ಶುಕ್ರನ ಮಿನುಗುತಾರೆ ನಾನು
ಶುಕ್ರನ ಮಿನುಗುತಾರೆ ನಾನು
ಏನೋ ಅನ್ಯಗ್ರಹಕ್ಕೆ ಉಚಿತ ಪ್ರಯಾಣ ಅಂದಿದ್ದೆ ತಡ, ಮಾರನೆ ದಿನದಿಂದಲೇ ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಸುಮಾರು ಜನ ಜಿಗಿದೇ ಬಿಟ್ರು. ಎಣ್ಣೆ ಬಂದಾಗ ಕಣ್ಣು ಮುಚ್ಕೊಂಡ್ರು ಅನ್ನೋ ಹಾಗೆ ಆಗ್ಬಾರ್ದು ಅಂತ ನಾನು ಬೇರೆ ಗ್ರಹಕ್ಕೆ ಹೋಗೋಕೆ ಟಿಕೆಟ್ ಬುಕ್ ಮಾಡಲು ಹೋದ್ರೆ ಎಲ್ಲಾ ಗ್ರಹಕ್ಕೂ ಬುಕಿಂಗ್ ಫುಲ್ ಆಗಿತ್ತು. ಹಾಗೂ ನನಗೂ ತುಂಬ ದೂರ ಹೋಗೋಕೂ ಮನಸಿಲ್ಲ, ಹತ್ರದಲ್ಲೇ ಗುರುವಾರ ರಾತ್ರಿ ಒಂಬತ್ತು ಗಂಟೆಯವರೆಗೆ ಮಾತ್ರ ಪಿಕ್ನಿಕ್ ಹೋಗಲು ಬೇರೆ ಗ್ರಹ ಬೇಕಿತ್ತು. ಅಂತೂ ಪ್ರಯತ್ನ ಪಟ್ಟು ಭೂಮಿಯ ಅವಳಿ ಗ್ರಹಕ್ಕೆ ಕೋರಿಕೆಯಿಟ್ಟ ಮೇಲೆ ನಾನು ಹುಟ್ಟಿದ ವಾರವಾದ ಶುಕ್ರವಾರದ ಶುಕ್ರ ತನ್ನಲ್ಲಿ ನನ್ನನ್ನು ಕರೆಸಿಕೊಂಡ. ನಾನು ತಡಮಾಡದೆ ಹೊರಟೇಬಿಟ್ಟೆ.
ಬನ್ನಿ ಅದರ ಬಗ್ಗೆನೇ ಮಾತಾಡೋಣ.
ನಾನು ಬಂದಿಳಿದಿರುವ ಈ ಗ್ರಹ ತುಂಬ ದೂರ ಏನಿಲ್ಲ. ಭೂಮಿಗಿಂತ ಬರೀ 638 ಕಿಲೋಮೀಟರ್ ದೂರದಲ್ಲಿದೆ ಅಷ್ಟೇ.
ಜೊತೆಗೆ ಈ ಗ್ರಹ ಸರಿಸುಮಾರು ಭೂಮಿಯಷ್ಟೇ ತೂಕ, ಭೂಮಿಯಷ್ಟೇ ಗಾತ್ರ ಹೊಂದಿರುವುದರಿಂದ ಭೂಮಿಯ ಅವಳಿ ಗ್ರಹ ಅಂತಾರೆ ಇದನ್ನ.
ಭೂಮಿಗಷ್ಟೇ ಅಲ್ಲಾ ರೀ ಸೂರ್ಯನಿಗೂ ಎರಡನೇ ಹತ್ತಿರದ ಗ್ರಹ ಶುಕ್ರ. ಅಲ್ದೇ ಸೌರವ್ಯೂಹದ ಆರನೇ ದೊಡ್ಡ ಗ್ರಹ ಈ ಶುಕ್ರ. ನಮ್ಮ ಶುಕ್ರ ಹೊಳಪಿಗೆ ಹೆಸರುವಾಸಿ. ರಾತ್ರಿ ಆಕಾಶದಲ್ಲಿ ಚಂದ್ರನನ್ನು ಬಿಟ್ಟರೆ ಅತೀ ಪ್ರಕಾಶಮಾನವಾಗಿ ಕಾಣುವ, ಬರಿಗಣ್ಣಿಗೆ ಕಾಣುವ ಗ್ರಹ ಅಂದ್ರೆ ನಮ್ಮ ಶುಕ್ರ.
