ತುಂತುರು ಹಾಡು
ತುಂತುರು ಹಾಡು
ಅವಳು ಕಿಟಕಿಯಿಂದ ಹೊರಗಡೆಯ ಸುಂದರ ಸಂಜೆಯನ್ನು ನೋಡುತ್ತಾ ನಿಂತಿದ್ದಳು. ವೈಶಾಖದ ಕೊನೆಯ ದಿನಗಳ ಬೇಸಿಗೆಯಿಂದ ತತ್ತರಿಸಿದ್ದಳು. ಜ್ಯೇಷ್ಠದ ಮುಂಗಾರಿನ ತುಂತುರು ಹನಿಗಳ ಸಿಂಚನ ಕ್ಕಾಗಿ ಕಾಯುತ್ತಿದ್ದಳು.
ದೇಶದ ಗಡಿ ಕಾಯುತ್ತಿರುವ ಅವಳ ಗಂಡನ ಬರವಿಗಾಗಿ ಕಾದು ಕಾದು ವಿರಹದ ಉರಿಯನ್ನು ತಾಳಲಾಗದೆ ಕಿಟಕಿಗೆ ಮುಖ ಕೊಟ್ಟು ನಿಂತಿದ್ದಳು. ಇತ್ತೀಚೆಗೆ ಗಂಡನಿಂದ ಯಾವುದೇ ಮೆಸೆಜ್ ಇಲ್ಲದೆ ಬಹಳ ಕಂಗಾಲಾಗಿದ್ದಳು. ಮದುವೆಯಾದ ಒಂದೇ ವಾರಕ್ಕೆ ಸೇವೆಗೆ ಹಿಂತಿರುಗಿದ್ದ ಅವಳ ಗಂಡ, ಅವಳಿಗೆ ಈಗ ಒಂದು ವರ್ಷದಿಂದ ಮರೀಚಿಕೆಯಾಗಿ ಉಳಿದಿದ್ದ. ದೈಹಿಕ ಕಾಮನೆಗಳು ಭುಗಿಲೆದ್ದಾಗಲೆಲ್ಲಾ ಒಳಗೊಳಗೇ ಹಿಂಸೆ ಅನುಭವಿಸಿ ಗಂಡನ ಹಿತ ಸ್ಪರ್ಶದ ತುಂತುರು ಹನಿಗಳಿಗಾಗಿ ಹಂಬಲಿಸಿ ಹಂಬಲಿಸಿ ಸೋತು ಹೋಗುತ್ತಿದ್ದಳು.
"ಎಂದು ಬರುವೆ ನಲ್ಲ ನೀನು ? ಮತ್ತೆಂದು ಬರುವೆಯೋ?ಕಾದು ಕಾದು ಕಾದು ಕಾದು ಕಣ್ಣು ದಣಿದು ಹೋದವು."
ಎಂದೋ ಕಲಿತಿದ್ದ ಭಾವಗೀತೆ ಅವಳ ಕಿವಿಯಲ್ಲಿ ಗುಂಯ್ ಗುಟ್ಟು ತ್ತಿದ್ದವು.
ವೈಶಾಖ ದ ತಾಪಮಾನಕ್ಕೆ ಭೂಮಿ ಕಾದಿದ್ದರೆ, ಗಂಡನಿಂದ ದೂರವಿದ್ದು ವಿರಹ ತಾಪದಿಂದ ಅವಳು
ಬಿಸಿಯಾಗಿದ್ದಳು.
ಭೂಮಿಯಂತೆ ಅವಳಿಗೂ ತುಂತುರು ಹನಿಗಳ ತಂಪಿನ ಸಿಂಚನ ಬೇಕಾಗಿತ್ತು.
ಮನೆಯಲ್ಲಿ ಹೆತ್ತವರು ಹಾಗೂ ಒಡಹುಟ್ಟಿದವರೆಲ್ಲರೂ ಇದ್ದರೂ ಅವಳು ಮಾತ್ರ ಏಕಾಂಗಿತನದಿಂದ ಬಳಲುತ್ತಿದ್ದಳು. ಬಿಸಿಲಿನ ತಾಪದಿಂದ ಪರಿತಪಿಸುತ್ತಿದ್ದಳು.
