Vijaya Bharathi

Abstract Romance Others

3  

Vijaya Bharathi

Abstract Romance Others

ಸರಿದ ಮೋಡಗಳು

ಸರಿದ ಮೋಡಗಳು

4 mins
248


ಅಂದು ಅಡುಗೆಮನೆ ಯಲ್ಲಿ ಬೆಳಗಿನ ತಿಂಡಿಯ ತಯಾರಿಯಲ್ಲಿದ್ದ ಪ್ರಿಯಾ, ಈರುಳ್ಳಿ ಹೆಚ್ಚುತ್ತಾ ಅನ್ಯಮನಸ್ಕಳಾಗಿದ್ದಳು. ಈರುಳ್ಳಿಯ ಘಾಟಿ ನಿಂದ ಕಣ್ಣಿನಿಂದ ನೀರಿಳಿಯುತ್ತಿತ್ತು. ಎಂದಿನಂತೆ ಅದನ್ನು ಮುಂಗೈಯ್ಯಿನಿಂದ ಒರೆಸಿಕೊಳ್ಳಲೂ ಹೋಗದೆ, ಗಂಡನ ಬಗ್ಗೆಯೇ ಚಿಂತಿಸುತ್ತಾ ಯಾಂತ್ರಿಕ ವಾಗಿ ಕೆಲಸ ಮಾಡುತ್ತಿದ್ದಳು. ಅವಳ ಮನಸ್ಸು ಅವನ ಬಗ್ಗೆಯೇ ಯೋಚಿಸುತ್ತಿತ್ತು.


'"ಮನೆಯವರ ವಿರುದ್ಧ ವಾಗಿ ಸತತ ವಾಗಿ ಹೋರಾಡಿ ಮದುವೆಯಾಗಿದ್ದ ಪ್ರೇಮಿಗಳು ನಾವು. ನಮ್ಮಿಬ್ಬರ ನಡುವೆ ವಯಸ್ಸು ಜಾತಿ ಗಳಲ್ಲಿ ಬಹಳ ಅಂತರವಿದ್ದರೂ, ಡಾ ಪ್ರಥಮ್ ನಂತಹ ಬ್ರಿಲಿಯಂಟ್ ಸರ್ಜನ್ ನ ಕೆಳಗೆ ಜೂನಿಯರ್ ಆಗಿ ಕೆಲಸ ಮಾಡುವ ಅವಕಾಶ ನನಗೆ ದೊರೆತಾಗ ಅವನ ಕೈ ಚಳಕಕ್ಕೆ ಹಸ್ತಗುಣಕ್ಕೆ, ವೃತ್ತಿ ಯಲ್ಲಿ ಅವನಿಗಿದ್ದ ಹೆಸರಿಗೆ ನಾನು ಮಾರುಹೋಗಿ, ನನಗಿಂತ ವಯಸ್ಸಿನಲ್ಲಿ ಹದಿನೈದು ವರ್ಷಗಳ ಅಂತರವಿದ್ದರೂ,ನನ್ನ ಹೆತ್ತವರ ಮನಸ್ಸನ್ನು ಬಹಳ ಕಷ್ಟದಿಂದ ಗೆದ್ದು ಕಡೆಗೂ ನಾ ಮೆಚ್ಚಿದ ನನ್ನ ಹುಡುಗನೊಂದಿಗೆ ಮದುವೆ ಯಾಗಿ ಸಂತೋಷ ಪಟ್ಟಿದ್ದು ಒಂದು ಕಡೆಯಾದರೆ, ಮದುವೆಯಾಗಿ ಅವನ ಮನೆಗೆ ಬಂದ ಮೇಲೆ ಅವನು ಪ್ರೇಮಿಯಿಂದ ಗಂಡನಾದ ಮೇಲೆ, ನಿಧಾನವಾಗಿ ತನ್ನ ಹಕ್ಕನ್ನು ಚಲಾಯಿಸಲು ಶುರು ಮಾಡಿರುವುದು ನನಗೆ ಸ್ವಲ್ಪ ಮುಜುಗರವೆನಿಸಿದರೂ, ಪ್ರೇಮ ವಿವಾಹ ಮಾಡಿಕೊಂಡಿರುವ ನಾವಿಬ್ಬರೂ ಬಹಳ ಬೇಗ ರಾಜಿ ಮಾಡಿಕೊಂಡು ಸಾಗಬೇಕಾಗಿದೆ ಎಂಬ ತಿಳುವಳಿಕೆ ನಮ್ಮಿಬ್ಬರಿಗೂ ಇರುವುದಂತೂ ನಿಜ. ಆದರೆ ಈಗೆರೆಡು ದಿನಗಳ ಹಿಂದೆ ಡಾ.ಪ್ರಥಮ್ ನ ಬರ್ತ್ ಡೇ ಆದಾಗ ಅವನು ಆಸೆಪಟ್ಟ ಗಿಫ್ಟ್ ಅನ್ನು ನಾನು ಇಷ್ಟು ಬೇಗ ಕೊಡಲಾಗುವುದಿಲ್ಲ ಅದಕ್ಕೆ ಕಾಲಾವಕಾಶ ಬೇಕೆಂದು ಹೇಳಿದ ಕೂಡಲೇ ಅವನ ಮುಖದಲ್ಲಿ ಬೇಸರದ ಛಾಯೆ ಮೂಡಿ, ಮಾಮೂಲಿ ನಮ್ಮಿಬ್ಬರ ನಡುವೆ ನಡೆಯುತ್ತಿದ್ದ ಸರಸಸಲ್ಲಾಪಗಳಿಗೆ ಬ್ರೇಕ್ ಬಿದ್ದಿದೆ. ನನ್ನಿಂದ ಅವನಿಗೆ ಬೇಸರವಾಯಿತಲ್ಲಾ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿದೆ.


