****ಸಂಜೆಯ ಮೆಲುಕು****
****ಸಂಜೆಯ ಮೆಲುಕು****
ನಿನ್ನೆ ಸಂಜೆ ಹಾಗೇ ಒಂದೆರಡು ಹೆಜ್ಜೆ ಅಡ್ಡಾಡಿಕೊಂಡು ಬರೋಣವೆಂದು ಹೋದೆ. ಅರ್ಧ ಕಿಲೋಮಿಟರ್ ದೂರದಲ್ಲಿದ್ದ ಪಾರ್ಕ್ ಒಂದರಲ್ಲಿ ಬಹಳಷ್ಟು ಜನ ವಾಕಿಂಗ್ ಮಾಡುತ್ತಿದ್ದರು. ನಾನೂ ಒಳಗೆ ನುಸುಳಿದೆ. ಹಸಿರು ಗಿಡಮರಗಳು. ಹೂಗಿಡದ ತುಂಬ ಬಣ್ಣ ಬಣ್ಣದ ಹೂಗುಚ್ಛಗಳು. ತಂಪು ಗಾಳಿ, ಆಲ್ಹಾಧಕರ ಎನಿಸಿತು. ಅಲ್ಲೇ ಕಲ್ಲು ಬೆಂಚೊಂದರ ಮೇಲೆ ಕುಳಿತು ಕ್ಷಣ ಸುತ್ತಲೂ ಅವಲೋಕಿಸುತ್ತ ಕುಳಿತೆ.
ಮನಸು ಸುಮ್ಮನಿದ್ದೀತೇ...ಎಲ್ಲೋ ತೇಲಿತು...ಹಾರಿತು...ಹಾರಲು ಬಿಟ್ಟೆ ಸ್ವತಂತ್ರವಾಗಿ. ಖುಷಿಯೋ ಖುಷಿ ಅದಕ್ಕೆ. ಚುಕ್ಕಾಣಿಯಿಲ್ಲವೆಂದು. ಕಾಲು ಬಿಟ್ಟ ಕತ್ತೆಯಂತೆ ಓಡಾಡಿತು. ನಾ ಸುಮ್ಮನೆ ಕುಳಿತಿದ್ದೆ....
ಬದುಕಿನ ಕಿಂಡಿಗಳು ಒಂದೊಂದೇ ತೆರೆದುಕೊಂಡ ಸದ್ದು. ಕೀರಲು ಶಬ್ದ. ಎಣ್ಣೆ ಕಾಣದ ಜಂಗು ಹಿಡಿದ ಕಬ್ಬಿಣದ ಬಾಗಿಲಂತೆ ಕರ್ಕಶ ಸದ್ದು. ಮಂಕು ಬೆಳಕು, ಎಂತದೋ ವಾಸನೆ ಮೂಗಿಗಡರಿದಂತೆ. ಕಣ್ಣು ಕಿರಿದು ಮಾಡಿ ಇಣುಕಿದ್ದವು ಕುತೂಹಲಗಳು. ಗೋಡೆ ಮೇಲಣ ಗೀಚುಗಳು, ಸಿಮೆಂಟನ್ನೇ ಕೊರೆಕೊರೆದು ಮಾಡಿದ ಗಾಯಗಳಂತೆ ಕಂಡವು. ಅವು ಒಣಗಿದ್ದರೂ ಕುರುಹುಗಳು ಆಳವಾಗಿದ್ದವು. ಛೇ! ಯಾಕಾದರೂ ತೆರೆದುಕೊಂಡವೋ...ವೃಥಾ ನೋವಿನ ನೆನಪು.
ನದೀ ಮೂಲ ಹುಡುಕಬಾರದಂತೆ. ಗಾಧೆ ಮಾತು ಯಾರು ಬರೆದರೋ ಕಾಣೆ. ಇಲ್ಲಿ ನನ್ನ ಮೂಲವೇ ಕಾಣದಾಗಿದೆ. ಹುಡುಕಿದಷ್ಟೂ ಅರ್ಥಗರ್ಭಿತವಾದ ಅಗೋಚರ ಕಾಡು, ಮೇಡುಗಳು. ಬಯಲಲ್ಲೂ ಆಯತಪ್ಪಿಸುತ್ತವೆ ಕೆಲವೊಮ್ಮೆ.
ಕಳೆದುಹೋದ ಪಯಣ, ಮುಂದಿನ ಗುರಿ ಕಾಣದಾಗ, ಸೋತು ಶರಣಾಗುವಂತೆ ನಾ ಕುಂತೆ ಇಲ್ಲೇ. ಬಹಳ ಹೊತ್ತು ಸಂತೆಯಲಿ ಏನು ಕೆಲಸ. ಸಂಜೆಯಾದರೆ ಮುಗಿದು ಹೋಗುವ ಹಾಗೇ ಈ ಬದುಕು. ಎಣಿಸಲೇಕೆ ಆಗುಹೋಗುಗಳ ಅಂಕೆಸಂಖ್ಯೆಗಳನು ಎಂದೆನಿಸಿ ಮನಸು ನಿರಾಳವಾಯಿತು.
