ವಿಧಿ ಆಟ ಕಲಿಸಿತು ಪಾಠಭಾಗ 3
ವಿಧಿ ಆಟ ಕಲಿಸಿತು ಪಾಠಭಾಗ 3
ನಮ್ಮ ಊರಲ್ಲಿ ಸಾಂಕ್ರಾಮಿಕ ರೋಗವೊಂದು ಹರಡುವ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು.. ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ಆ ರೋಗಕ್ಕೆ ಕೈ ಹಿಡಿದ ಗಂಡ ಬಲಿಯಾದರು..ನನಗಾಗ 15 ವರುಷ..ಮನೆಯ ಮುಂದೆ ಎಲ್ಲರು ಅಳುತ್ತಿದ್ದರು..ನನ್ನನು ನೋಡಿ ಕೋಪಿಸಿಕೊಳ್ಳುತ್ತಿದ್ದರು..ಊರಿನವರೆಲ್ಲಾ ದುರಾದೃಷ್ಟ ಕಾಲ್ಗುಣ ಎಂದು ಮಾತನಾಡಲಾರಂಭಿಸಿದರು...ಗಂಡನ ಮನೆಗೆ ಹೋಗಲು ತಯಾರಿ ನಡೆಸಿದ್ದೆವು. ಆದರೆ ಹೋಗಿದ್ದು ಬಾಳುವೆ ಮಾಡಲು ಅಲ್ಲ ಅಂತಿಮ ದರುಶನ ಮಾಡಿ ಕಾರ್ಯ ಮುಗಿಸಲು...ಹೆಣದ ಮುಂದೆ ಎಲ್ಲರು ಅಳುವಾಗ ತಡೆಯಲಾಗದ ಹಸಿವು ನನ್ನನ್ನು ಕಾಡುತ್ತಿತ್ತು...ಆದರೆ ಏನು ತಿನ್ನುವಂತೆ ಇರಲ್ಲಿಲ್ಲ..
ಗಂಡ ಸತ್ತು ಹನ್ನೊಂದನೇ ದಿನಕ್ಕೆ ಮನೆಯ ಬಾಗಿಲಿಗೆ ಬಂದ ಪುರೋಹಿತರು ವಿಧವಾ ವಿಧಿ ವಿಧಾನಗಳನ್ನು ಮಾಡಬೇಕೆಂದು ನದಿ ತೀರಕ್ಕೆ ಕರೆದೊಯ್ದರು..ನನಗೆ ಏನು ಮಾಡುತ್ತಾರೆ ಎಂಬ ಕಲ್ಪನೆಯು ಇರಲ್ಲಿಲ್ಲ..ಮೊದಲು ಕೈಯಲ್ಲಿದ್ದ ಬೆಳೆಗಳನ್ನು ಒಡೆಸಿದರು..ಏನು ಹೇಳುವಂತ ಅಥವಾ ಕೇಳುವಂತಿರಲ್ಲಿಲ್ಲ..ನನ್ನ ನೀಳವಾದ ಜಡೆಯನ್ನು ಕತ್ತರಿಸಿ ತಲೆಯನ್ನು ನುಣ್ಣಗೆ ಬೋಳಿಸಿದರು..ಕೆಂಪು ಸೀರೆಯನ್ನು ಅಡಿಯಿಂದ ಮುಡಿವರೆಗೆ ಉಡಿಸಿದರು..ಕಣ್ಣೀರು ಬಿಟ್ಟು ನನ್ನ ಪಾಲಿಗೆ ಏನು ಉಳಿದಿರಲ್ಲಿಲ್ಲ.. ರಾತ್ರಿ ಹೊತ್ತು ಇನ್ನು ಮುಂದೆ ಊಟ ಮಾಡಬಾರದು ಬರಿ ಫಲಾಹಾರ ಸೇವಿಸಬೇಕು..ಮುಂಜಾನೆ ಎಲ್ಲಾ ಏಳುವಷ್ಟರಲ್ಲಿ ಸ್ನಾನ ಮುಗಿಸಿರಬೇಕು..ದೇವರ ಧ್ಯಾನ ಬಿಟ್ಟು ಬೇರೆ ಏನು ಮಾತನಾಡುವಂತಿಲ್ಲ..ಒಂದು ಹಿಡಿ ಅಕ್ಕಿಯನ್ನು ಮಾತ್ರ ಉಟ ಮಾಡಬೇಕು..ಗಂಡಸರು ಇದಲ್ಲಿ ನಿಲ್ಲಬಾರದು ಮಾತಾಡಬಾರದು.ಮದುವೆ ಉಪನಯನ ಇತ್ಯಾದಿ ಸಮಾರಂಭದಲ್ಲಿ ಮಂಟಪದ ಬಳಿ ಹೋಗಬಾರದು..ಹೀಗೆ ಅನೇಕ ನಿಯಮಗಳನ್ನು ಪಾಲಿಸಬೇಕೆಂದು ಹೇಳಿ ಅಲ್ಲಿಂದ ಗಂಡನ ಮನೆಗೆ ವಾಪಾಸು ಕರೆತಂದರು..