ಈಗ ತಾನೇ ಕೆರಿಯರ್ ಪ್ರಾರಂಭಿಸಿರುವ ನಾನು ಅವನು ಬಯಸುವ ಮಕ್ಕಳ ಗಿಫ್ಟ್ ನನ್ನಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಅವನಿಗೋ ತನ್ನದೇ ಕುಟುಂಬವನ್ನು ಬೇಗ ಬೆಳೆಸಬೇಕೆಂಬ ಆತುರ. ಅವನ ವಯಸ್ಸಿಗೆ ಇದು ಸಹಜವೇ ಆಗಿದ್ದರೂ ನನ್ನ ವಯಸ್ಸಿಗೆ ನಾನು ವೃತ್ತಿ ಯಲ್ಲಿ ಒಂದೆರಡು ವರ್ಷಗಳು ಕೆಲಸ ಮಾಡಿ ಮುಂದೆ ಬರುವ ಆಸೆ. ನಾವಿಬ್ಬರೂ ಪರಸ್ಪರ ಪ್ರೀತಿಸುವಾಗ, (ವೈದ್ಯರೇ ಆಗಿದ್ದರೂ‌ಸಹ) ಇಂತಹ ವಿಷಯಗಳನ್ನು ಚರ್ಚಿಸಲಿರಲಿಲ್ಲ. ಇಷ್ಟು ಬೇಗ ಮಕ್ಕಳ ಜಂಜಾಟ ನನಗೆ ಬೇಡ. ಅದಕ್ಕಾಗಿ ಒಂದೆರಡು ವರ್ಷ ಗಳ ಕಾಲಾವಕಾಶ ಕೇಳಿದೆ. ಆಗಿನಿಂದ ಅವನು ತುಂಬಾ ಮೌನಿಯಾಗಿ ಉದಾಸಿ ಯಾಗಿದ್ದಾನೆ. ಪ್ರೇಮಿಗಳಾಗಿರುವುದರಲ್ಲಿರುವ ಭಾವನೆಗಳು ಗಂಡ ಹೆಂಡತಿ ಯರಾದ ಮೇಲೆ ಬದಲಾಗುತ್ತದೆ ಯೇ? ಅವನ ಆ ಪೇಲವ ಮುಖಕ್ಕೆ ನಾನೇ ಕಾರಣವಾದರೆ ? ನನಗೂ ಅವನಿಗೆ ಬೇಸರ ಮಾಡಿಸುವುದು ಇಷ್ಟ ವಿಲ್ಲ. ಹಾಗಂತ ಅವನ ಇಚ್ಛೆಯನ್ನು ಪೂರೈಸಲೂ ಆಗುವುದಿಲ್ಲ. ಛೇ ಅವನ್ಯಾಕೆ ಹೀಗೆ ? ಅವನನ್ನು ನಗಿಸುವುದು ಹೇಗೆ? ಈ ಸಂದಿಗ್ಧತೆ ಯಿಂದ ಹೇಗಾದರೂ ಹೊರಬರಬೇಕು. ',


