆ. ಅವರುಗಳಿಗೆ ಹೆಂಡತಿ ಯ ಭಾವನಾತ್ಮಕ ವಿಷಯಗಳು ಅರಿವಾಗುವುದೇ ಇಲ್ಲ. ಇಂತಹ ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡ. ಟಿ.ವಿ.ಸೀರಿಯಲ್ ಸಿನಿಮಾ ಗಳಲ್ಲಿ ತೋರಿಸುವಂತೆ ಯಾವ ಗಂಡಂದಿರೂ ಇರುವುದಿಲ್ಲ. ಕಲ್ಪನೆ ಬೇರೆ ಕನಸು ಬೇರೆ ವಾಸ್ತವ ಬೇರೆ. ಆದರೂ ಕೆಲವರಿಗೆ, ಭಾವುಕ ಮನಸ್ಸಿನ ಗಂಡಂದಿರು ಸಿಗುತ್ತಾರೆ‌ . ಇದನ್ನೇ ತುಂಬಾ ಯೋಚಿಸಬೇಡ. ವಾಸ್ತವದ ಜೊತೆ ರಾಜಿ ಮಾಡಿಕೊಳ್ಳದೆ ನಮಗೆ ವಿಧಿಯೇ ಇಲ್ಲ. ನಿನಗೆ ಇನ್ನೊಂದು ವಿಷಯ ಗೊತ್ತಾ?, ಹೆಂಗಸರೆಲ್ಲಾ ಶುಕ್ರ ನಿಂದ ಬಂದರೆ ,ಗಂಡಸರು ಬುಧ ನಿಂದ ಬರುತ್ತಾರಂತೆ. ಅಂದರೆ ಅವರು ಎಲ್ಲವನ್ನೂ ಕೇವಲ ಬುದ್ದಿ ಯಿಂದ ಯೋಚಿಸಿದರೆ, ಹೆಂಗಸರು ಹೃದಯದಿಂದ ಭಾವಿಸುತ್ತಾರೆ.ನಾನು ಇದನ್ನು ಎಲ್ಲೋ ಓದಿದ ನೆನಪು" ಅವಳನ್ನು ಸಮಾಧಾನ ಮಾಡಿದ್ದಳು. ಏಕೆಂದರೆ ಅವಳೂ ಸಹ ಅದನ್ನು ಅನುಭವಿಸಿದವಳೇ.

ನಂತರ ವರುಷಗಳು ಮುಂದೆ ಹೋದಂತೆ ಯಾಂತ್ರಿಕ ಬದುಕು ಸಾಗುತ್ತಿತ್ತು. ಮನೆಯ ಒಳಗಿನ ಹೊರಗಿನ ಕೆಲಸಗಳನ್ನು ತೂಗಿಸಿಕೊಂಡು, ಮಕ್ಕಳ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಅವರ ವಿದ್ಯಾಭ್ಯಾಸ ದ ಕಡೆ ಗಮನ ಹರಿಸುತ್ತಾ ಕಾಲ ಚಕ್ರ ಉರುಳಿ,ಇಂದಿಗೆ ಮದುವೆ ಯಾಗಿ ಇಪ್ಪತ್ತು ವರ್ಷಗಳೇ ಕಳೆದು ಹೋದವು.


ಮಧು ಇಂದಾದರೂ ತನಗಾಗಿ ಏನಾದರೂ ಉಡುಗೊರೆ ತರಬಹುದು ಎಂದು ಮತ್ತೆ ಆಸೆಗಳನ್ನು ಚಿಗುರಿಸಿಕೊಂಡು ಕುಳಿತಿದ್ದ ಮಹತಿಗೆ ಅಂದೂ ಯಥಾಪ್ರಕಾರವೇ ನಡೆಯಿತು. ಎಂದಿನಂತೆ ಆಫೀಸ್ ಮುಗಿಸಿ ಬಂದ ಮಧು ಊಟದಲ್ಲಿ ಕ್ಯಾರೆಟ್ ಹಲ್ವ, ಬಾದಾಮಿ ಬರ್ಫಿ ಇರುವುದನ್ನು ನೋಡಿ 'ಈ ದಿನದ ವಿಶೇಷ ವೇನು ?'ಎಂದು ಮಕ್ಕಳನ್ನು ಕೇಳಿದಾಗ, ಅವರಿಬ್ಬರೂ ಎದುರಿಗಿದ್ದ ಕ್ಯಾಲೆಂಡರ್ ತೋರಿಸಿ ವಿವಾಹ ವಾರ್ಷಿಕೋತ್ಸವ ದ ನೆನಪು ಮಾಡಿದಾಗ, "ಹೋ ನನಗೆ ಮರೆತೇ ಹೋಗಿತ್ತು. ಆಫೀಸ್ ನಲ್ಲೂ ಇಯರ್ ಎಂಡಿಂಗ್ ತುಂಬಾ ಕೆಲಸ .ವೆರಿ ಸಾರಿ" ಅಂತ ಮಹತಿಯ ಕಡೆ ನೋಡಿದಾಗ, "ಬಿಡಿ ಮಕ್ಕಳಾ,ನನಗೆ ಇದೇನೂ ಹೊಸದಲ್ಲ. ಆದರೆ ನಿಮಗೋಸ್ಕರ ಸ್ವೀಟ್ ಮಾಡಿದ್ದು " ಎಂದು ಹೇಳುತ್ತಾ ಕಣ್ಣಂಚಿನಿಂದ ಕೆಳಗೆ ಉರುಳುತ್ತಿದ್ದ ಕಣ್ಣೀರನ್ನು ತೊಡೆಯಲು ಬಾತ್ ರೂಂ ಕಡೆ ನಡೆದಳು.