ಒಂದು ಅಚ್ಚರಿ ಏನ್ ಗೊತ್ತಾ? ನಮ್ಮಲ್ಲಿ ಮೊದಲು ದಿನಗಳಾಗಿ, ನಂತರ ವರ್ಷಗಳಾಗುತ್ತವೆ. ಅಲ್ವಾ. ನಮ್ ಶುಕ್ರನ ವಿಷಯದಲ್ಲಿ ಹಾಗಲ್ಲ. ಇವನಿಗೆ ಮೊದಲು ವರ್ಷವಾಗಿ, ನಂತರ ದಿನಗಳಾಗುತ್ತವೆ. ಕನ್ಫ್ಯೂಸ್ ಆಯ್ತಾ. ಇರಿ ಸರಿಯಾಗಿ ವಿವರಿಸ್ತಿನಿ.
ಭೂಮಿ ತನ್ನ ಸುತ್ತ 24 ಗಂಟೆಯಲ್ಲಿ ಸುತ್ತಿ ಒಂದು ದಿನವನ್ನು ರಚಿಸಿದರೆ, ಸೂರ್ಯನನ್ನು ಸುತ್ತಿ ವರ್ಷ ರಚಿಸಲು 365 ದಿನಗಳವರೆಗೂ ಕಾಯುತ್ತೆ ಅಲ್ವಾ. ಆದ್ರೆ ಶುಕ್ರ ತನ್ನನ್ನು ತಾನು ಸುತ್ತುವ ವೇಗಕ್ಕಿಂತ, ಸೂರ್ಯನನ್ನು ಸುತ್ತುವ ವೇಗ ಜಾಸ್ತಿ ಇದೆ. ತನ್ನನ್ನು ತಾನು ಸುತ್ತಲು 243 ದಿನ ತೆಗೆದುಕೊಂಡರೆ, ಸೂರ್ಯನ ಸುತ್ತ ಸುತ್ತೋಕೆ 225 ದಿನ ತಗೊಳುತ್ತೆ. ಹಾಗಾಗಿ ಇಲ್ಲಿ ಮೊದಲು ವರ್ಷವಾಗಿ, ನಂತರ ದಿನವಾಗುತ್ತದೆ.
ಶುಕ್ರನ ಬಗ್ಗೆ ಒಂದು ಕುತೂಹಲಕಾರಿ ಅಂಶ ಏನಂದ್ರೆ ಶುಕ್ರ ಸರಾಸರಿ 584 ದಿನಗಳಿಗೆ ಒಮ್ಮೆ, ಭೂಮಿಯ ಸಮೀಪ ಬರತ್ತೆ. ಈ ಅವಧಿಯು ಶುಕ್ರನ ಐದು ಸೌರದಿನಗಳ ಅವಧಿಗೆ ಸಮ ಅಂತೆ.
ನಮ್ಮ ಶುಕ್ರನನ್ನು ಮುಂಜಾನೆಯ ನಕ್ಷತ್ರ, ಸಂಜೆ ನಕ್ಷತ್ರ ಅಂತಾನೂ ಕರೀತಾರೆ. ಈ ಶುಕ್ರ ಗ್ರಹ ಭೂಮಿಯಂತೆ ಸೂರ್ಯನ ಸುತ್ತ ತಿರುಗುವ ಬದಲು ವಿರುದ್ಧ ದಿಕ್ಕಿನಿಂದ ಸೂರ್ಯನ ಸುತ್ತ ತಿರುಗ್ತಾನೆ. ಏನ್ ಮಾಡೋದು ಹೇಳಿ, ಜನ ಚೇಂಜ್ ಕೇಳ್ತಾರೆ ಅಲ್ವಾ !