ಪ್ರಿಯಾಳ ಯೋಚನೆ ಹೀಗೇ ಸಾಗಿತ್ತು. ಜೊತೆಗೆ ಕೈ ಕೆಲಸ ಮಾಡುತ್ತಲೂ ಇತ್ತು. ಬೆಳಗಿನ ಬ್ರೇಕ್ ಫಾಸ್ಟ್ ಗೆ ಪರೋಟ ಮಾಡುತ್ತಿದ್ದ ಅವಳನ್ನು ಡಾ.ಪ್ರಥಮ್ ಹಿಂದಿನಿಂದ ಬಳಸಿದಾಗ, ಬೆಚ್ಚಿ ಹಿಂತಿರುಗಿದಳು. ಗಂಡನ ತೋಳುಗಳು ಅವಳನ್ನು ಬಳಸಿದಾಗ, "ಹಾಯ್ ಡಿಯರ್ ಇವತ್ತು ಇನ್ನೂ ತಿಂಡಿ ರೆಡಿಯಾದ ಹಾಗಿಲ್ಲ. ಹಾಸ್ಪಿಟಲ್ ಗೆ ಬರಲ್ವಾ ? ನನಗೊಂದು ಸರ್ಜರಿ ಇದೆ. ಬೇಗ ಹೋಗಬೇಕು . "ಎಂದು ಪಿಸು ನುಡಿದಾಗ, ಗಂಡನ ಸಾಮೀಪ್ಯ ದಲ್ಲಿ ಕರಗಿ ಹೋದ ಪ್ರಿಯ ಅವನ ಮುಖವನ್ನು ಓರೆಗಣ್ಣಿನಿಂದ ಗಮನಿಸಿದಳು. ರಾತ್ರಿ ಸರಿಯಾಗಿ ನಿದ್ರಿಸದ ಅವನ ಮುಖ ಎಂದಿನಂತೆ ಲವಲವಿಕೆ ಯಿಂದ ಇರಲಿಲ್ಲ.

"ಯು ಡೋಂಟ್ ಲುಕ್ ನಾರ್ಮಲ್. ನೀವು ನಿನ್ನೆ ರಾತ್ರಿ ಯ ಮಾತುಗಳ ಗುಂಗಿನಲ್ಲೇ ಇದ್ದಹಾಗೆ ಕಾಣುತ್ತಿದೆ.

ನನಗೆ ಕಾಲಾವಕಾಶ ನೀಡಿದುದಕ್ಕೆ ಕೊರಗುತ್ತಾ ಇಲ್ಲ ತಾನೆ?"ಗಂಡನ ಎದೆಯಲ್ಲಿ ಮುಖವಿಟ್ಟು ಕೇಳಿದಾಗ ,

ಅವನು ಜೋರಾಗಿ ನಕ್ಕು

"ನಥಿಂಗ್ ಲೈಕ್ ದಟ್. ನಮ್ಮ ಈ ದೀರ್ಘಾವಧಿಯ ಜೀವನದಲ್ಲಿ ಕೇವಲ ಎರಡು ವರ್ಷಗಳು ಕಣ್ಣುಮುಚ್ಚಿ ಕಣ್ಣು ಬಿಡುವುದರಲ್ಲಿ ಕಳೆದು ಹೋಗುತ್ತದೆ. ಡೋಂಟ್ ವರಿ. ಗೆಟ್ ರೆಡಿ ನೌ "ಅಂತ ಹೇಳುತ್ತಾ ಅವಳ ಕೆನ್ನೆ ತಟ್ಟಿ ಹೊರನಡೆದ  ಡಾ.ಪ್ರಥಮ್.

ಇದಾದ ನಂತರ ವೂ ಅವನು ಮಾಮೂಲಿನಂತೆ ಇರದೆ ಯಾವುದೋ ಗಾಢವಾದ ಚಿಂತೆ ಯಲ್ಲೇ ಮುಳುಗಿ ಹೋಗಿ, ಮಂಕಾಗಿ ಇರುತ್ತಿದ್ದ, 

ಇದೇ ಗುಂಗಿನಲ್ಲಿ ಒಂದು ವಾರ ಕಳೆದ ಪ್ರಿಯಾಳಿಗೆ , ಒಂದು ರೀತಿ ಗಿಲ್ಟ್ ಕಾಡುತ್ತಿತ್ತು.