ಎಷ್ಟೋ ಹೊತ್ತಿನಿಂದ ಕಿಟಕಿಯ ಸರಳುಗಳಿಂದ
ಹೊರಗಿನ ಬಟಾಬಯಲನ್ನು ನೋಡುತ್ತಲೇ ಇದ್ದಳು.
ಶಿಶಿರದ ಹೊಡೆತಕ್ಕೆ ಉದುರಿದ್ದ ತರಗೆಲೆಗಳು ಸುಟ್ಟು ಕರಕಲಾಗಿ ಭೂಮಿಯ ಮೇಲೆ ಬಿದ್ದಿದ್ದವು.
ಅವಳು ನೋಡು ನೋಡುತ್ತಿದ್ದಂತೆ ಸುಯ್ಯನೆ ತಂಗಾಳಿ ಬೀಸಿ ಅವಳ ಮೈ ಗೆ ಹಿತವೆನಿಸಿತು. ದೂರದಲ್ಲೆಲ್ಲೋ ಚೆಲ್ಲಾಪಿಲ್ಲಿ ಯಾಗಿದ್ದ ಕಾರ್ಮೋಡಗಳು ಹತ್ತಿರ ಹತ್ತಿರ ಸುಳಿದು ದಟ್ಟವಾಗಿ ಮಳೆಯ ಮುನ್ಸೂಚನೆ ನೀಡಿದವು.
ತುಂತುರು ಹನಿಗಳು ನಿಧಾನವಾಗಿ ಭೂಮಿಯನ್ನು ತಣಿಸುತ್ತಿದ್ದವು.
ಹಾಗೇ ನೋಡುತ್ತಾ ನಿಂತ ಅವಳನ್ನು ಹಿಂದಿನಿಂದ ಯಾರೋ ತಬ್ಬಿದಂತಾಯಿತು. ಇದೇನು ಭ್ರಮೆಯೋ ನಿಜವೋ ಎಂದು ಹಿಂತಿರುಗಿ ನೋಡಿದಾಗ, ಅವಳ ಮುಖದಲ್ಲಿ ಮಿಂಚು ಹರಿಯಿತು. ಗಂಡನ ದಿಢೀರ್ ಆಗಮನದಿಂದ ಅವಳಿಗೆ ಸಖೇದಾಶ್ಚರ್ಯವಾಯಿತು.
ಯಾವುದೇ ಮೆಸೇಜ್ ನೀಡದೇ ಬಂದಿದ್ದ ಅವನನ್ನೇ ಬಿಟ್ಟ ಕಣ್ಣುಗಳಿಂದ ದಿಟ್ಟಿಸಿದಳು.
ತನ್ನನ್ನೇ ತದೇಕವಾಗಿ ನೋಡುತ್ತಾ ನಿಂತಿದ್ದ ಅವಳನ್ನು ಅವಳ ಗಂಡ ಬಿಗಿದಪ್ಪಿ ಅವಳಿಗೆ ಅಮೃತ ಸಿಂಚನ ಮಾಡಿಸಿದ.ತಿಂಗಳುಗಳ ವಿರಹ ತಾಪವನ್ನು ಗಂಡನ ಪ್ರೀತಿಯ ತುಂತುರು ಹನಿಗಳು ತಂಪಾಗಿಸಿದ್ದವು.
ಈ ಬಾರಿ ಗಂಡನೊಂದಿಗೇ ತಾನೂ ಸಹ ಹೊರಡುವುದೆಂಬ ವಿಷಯ ಅವಳಿಗೆ ತಿಳಿದಾಗ, ಅವಳು ಸಂತೋಷದಿಂದ ಉಬ್ಬಿಹೋದಳು. ಅವಳ ವಿರಹದ ತಾಪ ತಂಪಾಗುತ್ತಾ ಬಂದಿತು. ಇಬ್ಬರೂ ಜ್ಯೇಷ್ಠದ ಮುಂಗಾರಿನ ತುಂತುರು ಹನಿಗಳಿಗೆ ಕಿಟಕಿಯ ಸರಳುಗಳ ಹೊರಗೆ ಕೈಯೊಡ್ಡಿ ನಿಂತಿದ್ದರು.