ಸೌರವ್ಯೂಹದಲ್ಲಿ ಅತೀ ಹೆಚ್ಚು ತಾಪಮಾನ ಹೊಂದಿರುವ ಕ್ರೆಡಿಟ್ ನಮ್ಮ ಶುಕ್ರನಿಗೆ ಸೇರಬೇಕು. ಬುಧ ಸೂರ್ಯನ ಪಕ್ಕದಲ್ಲೇ ಇದ್ದರೂ, ಬುಧನಿಗಿಂತಲೂ ತಾಪಮಾನ ಹೆಚ್ಚಿರುವ ಗ್ರಹ ಶುಕ್ರ. ಅದಕ್ಕೆ ಕಾರಣ ಶೇಕಡಾ ತೊಂಬತ್ತೈದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಇರುವುದು.
ಇನ್ನು ಶುಕ್ರನಲ್ಲಿರುವ ಗುರುತ್ವಾಕರ್ಷಣ ಬಲ ಹೆಚ್ಚು ಕಡಿಮೆ ಭೂಮಿಯಷ್ಟೇ ಇದ್ದರೂ, ಭೂಮಿಗಿಂತ ಪವರ್ಫುಲ್ ಇಲ್ಲ. ಭೂಮಿಗಿಂತ ಸ್ವಲ್ಪ ದುರ್ಬಲ ಗುರುತ್ವ ಶುಕ್ರನಿಗಿದೆ.
ನನಗೆ ಶುಕ್ರ ಯಾಕೆ ಇಷ್ಟ ಅಂತ ಹೇಳಲೇ? ಭೂಮಿ ಮೇಲೆ ನೀವು 100ಕೆಜಿ ತೂಗಿದರೆ ಶುಕ್ರನ ಮೇಲೆ 91 ಕೆಜಿ ತೂಗ್ತಿರಾ. ಒಂದು ಕೆಜಿ ಇಳಿಸೋಕೆ ಎಷ್ಟೆಲ್ಲ ಕಸರತ್ತು ಮಾಡ್ಬೇಕಲ್ವಾ ಭೂಮಿ ಮೇಲೆ, ಅದೇ ಶುಕ್ರನ ಹತ್ತಿರ ಬಂದಾಗಿನಿಂದ ನಾನಂತೂ 44 - 45 ಕೆಜಿ ಆಗ್ಬಿಟ್ಟಿದೀನಿ ! ಬಳುಕುವ ಬಳ್ಳಿ ಅಂದರೂ ತಪ್ಪಿಲ್ಲ ನೋಡಿ.
ಇನ್ನು ಪುರಾಣ, ಜ್ಯೋತಿಷ್ಯದಲ್ಲಿ ಶುಕ್ರನು ನವಗ್ರಹಗಳಲ್ಲಿ ಒಬ್ಬನು.
ಆದರೆ ನನಗೆ ಭಯವಾಗ್ತಿರೋದು ಬೇರೆ ವಿಷಯಕ್ಕೆ. ಗಂಡಸರಿಗೆ ತಲೆಯಲ್ಲಿ ಎರಡು ಸುಳಿಯಿದ್ದರೆ ಇಬ್ಬರು ಹೆಂಡತಿಯರ ಯೋಗ ಅಂತಾರೆ. ಶುಕ್ರನಿಗೂ ಎರಡು ಸುಳಿಗಳಿವೆ. ಮತ್ಯಾರು ನನಗೆ ಸವತಿಯಾಗುತ್ತಾಳೋ ಅನ್ನೋ ಸಂಕಟ. ನಾನಂತೂ ಶುಕ್ರನನ್ನು ಬಿಟ್ಟು ಕೊಡಲಾರೆ.
ಇದಿಷ್ಟು ನನ್ನ ಶುಕ್ರನ ಕಥೆ. ಇಷ್ಟವಾಗಿದ್ದರೆ ಅಭಿಪ್ರಾಯ ತಿಳಿಸಿ.