ಊಟ ಮುಗಿಸಿ ರೂಂ ಗೆ ಬಂದಾಗ, ಯಾವುದೋ ಮ್ಯಾಗಜೈನ ತಿರುವಿ ಹಾಕುತ್ತಾ ಇದ್ದ ಮಧು,ಮಹತಿ

ಬಂದಾಗ,ಅವಳ ಮುಖವನ್ನೇ ಗಮನಿಸಿದ. ಅವಳು ಮುಖದಲ್ಲಿ ದುಗುಡ ತುಂಬಿರುವುದನ್ನು ಗಮನಿಸಿ,ಅವಳ ಹತ್ತಿರ ಹೋಗಿ "ಐ ಆಮ್ ಸಾರಿ, ನಮ್ಮ ಮದುವೆ ಯ ದಿನವನ್ನು ಬೆಳಿಗ್ಗೆಯೇ ನೀನು ನೆನಪು ಮಾಡಿದ್ದರೆ ನಾನು ಸಂಜೆ ಹೇಗಾದರೂ ಮಾಡಿ ಕೊಂಡು ಬೇಗ ಬರುತ್ತಿದ್ದೆ"ಎಂದಾಗ, ಮಹತಿ ಅದುವರೆಗೂ ತಡೆಹಿಡಿದು ಅದುಮಿಟ್ಟ ಕೊಂಡಿದ್ದ ತನ್ನ ಸಿಟ್ಟನ್ನು ಗಂಡನ ಮೇಲೆ ಹರಿಸಿದಳು.


"ಅಬ್ಬಾ ನೀವು ಎಂತಹ ಗಂಡ? ನಮ್ಮ ಮದುವೆಯ ದಿನಾಂಕವನ್ನು ನಾನು ನೆನಪಿಸಬೇಕಾ?

ವೆರಿ ನೈಸ್ ಆಫ್ ಯು, ಇಂದಿನ ಕಾಲದಲ್ಲಿ ಎಂದು ವೆಂಡಿಂಗ್ ಆನ್ವರಸರಿ ಬರುತ್ತದೋ ?ಎಂದು ಹೆಂಡತಿಯ ಹುಟ್ಟಿದ ಹಬ್ಬ ಬರುತ್ತದೋ?ಯಾವುದಕ್ಕೆ ಏನೇನು ಉಡುಗೊರೆ ತರಬೇಕು?,ಯಾವ ಹೋಟೆಲ್ ನಲ್ಲಿ ಊಟ ಕ್ಕೆ ಹೋಗಬೇಕು? ಎಂದೆಲ್ಲಾ ತಿಂಗಳು ಮುಂಚಿತವಾಗಿ ಪ್ಲಾನ್ ಮಾಡುವ ಗಂಡಂದಿರು ರುವಾಗ ,ನಿಮ್ಮಂತಹ ಕೆಲವು ಸ್ಪೆಸಿಮನ್ ಗಳಿಗೆ ಮದುವೆ ಯಾದ ದಿನಾಂಕ ಮರೆತು ಹೋಗುತ್ತೆ. ನಿಮ್ಮ ಬುದ್ಧಿ ನನಗೆ ಹೊಸತೇನಲ್ಲ ಬಿಡಿ. "