ಮಗನೇ ಹೋದ ಮೇಲೆ ಇವಳನ್ನು ಇಟ್ಟುಕೊಂಡು ಏನು ಮಾಡೋದು ಎಂಬ ಪ್ರಶ್ನೆ ಎದ್ದಾಗ ನನ್ನ ಅಪ್ಪಯ್ಯ "ನಾನೆ ನೋಡುಕೊಳ್ಳುತ್ತೇನೆ ಗಂಡು ಮಗು ಎಂದು ಸಾಕುತ್ತೇನೆ"ಎಂದು ಧೈರ್ಯದಿಂದ ಹೇಳಿ ನನ್ನನ್ನು ತವರು ಮನೆಗೆ ವಾಪಾಸು ಕರೆತಂದರು.. ಅಮ್ಮನಿಗೆ ನನ್ನನ್ನು ಕಂಡು ದುಃಖ ತಡೆಯಲಾಗಲಿಲ್ಲ ಜೋರಾಗಿ ಅಳಲಾರಂಭಿಸಿದ ಅಮ್ಮನನ್ನು ಅಪ್ಪಯ್ಯ ಸಾಂತ್ವಾನಿಸಿದರು ..ನೀನೇ ಕುಗ್ಗಿದರೆ ಆ ಮಗುವಿಗೆ ಧೈರ್ಯ ಹೇಳುವವರು ಯಾರು ಅವಳಿಗೆ ಮದುವೆ ಆಗಿಲ್ಲವೆಂದು ನಾವೇ ನೋಡಿಕೊಳ್ಳೋಣ ಇನ್ನೊಬ್ಬ ಗಂಡು ಮಗನಂತೆ ಬೆಳೆಸೋಣ ಎಂದು ಸಮಾಧಾನ ಮಾಡಿದರು
ಆ ಕಾಲಕ್ಕೆ ಅಪ್ಪಯ್ಯನ ನಿಲುವಿಗೆ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡಿದರು. ಚುಚ್ಚಿದರೂ ಹಿಂಸಿಸಿದರು ನೋಯಿಸಿದರು. ಅಪ್ಪಯ್ಯ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳದೆ ಧೈರ್ಯದಿಂದ ಬದುಕನ್ನು ಎದುರಿಸಬೇಕು.ಬಂದ ಪರಿಸ್ಥಿತಿಗಳನ್ನು ಸಂಕಟವನ್ನು ನಿಭಾಯಿಸಬೇಕು ಎಂದು ನನಗೆ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬುತ್ತಿದ್ದರು.. ಸಣ್ಣಕ್ಕ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಹೋದಳು.. ಏನು ಮಾಡಬೇಕು..? ಹೇಗಿರಬೇಕು..? ಏನಾಯಿತು ನನ್ನ ಬದುಕಿಗೆ..? ಯಾಕ್ ಹೀಗಾಯಿತು..? ನನ್ನ ತಪ್ಪೇನಿದೆ..? ಎಂಬೆಲ್ಲಾ ಪ್ರಶ್ನೆಗಳು ನನ್ನನ್ನು ಕೊಲ್ಲುತ್ತಿತ್ತು. ಆದರೆ ದೇವರನ್ನು ನಂಬು ಅವನು ಕೈ ಬಿಡಲಾರ ಕಷ್ಟ ಕೊಡುವವನು ಅವನೇ ಕಷ್ಟ ಕಳೆವವನು ಅವನೇ ಎಂದು ಸಮಾಧಾನ ಮಾಡುತ್ತಾ ಅಪ್ಪಯ್ಯ ಮನೆಯಲ್ಲಿ ಒಂಟಿಯಾಗಿ ಕುಳಿತ ಯೋಚಿಸುವುದು ಬೇಡ .. ತೋಟಗದ್ದೆಗೆ ನನ್ನೊಂದಿಗೆ ಬಾ ಎಂದು ಕರೆದೊಯುತ್ತಿದ್ದರು..
ಊರಿನವರೆಲ್ಲ ಅಪ್ಪಯ್ಯನ ಈ ನಿಲುವನ್ನು ವಿರೋಧಿಸುವುದಕ್ಕಾಗಿ ಅವರನ್ನು ದೂರವಿಟ್ಟಿದ್ದರು. ಅಮ್ಮ ನನ್ನ ಬದುಕಿನ ಬಗ್ಗೆ ಚಿಂತಿಸುತ್ತಾ ಕೊರಗುತ್ತಾ ಆರೋಗ್ಯ ಕೆಡಿಸಿಕೊಂಡು ಹಾಸಿಗೆ ಹಾಸಿದ್ದಳು.. ಈ ವೇಳೆಯಲ್ಲಿಯೇ ತಮ್ಮನಿಗೊಂದು ಮದುವೆ ಮಾಡಬೇಕೆಂಬ ಅಮ್ಮನ ಹಂಬಲದಂತೆ ಹುಡುಗಿಯನ್ನು ಹುಡುಕಿ ಮದುವೆ ಮಾಡಲಾಯಿತು.. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅಮ್ಮನ ಆರೋಗ್ಯ ಸಂಪೂರ್ಣ ಕೆಟ್ಟು ನಮ್ಮನ್ನು ಬಿಟ್ಟು ಈ ಲೋಕದ ಯಾತ್ರೆ ಮುಗಿಸಿ ಇಹಲೋಕಕ್ಕೆ ಪ್ರಯಾಣ ಬೆಳೆಸಿದಳು..
ಮುಂದುವರೆಯುವುದು....