"ಅವನ್ಯಾಕೆ ಹೀಗೆ? ಅರ್ಥವಾಗದವನಾಗಿದ್ದಾನೆ. ವಿವಾಹದ ಮೊದಲು ಎಷ್ಟೆ ಓಡಾಡಿದರೂ ಯಾರನ್ನೂ ಸಂಪೂರ್ಣ ವಾಗಿ ಅರ್ಥಮಾಡಿಕೊಳ್ಳಲು ಕಷ್ಟವೇ ಸರಿ. ಜೀವನದಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಮುಂದೆ ನಡೆಯುವಾಗಲೇ ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತಾ ಸಾಗಬೇಕು. ಅವನ ಮಕ್ಕಳ ಕನಸನ್ನು ನನ್ನಿಂದ ಇಷ್ಟು ಬೇಗ ಪೂರೈಸಲೂ ಆಗುವುದಿಲ್ಲ. ನಮ್ಮಿಬ್ಬರ ನಡುವೆ ಇರುವ ಹದಿನೈದು ವರ್ಷಗಳ ವಯಸ್ಸಿನ ಬಗ್ಗೆ ನನ್ನ ಅಪ್ಪ ಅಮ್ಮ ತುಂಬಾ ವಿರೋಧಿಸಿದುದು ಇದಕ್ಕಾಗಿಯೇ ಇರಬೇಕು. ನಾವಿಬ್ಬರೂ ವೈದ್ಯರಾಗಿರುವುದರಿಂದ ಇದೆಲ್ಲಾ ಸಮಸ್ಯೆ ಆಗುವುದಿಲ್ಲವೆಂದು ಭಾವಿಸಿಕೊಂಡಿದ್ದೆ. ಆದರೆ ಮದುವೆಯಾದ ಎರಡು ತಿಂಗಳಿಗೇ ಈ ರೀತಿಯ ಸಂದಿಗ್ಧತೆ ಬರಬಹುದೆಂದು ತಿಳಿದುಕೊಂಡಿರಲಿಲ್ಲ. ಆದರೂ ಪ್ರೀತಿಸಿ ಮದುವೆಯಾದ ನಮ್ಮಿಬ್ಬರ ನಡುವೆ

ಕಾಂಪ್ರೊಮೈಸ್ ಆಗುವುದೂ ಅಷ್ಟೇ ಮುಖ್ಯ."

ಪ್ರಿಯಾ ಕಾರಿನಲ್ಲಿ ಮೌನವಾಗಿ ಕುಳಿತು ತನ್ನದೇ ಆದ ಯೋಚನೆ ಗಳಲ್ಲಿ ಮುಳುಗಿದ್ದಳು. ತನ್ನ ಪ್ರೀತಿಯ ಪ್ರಿಯಾಳ ಮುಖ ಚಿಂತೆ ಯಿಂದ ಬಾಡಿರುವುದನ್ನು ನೋಡಿದ ಡಾ.ಪ್ರಥಮ್,

"ಈಗ ನಿನಗೇನಾಯ್ತು ಮೈ ಡೀಯರ್ ಡಾ.ಪ್ರಿಯಾ ?ಮಂಕಾಗಿದ್ದೀಯ? ಪ್ಲೀಸ್ ಚಿಯರ್ ಅಪ್"

ಅವಳನ್ನು ನಗಿಸುವ ಪ್ರಯತ್ನ ಮಾಡಿದ.

ಗಂಡನಿಗೆ ಬೇಸರವಾಗಬಾರದೆಂದು ಪ್ರಿಯಾ ಬೇರೆ ಏನೋ ಕಾರಣ ಹೇಳಿ ಬಚಾವಾದಳು.

"ಹೋ ಇವತ್ತು ನನ್ನ ಆಕ್ಸಿಡೆಂಟ್ ಪೇಷಂಟ್ ಕ್ರಿಟಿಕಲ್ ಆಗಿದ್ದಾನೆ. ಅದರ ಬಗ್ಗೆ ಯೋಚನೆ ಮಾಡ್ತಾ ಇದ್ದೆ. ದಟ್ಸ್ ಆಲ್" ತನ್ನ ಯೋಚನೆಗಳಿಗೆ ಬ್ರೇಕ್ ಹಾಕಿದಳು.

ಅಂದು ರಾತ್ರಿ ಅವರಿಬ್ಬರೂ ಮಕ್ಕಳ ಬಗ್ಗೆ ಒಂದು ದೃಢ ನಿರ್ಧಾರ ಕ್ಕೆ ಬಂದರು. ಊಟ ಮುಗಿಸಿ ರೂಂಗೆ ಬಂದ ಮಡದಿಯನ್ನು ತಬ್ಬಿ ಹಿಡಿದು ಮುತ್ತಿನ ಮಳೆಗರೆದ ಗಂಡನ ಮೂಡ್ ನೋಡಿ ಪ್ರಿಯಾಳಿಗೆ ಆಶ್ಚರ್ಯ ವಾಯಿತು.