ಆಗ ಒಂದು ವಿಚಿತ್ರ ಸಾಲುಗಳು ನೆನಪಾದವು ಜೆ ಎಸ್ ಸಿದ್ದಲಿಂಗಯ್ಯನವರ ಕವನ ಹನಿ.
"ಅಂಗದೇಶದಲ್ಲಿ ಹರಣ"
ಈ ಸಾಲು ಯಾಕೋ ಏನೋ ತುಂಬಾ ಗೋಜಲಾಗಿತ್ತು ಆಗ ಓದಿದ್ದಾಗ. ಏನೂ ಅರ್ಥವಾಗಿರಲಿಲ್ಲ. ಈಗದರ ಒಳಾರ್ಥ ತಕ್ಕ ಮಟ್ಟಿಗೆ ಹೊಳೆಯಿತು. ಇಂದಿನ ಪರಿಸ್ಥಿತಿಯಲ್ಲಿ ಅಂಗದೇಶದ ಹರಣ ಬಹಳವೇ ಆಗುತ್ತಿದೆ. ಕಾಯ್ದು ಕಾಪಿಡುವ ಧರ್ಮ ಸಂಸ್ಥಾಪಕರಿನ್ನೂ ಹುಟ್ಟಿಲ್ಲವೆನಿಸುತ್ತಿದೆ.
ಇದೇ ಗುಂಗಿನಲಿ ಬರೆದ ಈ ಕೆಳಗಿನ ಸಾಲುಗಳು ನನ್ನನ್ನೇ ನುಂಗಿ ನೀರು ಕುಡಿದವು....
ಹಸೀ ನೆಲಕೆ ಬಿದ್ದು ಮೊಳಕೆಯೊಡೆದ ಬೀಜ
ಬೇರೂರಿ, ನೀರುಂಡು....
ಹಲವು ರೆಂಬೆ ಕೊಂಬೆ ಚಾಚಿ ನಿಂತಿದೆ..
ಒಡಲಿಗೊರಗಿ ಕುಳಿತ ಸುಪ್ತ ಐದೂ ಮಿತ್ರರಿಗೆ
ರೆಕ್ಕೆ ಮೂಡಿದಂತೆ ತುಡಿತ ಕಾಡಿಂದ ಹೊರಗೆ
ನಾಡಿನತ್ತ ಹಾರುವ ಬಯಕೆ...
ಬಾನತುಂಬಾ ಹಲವು ಬಣ್ಣಗಳು, ಮಣ್ಣ ವಾಸನೆ
ಹುಬ್ಬುಗಳ ಮಧ್ಯೆ ಮಿಂಚಿನ ಬೆಳಕು..
ತುಟಿ , ಕಟಿ, ಉಬ್ಬುತಬ್ಬುಗಳ ಗುಂಯ್ಗುಟ್ಟುವಿಕೆ...
ಸಕಲಚಕ್ರಗಳ ಚೀತ್ಕಾರ ಒಟ್ಟಿಗೇ ಹಾಹಾಕಾರ,
ಅಂಗ್ನಿಕುಂಡದಲ್ಲಿ ಬಿದ್ದಂತೆ ಕುದಿದು....
ಮೃದುವಾಗಿ ರುಚಿ ಕಳೆದುಕೊಂಡ ಅಂಗದೇಶ..
ಕರಣದೊಳಗಿಳಿದ ಭೃಂಗದ ಝೇಂಕಾರ,
ಪಿಸುಗುಟ್ಟುವ ಕೀರಲು ದನಿಗೆ ಮನಗೊಟ್ಟು
ಎಸಗಿದ ಸಂಚು ಬಯಲಾಗಿ ಸಂತತಿಯಾಗಿತ್ತು..
ಮೂಡಣದ ರವಿ ಕೆಂಪನು ಹರಡಿ ಕಾಯುತ್ತಿರುವಾಗ,
ಅಲ್ಲೆಲ್ಲೋ ಅಲೆಮಾರಿಯಾಗಿದ್ದ ಅನಿಸಿಕೆ ಆಮಿಷವೆಲ್ಲ
ಗೂಡ ಹೊಕ್ಕು ನೆಲಮಾಳಿಗೆ ಸೇರೆ ಮನೆ...ಮನಸ್ಸಲ್ಲೇ.
ಮೌನ ರಾತ್ರಿಯಲ್ಲು ಕಾಡುವ ನಾಡ ಹಕ್ಕಿಯ ಹಾಡು
ಅಂಗದೇಶದ ನಡೆನುಡಿ ಸತ್ಕಾರಗಳ ಹಬ್ಬಗಳು..
ಸೌಖ್ಯ ಸಖ್ಯಗಳ ಹಾಲಾಹಲದ ದಳ್ಳುರಿಗಳು...
ಬೆಂಗಾವಲಿಗೆ ನಿಂದವಳು ಸುಂದರಿಯಲ್ಲ, ಆಪ್ತಳಷ್ಟೇ
ಬಂದು ಮಂಡಿಯೂರಿ ಬೇಡಿ ಕಂಬನಿಸುವಳು..
ಬಾಯಾರಿದಾಗ ನೀರುಣಿಸಿ ಶಾಂತಗೊಳಿಸುವವಳು..