ಮುಖ ದುಮ್ಮಿಸಿಕೊಂಡು ಮಹಿತಿ ಹೇಳಿದಾಗ , ಅವಳನ್ನು ಸಮಾಧಾನ ಮಾಡುವ ಬದಲು,ಮಧು ಜೋರಾಗಿ

"ಅಬ್ಬಾ ಹೆಂಗಸರಿಗೆ ಇವೆ ಮುಖ್ಯ, ಎಲ್ಲವನ್ನೂ ಶೋ ಮಾಡಬೇಕು ಅಂತ ಆಸೆ. ನಿಮ್ಮ ಈ ಸಿಲ್ಲಿ ಆಸೆಗಳು ನೆರವೇರದಿದ್ದರೆ ಗಂಡಂದಿರನ್ನು ದೂರುವುದು. ಈ ಪ್ರಪಂಚದಲ್ಲಿ ಗಂಡ ಎಂಬ ಪ್ರಾಣಿ ಹೇಗಿದ್ದರೂ ಕಷ್ಟ.ನಾನು ಸಾರಿ ಕೇಳಿದರೂ ನಿನಗೇನೂ ಅನಿಸಿಲ್ವಲ್ಲ."ಶುರುಮಾಡಿದ. "ಹಾ ,ಈಗ ಪಾಯಿಂಟ್ ಗೆ ಬನ್ನಿ. ನಿಮ್ಮ ಮನಸ್ಸಿನ ಭಾವನೆಗಳಿಗೆ ಮಾತ್ರ ಬೆಲೆ,ನನ್ನ ಅಂತರಾಳದ ಭಾವನೆಗಳಿಗೆ ನಿಮ್ಮ ಕಡೆಯಿಂದ ಕಿಲುಬು ಕಾಸು ಬೆಲೆಯೂ ಇಲ್ಲ.ನಿಮಗೆ ಈಗ ನೋವಾದಂತೆ ನನಗೂ ನನ್ನ ಭಾವನೆಗಳಿಗೆ ಸ್ಪಂದನೆ ಸಿಕ್ಕದಿದ್ದಾಗ ತುಂಬಾ ನೋವಾಗುತ್ತದೆ. ಒಂದು ಹೆಣ್ಣಿನ ಮನದಾಳವನ್ನು ತಿಳಿಯುವ ಪ್ರಯತ್ನವನ್ನೇ ನೀವು ಮಾಡಲಿಲ್ಲ. ನಿಮ್ಮ ಭಾವನೆಗಳಿಗೆ ಮಾತ್ರ ನಾನು ಬೆಲೆ ಕೊಡಬೇಕು ಇದೆಂಥಾ ನ್ಯಾಯ?"ಮಹತಿಯೂ ಪ್ರತಿವಾದಕ್ಕೆ ನಿಂತಳು. ಹೆಂಡತಿ ತನ್ನನ್ನು ಕುರಿತು ಮಾತನಾಡಿದಾಗ ಮಧುವಿನ ಮ್ಯಾನ್ ಈಗೊ ತಲೆಯೆತ್ತಿತು. "ಪ್ಲೀಸ್ ಸ್ಟಾಪ್ ದಿಸ್ ನಾನ್ಸೆನ್ಸ್. ನನ್ನ ದೃಷ್ಟಿಯಲ್ಲಿ ನೀನು ಸೆಂಟಿಮೆಂಟಲ್ ಫೂಲ್.ಕೇವಲ ಕಲ್ಪನಾ ಲೋಕದಲ್ಲಿ ಮುಳುಗಿರುತ್ತೀಯ. ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊ"

ತನ್ನ ಅಂತರಾಳದ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಮಧುವಿನೊಡನೆ ಎಷ್ಟು ವಾದ ಮಾಡಿದರೂ ಉಪಯೋಗವಿಲ್ಲ ವೆಂದು ತಿಳಿದ ಮಧು ,ವಿತಂಡವಾದಕ್ಕೆ ಕೊನೆಗಾಣಿಸಿ, ತನ್ನ ಪಾಡಿಗೆ ತಾನು ಮುಸುಕೆಳದು ಮಲಗಿದಳು. ಅವಳ ನವಿರಾದ‌ ಭಾವನೆಗಳೆಲ್ಲಾ‌ ಕಣ್ಣೀರಾಗಿ ಹರಿದು ದಿಂಬನ್ನು ತೋಯಿಸಿತು.


ಎಲ್ಲರ ಲೆಕ್ಕಾಚಾರಗಳನ್ನು ಸರಿಪಡಿಸುವ ಆಡಿಟರ್ ಮಧು‌ ತನ್ನ ಹೆಂಡತಿ ಯ ಅಂತರಾಳವನ್ನು ಅಳೆಯಲಾರದೆ ಹೋದದ್ದು ವಿಪರ್ಯಾಸ ವಲ್ಲದೆ ಮತ್ತೇನು?ಹೆಣ್ಣಿನ ಅಂತರಾಳದ ಮಾತುಗಳು ಧ್ವನಿಯಿಲ್ಲದೇ ಒಳಗೇ ಉಳಿದು ಬಿಡುತ್ತದೆ ಯೇ?


Rate this content
Log in

Similar kannada story from Abstract