"ಹೋ ಹೋ ಹೋಲ್ಡಾನ್ ಡಾಕ್ಟರ್ ಸರ್. ನೀವೇಕೆ ಹೀಗೆ ಇಂದು? ಒಳ್ಳೆಯ ಮೂಡ್ ಮತ್ತೆ ಬಂತಾ?

ನಿಮ್ಮ ಮುಖ ನೋಡುತ್ತಾ ನೋಡುತ್ತಾ ನನ್ನ ಮೂಡ್ ಕರಾಬ್ ಆಗಿತ್ತು. ಐ ಆಮ್ ಸಾರಿ ಡಾ. ಪ್ರಥಮ್.ನಿಮ್ಮ ಆಸೆಯನ್ನು ಪೂರೈಸಲು ಸ್ವಲ್ಪ ಕಾಲಾವಕಾಶ ತುಂಬು ಮನಸ್ಸಿನಿಂದ ಕೊಟ್ಟರೆ, ನಂತರ ನೀವು ಹೇಳಿದ ಹಾಗೆ ನಾನು ಕೇಳುತ್ತೇನೆ. ಪ್ರಾಮಿಸ್"

ಎಂದು ಗಂಡನ ಎದೆಗೆ ಒರಗಿ ಪ್ರೀತಿ ಯಿಂದ ಹೇಳಿದ

ಪ್ರಿಯಾಳನ್ನು ಮತ್ತೆ ಬಿಗಿಯಾಗಿ ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡು,ಅವಳ ಹಣೆಯ ಮೇಲೆ ಬರುತ್ತಿದ್ದ ಕೂದಲನ್ನು ಹಿಂದಕ್ಕೆ ಸುರಿಸುತ್ತಾ,

"ಇಟ್ಸ್ ಒ.ಕೆ. ಪ್ರಿಯಾ. ನಾನು ಈಗಾಗಲೇ ನಿನಗೆ ಕಾಲಾವಕಾಶ ನೀಡಿದ್ದೀನಲ್ಲಾ. ನೀನು ನಿನ್ನ ಕೆರಿಯರ್ ನಲ್ಲಿ ಒಳ್ಳೆ ಹೆಸರು ಗಳಿಸೋದು ಅಷ್ಟೇ ಮುಖ್ಯ. ನಿನ್ನನ್ನು ಪ್ರೀತಿಸಿ ಎಲ್ಲರನ್ನೂ ಎದುರಿಸಿ ಮದುವೆ ಮಾಡಿಕೊಂಡಿರುವ ನಾವು ಒಬ್ಬರಿಗೊಬ್ಬರುಕಾಂಪ್ರೋಮೈಸ್ ಆಗದಿದ್ದರೆ ಹೇಗೆ? ಇನ್ನು ಮುಂದೆ  ನಮ್ಮಿಬ್ಬರ ಪ್ರೀತಿ ಗೆ ಈ ಚರ್ಚೆ ಮುಳ್ಳಾಗದಿರಲಿ.ನಿನಗೆ ಈಗ ಖುಷಿ ನಾ?",

ಎಂದಾಗ, ಪ್ರಿಯಾ ಅವನ ಹಣೆಗೆ ಮುತ್ತಿಟ್ಟು,

"ಥ್ಯಾಂಕ್ಯೂ ಮೈ ಡಿಯರ್ ಹಸ್ಬೆಂಡ್." ಎನ್ನುತ್ತಾ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ತಮ್ಮ ಮುಸುಗಿನೊಳಗಿನ ಗುದ್ದಿನ ವೈಮನಸ್ಯ ದ ತೆರೆಯನ್ನು ಸರಿಸಿದರು. ವಾರದಿಂದ ಇಬ್ಬರ ನಡುವೆ ಮುಸುಕಿದ್ದ ಮೋಡ ಸರಿದು ತಿಳಿಬೆಳಕು ಮೂಡಿತು. ಇಬ್ಬರೂ ಸುಖವಾಗಿ ನಿದ್ದೆ ಮಾಡಿದರು. ಈ ಇಬ್ಬರು ಪ್ರೇಮಿಗಳ ಸಂಭ್ರಮಕ್ಕೆ ಕಿಟಕಿಯ ಹೊರಗಿನಿಂದ ಇಣುಕುತ್ತಿದ್ದ ಚಂದಿರ ಸಾಕ್ಷಿಯಾಗಿದ್ದನು.


Rate this content
Log in

Similar kannada story from Abstract